ದೇಶದ ವಿದೇಶಿ ಸಾಲ ಬರೋಬ್ಬರಿ 72 ಲಕ್ಷ ಕೋಟಿ ರೂಪಾಯಿಗೆ ಏರಿಕೆ: ಕಳವಳಕಾರಿ ವರದಿ ನೀಡಿದ ಆರ್‌ಬಿಐ

ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದ ಸಾಲದ ಹೊರೆ ದಿನೇದಿನೆ ಗಗನಕ್ಕೇರುತ್ತಿದೆ. ಕೇಂದ್ರ ಸರ್ಕಾರವು ಮಿತಿಮೀರಿ ಸಾಲ ಮಾಡುತ್ತಿರುವುದರಿಂದ ದೇಶದ ಮೇಲಿನ ಒಟ್ಟು ಸಾಲದ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಬಿಡುಗಡೆ ಮಾಡಿರುವ ತಾಜಾ ಅಂಕಿ-ಅಂಶಗಳ ಪ್ರಕಾರ, 2025ರ ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ ಭಾರತದ ವಿದೇಶಿ ಸಾಲವು 2,630 ಕೋಟಿ ಡಾಲರ್‌ಗಳಷ್ಟು (ಸರಿಸುಮಾರು 2.18 ಲಕ್ಷ ಕೋಟಿ ರೂಪಾಯಿ) ಹೆಚ್ಚಾಗಿದ್ದು, ಪ್ರಸ್ತುತ ಒಟ್ಟು ವಿದೇಶಿ ಸಾಲದ ಪ್ರಮಾಣ ಬರೋಬ್ಬರಿ 72 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಹೋಲಿಸಿದರೆ ವಿದೇಶಿ ಸಾಲದ ಅನುಪಾತವು 2025ರ ಮಾರ್ಚ್‌ನಲ್ಲಿದ್ದ ಶೇಕಡಾ 19.8 ರಿಂದ 2026ರ ಮಾರ್ಚ್ ಅಂತ್ಯದ ವೇಳೆಗೆ ಶೇಕಡಾ 20.8 ಕ್ಕೆ ಏರಿಕೆಯಾಗಿದೆ.

ಭಾರತೀಯ ರೂಪಾಯಿ ಸೇರಿದಂತೆ ವಿಶ್ವದ ಇತರ ಪ್ರಮುಖ ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್ ಮೌಲ್ಯ ಹೆಚ್ಚಾದ ಕಾರಣ ಉಂಟಾದ ಮೌಲ್ಯಮಾಪನ ಪರಿಣಾಮ (ವ್ಯಾಲ್ಯೂಯೇಷನ್ ಎಫೆಕ್ಟ್) 2,460 ಕೋಟಿ ಡಾಲರ್‌ಗಳಷ್ಟಾಗಿದೆ. ಒಂದು ವೇಳೆ ಈ ಕರೆನ್ಸಿ ಮೌಲ್ಯ ವ್ಯತ್ಯಾಸದ ಪ್ರಭಾವವನ್ನು ಹೊರತುಪಡಿಸಿ ಲೆಕ್ಕ ಹಾಕಿದರೆ, ಭಾರತದ ವಿದೇಶಿ ಸಾಲವು ಕೇವಲ 2,630 ಕೋಟಿ ಡಾಲರ್ ಮಾತ್ರವಲ್ಲದೆ ಬರೋಬ್ಬರಿ 5,100 ಕೋಟಿ ಡಾಲರ್‌ಗಳಷ್ಟು ಹೆಚ್ಚಾಗುತ್ತಿತ್ತು ಎಂದು ಆರ್‌ಬಿಐ ವರದಿ ತಿಳಿಸಿದೆ.

2026ರ ಮಾರ್ಚ್ ಅಂತ್ಯದ ವೇಳೆಗೆ ಭಾರತ ಹೊಂದಿರುವ ಒಟ್ಟು ವಿದೇಶಿ ಸಾಲದಲ್ಲಿ ಅಮೆರಿಕನ್ ಡಾಲರ್ ರೂಪದಲ್ಲಿರುವ ಸಾಲವೇ ಶೇಕಡಾ 55.5 ರಷ್ಟು ಪಾಲಿನೊಂದಿಗೆ ಅತ್ಯಂತ ದೊಡ್ಡದಾಗಿದೆ. ಆ ನಂತರದ ಸ್ಥಾನಗಳಲ್ಲಿ ಭಾರತೀಯ ರೂಪಾಯಿ (ಶೇ. 29.4), ಜಪಾನೀಸ್ ಯೆನ್ (ಶೇ. 6.4), ಎಸ್‌ಡಿಆರ್ (ಶೇ. 4.3) ಮತ್ತು ಯುರೋ (ಶೇ. 3.7) ರೂಪದ ಸಾಲಗಳಿವೆ.

ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ದೀರ್ಘಕಾಲಿಕ ಸಾಲದ ಪ್ರಮಾಣವು 2025ರ ಮಾರ್ಚ್‌ಗೆ ಹೋಲಿಸಿದರೆ 1,160 ಕೋಟಿ ಡಾಲರ್ ಹೆಚ್ಚಾಗಿದ್ದು, ಪ್ರಸ್ತುತ 61,350 ಕೋಟಿ ಡಾಲರ್‌ಗೆ ತಲುಪಿದೆ. ಹಾಗೆಯೇ, ಒಟ್ಟು ವಿದೇಶಿ ಸಾಲದಲ್ಲಿ ಒಂದು ವರ್ಷದ ಅವಧಿಯ ಅಲ್ಪಾವಧಿ ಸಾಲದ ಪ್ರಮಾಣವು ಕೂಡ ಶೇಕಡಾ 18.3 ರಿಂದ ಶೇಕಡಾ 19.6 ಕ್ಕೆ ಏರಿಕೆಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು