ನವದೆಹಲಿ : 2024ರಲ್ಲಿ ಅಮೋಘ ಲಯದಲ್ಲಿದ್ದ ಭಾರತ ತಂಡದ ಅಗ್ರಮಾನ್ಯ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಐಸಿಸಿ ಪುರುಷರ, ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ ಘೋಷಿಸಿದೆ.
ಟಿ20 ವಿಶ್ವಕಪ್‌ನಲ್ಲೂ ಬೂಮ್ರಾ ಅವರ ಅಮೋಘ ಬೌಲಿಂಗ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅಮೆರಿಕ–ವೆಸ್ಟ್ ಇಂಡೀಸ್‌ನಲ್ಲಿ ಈ ವರ್ಷದ ಮಧ್ಯದಲ್ಲಿ ನಡೆದ ಆ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿದ್ದರು.
ಬೆನ್ನಿನ ಗಾಯದಿಂದ ಚೇತರಿಸಿಕೊಂಡು 2023ರಲ್ಲಿ ತಂಡಕ್ಕೆ ಬೂಮ್ರಾ ವಾಪಸ್ ಆಗಿದ್ದರು. ಬೂಮ್ರಾ ಅವರು ಈ ವರ್ಷ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಈ ವರ್ಷ ಬೌಲರ್ ಒಬ್ಬರ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಅವರು 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ.