Home ರಾಜಕೀಯ ಲೋಕಾಯುಕ್ತ | ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ಅಶೋಕ ತಮ್ಮ ಕಾಲ...

ಲೋಕಾಯುಕ್ತ | ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ಅಶೋಕ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ: ಸಿದ್ದರಾಮಯ್ಯ

0

ಬೆಂಗಳೂರು: ಗೌರವಾನ್ವಿತ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರ ವರದಿಯನ್ನೇ ತಪ್ಪಾಗಿ ಅರ್ಥೈಸಿಕೊಂಡು, ಬಿಜೆಪಿಯ ಭ್ರಷ್ಟಾಚಾರದ ಆರೋಪವನ್ನು ಹಾಲಿ ಸರ್ಕಾರದ ಮೇಲೆ ಹೊರಿಸಲು ಯತ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಶೋಕ್ ಅವರು “ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ” ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

ಉಪಲೋಕಾಯುಕ್ತರ ವರದಿಗೆ ಸ್ಪಷ್ಟನೆ

ಗೌರವಾನ್ವಿತ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು 2019ರ ನವೆಂಬರ್‌ನಲ್ಲಿ ನೀಡಿದ ವರದಿಯಲ್ಲಿ ರಾಜ್ಯದಲ್ಲಿ ಶೇಕಡಾ 63ರಷ್ಟು ಭ್ರಷ್ಟಾಚಾರ ಇದೆ ಎಂದು ಉಲ್ಲೇಖಿಸಲಾಗಿತ್ತು. ಅದೇ ವರದಿಯನ್ನು ಆಧರಿಸಿ ಬಿ. ವೀರಪ್ಪನವರು ಇಂದು ಮಾತನಾಡಿದ್ದಾರೆ. ಆದರೆ ಆ ವರದಿಯು ನೀಡುವ ವೇಳೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೇ ಆಡಳಿತದಲ್ಲಿತ್ತು. ಆರ್. ಅಶೋಕ್ ಅವರು ಈ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ಸರ್ಕಾರಕ್ಕೆ ಕಟ್ಟಲು ಹೋಗಿ ಮುಖಭಂಗ ಅನುಭವಿಸಿದ್ದಾರೆ ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ.

ಬಿಜೆಪಿ ಅವಧಿಯ ಹಗರಣಗಳ ಪಟ್ಟಿ

ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೆರಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಅವುಗಳ ದೀರ್ಘ ಪಟ್ಟಿಯನ್ನು ಮುಂದಿಟ್ಟಿದ್ದಾರೆ:

ಕೋವಿಡ್ ಲೂಟಿ: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಬೀದಿಬೀದಿಯಲ್ಲಿ ಸಾಯುತ್ತಿದ್ದಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಐಸಿಯು ಖರೀದಿ ಸೇರಿದಂತೆ ಎಲ್ಲದರಲ್ಲೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು.

40% ಕಮಿಷನ್: ಪ್ರತಿ ಇಲಾಖೆಯಲ್ಲಿಯೂ ಕನಿಷ್ಠ ಶೇ. 40ರಷ್ಟು ಕಮಿಷನ್ ವ್ಯವಸ್ಥೆ ಚಾಲ್ತಿಯಲ್ಲಿ ಇತ್ತು.

ಸಂತೋಷ್ ಪಾಟೀಲ್ ಆತ್ಮಹತ್ಯೆ: ಅಂದಿನ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಕಾಟಕ್ಕೆ ಬೇಸತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದರು.

ಭದ್ರಾ ಮೇಲ್ದಂಡೆ ಅಕ್ರಮ: ನೀರಾವರಿ ಇಲಾಖೆಯ ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ನಿಗಮದಲ್ಲಿ ಸುಮಾರು ₹20,000 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್ ಅವರೇ ಹಾಲಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದರು.

ಪಿಎಸ್‌ಐ ಹಗರಣ: ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆದು ನಿಮ್ಮ ಹಲವು ಬಂಧು ಮಿತ್ರರು ಜೈಲು ಸೇರಿ ಬಂದಿದ್ದಾರೆ. ಇವೆಲ್ಲಾ ಮರೆತು ಹೋಯಿತೇ? ಹೀಗೆ ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು ಎಂದು ಸಿಎಂ ಟೀಕಿಸಿದರು.

ಭ್ರಷ್ಟಾಚಾರದಲ್ಲಿ ಭಾರತಕ್ಕೆ 96ನೇ ಸ್ಥಾನ

ಇಂದು “ನ ಖಾವೂಂಗಾ, ನ ಖಾನೆದೂಂಗ” (ನಾವು ತಿನ್ನುವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ) ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿದೆ. ಇದಕ್ಕೆ ಟ್ರಾನ್ಸ್‌ಪರೆಸಿ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿರುವ ಜಾಗತಿಕ ಭ್ರಷ್ಟಾಚಾರಯುಕ್ತ ದೇಶಗಳ ಪಟ್ಟಿಯಲ್ಲಿ ಭಾರತ 96ನೇ ಸ್ಥಾನದಲ್ಲಿ ಇರುವುದು ಸಾಕ್ಷಿ. ಮೊದಲು ಆರ್. ಅಶೋಕ್ ಅವರು ತಮ್ಮ ಪ್ರಧಾನ ಸೇವಕರ ಬಳಿ ಭಾರತದ ಈ ದಯನೀಯ ಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಯನ್ನೆತ್ತಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಗೌರವಾನ್ವಿತ ಬಿ. ವೀರಪ್ಪನವರ ಮಾತುಗಳನ್ನು ನಮ್ಮ ಸರ್ಕಾರಕ್ಕೆ ಅನ್ವಯಿಸಿ ಹೇಳುವ ಆರ್. ಅಶೋಕ್ ಅವರ “ಮತಿಗೇಡಿತನಕ್ಕೆ” ಏನೆನ್ನಬೇಕು? ನಮ್ಮ ಸರ್ಕಾರದಲ್ಲಿ ನೇಮಕಾತಿಯಿಂದ ಹಿಡಿದು ವರ್ಗಾವಣೆಯ ವರೆಗೆ ಎಲ್ಲವನ್ನೂ ಪಾರದರ್ಶಕವಾಗಿಸುವ, ಯಾವುದೇ ರೀತಿಯ ಹಣ, ಅಧಿಕಾರದ ದುರ್ಬಳಕೆಯಾಗದಂತೆ ತಡೆಯುವ ಪ್ರಯತ್ನ ಜಾರಿಯಲ್ಲಿದೆ.

ಆರ್. ಅಶೋಕ್ ಅವರೇ, ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಛ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ, ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.

You cannot copy content of this page

Exit mobile version