ದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದು, ಡಿಸೆಂಬರ್ 4 ರಂದು ಹೊಸದಿಲ್ಲಿಗೆ ಆಗಮಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅವರನ್ನು ಪ್ರೀತಿ ಮತ್ತು ಉಲ್ಲಾಸದಿಂದ ಆಲಂಗಿಸಿ ಸ್ವಾಗತಿಸಿದರು. ಇಬ್ಬರು ಜಾಗತಿಕ ನಾಯಕರ ನಡುವಿನ ಬಾಂಧವ್ಯವು ರಾಜತಾಂತ್ರಿಕ ಗಡಿಗಳನ್ನು ಮೀರಿದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ಸತ್ಯ.
ಭಾರತದ ಪ್ರವಾಸದಲ್ಲಿರುವ ಪುಟಿನ್ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಅಲ್ಲಿ ತಮ್ಮ ಆತ್ಮೀಯ ಸ್ನೇಹಿತರನ್ನು ಹಾಡಿ ಹೊಗಳುವುದರಲ್ಲಿ ನಿರತರಾಗಿದ್ದರು. ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ, ಪುಟಿನ್ ಅವರು ಮೋದಿ ಮತ್ತು ತಮ್ಮ ನಡುವಿನ ಬಾಂಧವ್ಯವನ್ನು ವಿವರಿಸುತ್ತಾ, “ಪ್ರಧಾನಿ ಮೋದಿ ಭಾರತದಲ್ಲಿ ಇರುವುದು ಭಾರತೀಯರ ಅದೃಷ್ಟ” ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದು ತಮಗೆ ಬಹಳ ಸಂತೋಷ ನೀಡುವ ವಿಷಯವಾಗಿದೆ. ನಮ್ಮಿಬ್ಬರ ನಡುವೆ ಹೆಚ್ಚಿನ ವಿಶ್ವಾಸ ಮತ್ತು ಸ್ನೇಹಪರ ಸಂಬಂಧವಿದೆ. ಮೋದಿ ಒಬ್ಬ ಪ್ರಮಾಣಿಕ ಮತ್ತು ವಿಶ್ವಾಸಾರ್ಹ ವ್ಯಕ್ತಿ ಎಂದು ರಷ್ಯಾ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಮೋದಿಯವರು ಭಾರತದಲ್ಲಿ ಬದುಕಿರುವುದು ಮತ್ತು ಉಸಿರಾಡುತ್ತಿರುವುದು ಮತ್ತು ಭಾರತಕ್ಕೆ ಮೋದಿಯಂತಹ ಸಮರ್ಥ ವ್ಯಕ್ತಿ ದೊರೆತಿರುವುದಕ್ಕೆ ಭಾರತೀಯರು ಬಹಳ ಅದೃಷ್ಟವಂತರು ಎಂದು ಪುಟಿನ್ ಹಾಡಿಹೊಗಳಿದರು.
ಅಲ್ಲದೆ, ಪ್ರಧಾನಿ ಮೋದಿಯವರು ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ವಿಶಾಲವಾದ ವ್ಯಾಪ್ತಿಯಲ್ಲಿ ಬಲಪಡಿಸಲು ಬದ್ಧರಾಗಿದ್ದಾರೆ ಎಂದು ಪುಟಿನ್ ಹೇಳಿದರು. ವಿಶೇಷವಾಗಿ ಆರ್ಥಿಕ ಸಹಕಾರ, ರಕ್ಷಣೆ, ಮಾನವೀಯ ನೆರವು ಹಾಗೂ ಉನ್ನತ ತಂತ್ರಜ್ಞಾನ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಮೋದಿ ಅವರ ಬದ್ಧತೆ ಅಚಲವಾಗಿದೆ. ಅವರೊಂದಿಗಿನ ಭೇಟಿ ಯಾವಾಗಲೂ ಬಹಳ ಆಸಕ್ತಿದಾಯಕವಾಗಿರುತ್ತದೆ ಎಂದೂ ರಷ್ಯಾ ಅಧ್ಯಕ್ಷರು ತಿಳಿಸಿದ್ದಾರೆ.
