ನ್ಯೂಯಾರ್ಕ್ ಮೇಯರ್ ಝಹ್ರಾನ್ ಮಮದಾನಿ ಅವರು ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್‌ಗೆ ಬೆಂಬಲ ಸೂಚಿಸಿ ಬರೆದಿರುವ ಪತ್ರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಟುವಾಗಿ ಟೀಕಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ನ್ಯಾಯಾಂಗದ ಸ್ವಾತಂತ್ರ್ಯವನ್ನು ಅಲ್ಲಿನ ಜನಪ್ರತಿನಿಧಿಗಳು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದರು.
ಅಧಿಕಾರದಲ್ಲಿರುವ ವ್ಯಕ್ತಿಗಳು ಪಕ್ಷಪಾತಿ ಧೋರಣೆಯಿಂದ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ. ಅಂತಹ ಹೇಳಿಕೆಗಳ ಬದಲು, ಅವರಿಗೆ ವಹಿಸಲಾದ ಜವಾಬ್ದಾರಿಗಳ ಮೇಲೆ ಗಮನ ಹರಿಸುವುದು ಉತ್ತಮ ಎಂದು ಅವರು ಕಿಡಿನುಡಿದರು.
ಉಮರ್ ಖಾಲಿದ್ ಅವರ ಪೋಷಕರು ಕಳೆದ ತಿಂಗಳು ಅಮೆರಿಕದಲ್ಲಿ ನ್ಯೂಯಾರ್ಕ್ ಮೇಯರ್ ಝಹ್ರಾನ್ ಮಮದಾನಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮಮದಾನಿ ಅವರು ಖಾಲಿದ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಕೈಬರಹದ ಪತ್ರವೊಂದನ್ನು ನೀಡಿದ್ದರು.
2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಉಮರ್ ಖಾಲಿದ್ ಅವರಿಗೆ ಯುಎಪಿಎ (UAPA) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಂದಿನಿಂದ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ.
