ರೂ. 1 ಲಕ್ಷ, ರೂ. 90 ಸಾವಿರ, ರೂ. 55 ಸಾವಿರ… ಇವು ಶುಕ್ರವಾರ ಭಾರತದ ವಿಮಾನ ಟಿಕೆಟ್ ದರಗಳು. ನಿರ್ವಹಣಾ ಲೋಪಗಳಿಂದಾಗಿ ನೂರಾರು ಇಂಡಿಗೊ (IndiGo) ವಿಮಾನ ಸೇವೆಗಳ ರದ್ದತಿ ಶುಕ್ರವಾರವೂ ಮುಂದುವರಿದ ಕಾರಣ ಪ್ರಯಾಣಿಕರು ತೀವ್ರ ತೊಂದರೆಗೊಳಗಾದರು. ಆದರೆ ಟಿಕೆಟ್ ದರಗಳು ಮಾತ್ರ ಆಕಾಶಕ್ಕೇರಿದವು. ಇತರ ದಿನಗಳಿಗೆ ಹೋಲಿಸಿದರೆ ಟಿಕೆಟ್ ದರಗಳನ್ನು 3ರಿಂದ 10 ಪಟ್ಟು ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದೆಹಲಿ-ಬೆಂಗಳೂರು ಟಿಕೆಟ್ ದರವು ರೂ. 1,02,000 ತಲುಪಿದ್ದರೆ, ಚೆನ್ನೈ-ದೆಹಲಿ ಟಿಕೆಟ್ ರೂ. 90,000, ಮತ್ತು ದೆಹಲಿ-ಮುಂಬೈ ಟಿಕೆಟ್ ರೂ. 54,222 ತಲುಪುವ ಮೂಲಕ ಪ್ರಯಾಣಿಕರಿಗೆ ಆಘಾತ ನೀಡಿತು. ಇತರ ಹಲವು ಏರ್‌ಲೈನ್‌ಗಳ ಟಿಕೆಟ್ ದರಗಳು ಸಹ ರೂ. 20 ಸಾವಿರದಿಂದ ರೂ. 40 ಸಾವಿರದವರೆಗೆ ಏರಿವೆ. ಮುಂಬೈ-ಶ್ರೀನಗರಕ್ಕೆ ಸಾಮಾನ್ಯವಾಗಿ ರೂ. 10 ಸಾವಿರ ಇರುತ್ತಿದ್ದ ಟಿಕೆಟ್ ದರವು ಏಕಾಏಕಿ ರೂ. 62 ಸಾವಿರಕ್ಕೆ ಏರಿದೆ. ಅದೇ ರೌಂಡ್ ಟ್ರಿಪ್‌ಗೆ (ಹೋಗಿಬರುವ ಪ್ರಯಾಣ) ಸುಮಾರು ರೂ. 92 ಸಾವಿರದವರೆಗೆ ಇದೆ.
ಶನಿವಾರದ ಪ್ರಯಾಣಕ್ಕಾಗಿ ದೆಹಲಿಯಿಂದ ಹೈದರಾಬಾದ್‌ಗೆ ಏರ್ ಇಂಡಿಯಾ ವಿಮಾನ ಟಿಕೆಟ್ ದರವು ರೂ. 33 ಸಾವಿರಕ್ಕೆ ತಲುಪಿದೆ. ಸಾಮಾನ್ಯ ದಿನಗಳಲ್ಲಿ ಇದು ರೂ. 5-7 ಸಾವಿರದ ನಡುವೆ ಇರುತ್ತಿತ್ತು. ಡಿಸೆಂಬರ್ 7ರಂದು ದೆಹಲಿ-ಚೆನ್ನೈ ಎಕಾನಮಿ ಕ್ಲಾಸ್‌ನ ಕನಿಷ್ಠ ಟಿಕೆಟ್ ದರ ರೂ. 53 ಸಾವಿರ ಮತ್ತು ದೆಹಲಿ-ಹೈದರಾಬಾದ್ ಕನಿಷ್ಠ ಟಿಕೆಟ್ ದರ ರೂ. 25 ಸಾವಿರ ತಲುಪಿದೆ.
ವಿಮಾನ ಸೇವೆಗಳ ನಿಲುಗಡೆಗೆ ಇಂಡಿಗೊ ಸಂಸ್ಥೆಯು ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದು, ಎಕ್ಸ್ (X) ವೇದಿಕೆಯಲ್ಲಿ ಸ್ಪಷ್ಟನೆ ನೀಡಿದೆ. “ಕ್ಷಮಿಸಿ, ನಾವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದು ಪ್ರಯಾಣಿಕರನ್ನು ಉದ್ದೇಶಿಸಿ ಹೇಳಿದೆ. ಡಿಸೆಂಬರ್ 5ರಿಂದ 15 ರ ನಡುವಿನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ್ದು, ಈ ಅಡಚಣೆಗಳಿಂದಾಗಿ ಅವುಗಳನ್ನು ರದ್ದು ಅಥವಾ ಮರುಹೊಂದಾಣಿಕೆ (reschedule) ಮಾಡಿಕೊಂಡರೆ ಸಂಪೂರ್ಣ ಮರುಪಾವತಿ ನೀಡುವುದಾಗಿ ಘೋಷಿಸಿದೆ.
