ಬೆಂಗಳೂರು : ಭಾರತದ ಅಕ್ರಮ ವಲಸಿಗರನ್ನು ಕೈದಿಗಳಂತೆ ನಡೆಸಿಕೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕನಕಪುರದಲ್ಲೀ ಈ ಕುರಿತು ಮಾತನಾಡಿದ ಅವರು, ವಲಸಿಗರು ಮನುಷ್ಯರೇ. ಪ್ರಾಣಿಗಳಲ್ಲ. ಅವರನ್ನು ಭೀಕರ ಅಪರಾಧಿಗಳಂತೆ ಕೈಕಾಲಿಗೆ ಕೋಳ ಹಾಕಿ ಕರೆತಂದಿದ್ದು ತಪ್ಪು. ಅಮೆರಿಕದಂತಹ ಮುಂದುವರೆದ ದೇಶದಿಂದ ಇಂಥಾ ನಡೆ ಖಂಡನೀಯ ಎಂದು ನುಡಿದರು.
ಕೇಂದ್ರ ಸರ್ಕಾರ ಬಜೆಟ್ ಬಳಿಕ ರಾಜ್ಯ ಸರ್ಕಾರವು ಬಜೆಟ್ ಘೋಷಿಸಲು ಮುಂದಾಗಿದ್ದು, ಎರಡ್ಮೂರು ದಿನಗಳಲ್ಲಿ ಬಜೆಟ್ ನ ದಿನಾಂಕ ಘೋಷಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಜೊತೆಗೆ, ಬಜೆಟ್ ಗೆ ಏನೆಲ್ಲಾ ಮಾಡಬೇಕೋ ಎಲ್ಲಾ ತಯಾರಿಯಾಗಿದೆ. ಈಗಾಗಲೇ ಕೇಂದ್ರದ ಬಜೆಟ್ ನೋಡಿದ್ದೇವೆ, ಕರ್ನಾಟಕಕ್ಕೆ ಏನೆಲ್ಲಾ ಸಿಕ್ತು ಅಂತ ಕೂಡ ಗೊತ್ತಾಗಿದೆ. ಇನ್ನೇನು ಎರಡು ಮೂರು ದಿನಗಳಲ್ಲಿ ಬಜೆಟ್ ದಿನಾಂಕವನ್ನು ಘೋಷಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಹೊರೆ ಉಂಟಾಗಿದ್ದು, ಇದರಿಂದ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಸರ್ಕಾರ ನೀಡಿರುವ ದೊಡ್ಡ ಶಕ್ತಿ, ಅದನ್ನು ಹೊರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೇ ರಾಜ್ಯದ ಜನರಿಗೆ ಆಗುತ್ತಿದ್ದ ಹೋರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ, ಈ ಮೂಲಕ ವಿದ್ಯುತ್, ಬಸ್ ಟಿಕೆಟ್, ಎರಡು ಸಾವಿರ ಹಣ, ನಿರುದ್ಯೋಗಿಗಳಿಗೆ ಹಣವನ್ನು ನೀಡುವ ಮೂಲಕ ಜನರ ಬದುಕು ಬೆಳಕಾಗಿದೆ. ಇದನ್ನು ಹೊರೆ ಎಂದು ಹೇಗೆ ಹೇಳಲು ಸಾದ್ಯ ಎಂದು ಪ್ರಶ್ನಿಸಿದರು