ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದೇಶದೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹದಗೆಡುತ್ತಿರುವ ನಡುವೆಯೇ ಭಾರತೀಯ ವಿದೇಶಾಂಗ ಇಲಾಖೆಯು (MEA) ಒಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಬಾಂಗ್ಲಾದೇಶದಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು (IVAC) ಬುಧವಾರ ಮುಚ್ಚಲಾಗಿದೆ.
ಬಾಂಗ್ಲಾದೇಶದ ಕೆಲವು ನಾಯಕರು ಮತ್ತು ಅಸಾಮಾಜಿಕ ಶಕ್ತಿಗಳಿಂದ ನಿರಂತರವಾಗಿ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಢಾಕಾದ ಜಮುನಾ ಫ್ಯೂಚರ್ ಪಾರ್ಕ್‌ನಲ್ಲಿರುವ ಈ ವೀಸಾ ಕೇಂದ್ರವು ಬುಧವಾರ ಮಧ್ಯಾಹ್ನ ೨:೦೦ ಗಂಟೆಯಿಂದ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಸಲ್ಲಿಕೆಯಾಗಿರುವ ಮತ್ತು ಪರಿಶೀಲನೆಯಲ್ಲಿರುವ ಅರ್ಜಿಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ಅಸುರಕ್ಷಿತ ವಾತಾವರಣವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೇ ವಿಷಯವಾಗಿ ಬುಧವಾರ ಬೆಳಗ್ಗೆ ಭಾರತದಲ್ಲಿನ ಬಾಂಗ್ಲಾದೇಶದ ಹೈಕಮಿಷನರ್‌ಗೆ ವಿದೇಶಾಂಗ ಇಲಾಖೆಯು ಸಮನ್ಸ್ ಜಾರಿ ಮಾಡಿದೆ. ಢಾಕಾದಲ್ಲಿರುವ ಭಾರತೀಯ ಅಧಿಕಾರಿಗಳು ಮತ್ತು ವೀಸಾ ಕೇಂದ್ರಕ್ಕೆ ಕಿಡಿಗೇಡಿಗಳು ತೊಂದರೆ ನೀಡಲು ಪ್ರಯತ್ನಿಸುತ್ತಿರುವ ಬಗ್ಗೆ ವಿವರಣೆ ಕೇಳಲಾಗಿದೆ.
“ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಶಿಷ್ಟಾಚಾರದ ಅನ್ವಯ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತೀಯ ಮಿಷನ್‌ಗೆ ಮತ್ತು ಅಲ್ಲಿನ ಸಿಬ್ಬಂದಿಗೆ ಸೂಕ್ತ ಭದ್ರತೆ ನೀಡುತ್ತದೆ ಎಂದು ನಾವು ನಂಬುತ್ತೇವೆ” ಎಂದು ವಿದೇಶಾಂಗ ಇಲಾಖೆ ಹೇಳಿದೆ. ಹೈಕಮಿಷನರ್‌ಗೆ ಸಮನ್ಸ್ ನೀಡಿದ ಕೆಲವೇ ಗಂಟೆಗಳಲ್ಲಿ ವೀಸಾ ಕೇಂದ್ರವನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಲಾಗಿದೆ.
