ಹೊಸ ದೆಹಲಿ: ಮೊಬೈಲ್ ಬಳಕೆದಾರರ ಮೇಲೆ ನಿಗಾ ಇರಿಸಲು ಅನುಕೂಲವಾಗುವಂತೆ, ಫೋನ್‌ಗಳಲ್ಲಿ ಉಪಗ್ರಹ ಆಧಾರಿತ ಲೊಕೇಷನ್ ಟ್ರ್ಯಾಕಿಂಗ್ (Satellite Location Tracking System) ವ್ಯವಸ್ಥೆಯನ್ನು ಸದಾ ಸಕ್ರಿಯವಾಗಿರಿಸಲು (Active) ಸ್ಮಾರ್ಟ್‌ಫೋನ್ ಕಂಪನಿಗಳ ಮೇಲೆ ಒತ್ತಡ ಹೇರಬೇಕೆಂಬ ಟೆಲಿಕಾಂ ಉದ್ಯಮದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಆದರೆ, ಇದರಿಂದ ವೈಯಕ್ತಿಕ ಗೌಪ್ಯತೆಗೆ ಭಂಗ ಉಂಟಾಗುತ್ತದೆ ಎಂಬ ಕಾರಣ ನೀಡಿ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ಆಪಲ್, ಗೂಗಲ್ ಮತ್ತು ಸ್ಯಾಮ್‌ಸಂಗ್ ಈ ಪ್ರಸ್ತಾವನೆಯನ್ನು ವಿರೋಧಿಸಿವೆ ಎಂದು ತಿಳಿದುಬಂದಿದೆ.
ತನಿಖೆಯ ಭಾಗವಾಗಿ ಕೇಂದ್ರ ತನಿಖಾ ಸಂಸ್ಥೆಗಳು ನಿರ್ದಿಷ್ಟ ಫೋನ್ ಸ್ಥಳಗಳನ್ನು ತಿಳಿಯಲು ಟೆಲಿಕಾಂ ಸಂಸ್ಥೆಗಳಿಗೆ ಕಾನೂನುಬದ್ಧ ಮನವಿಗಳನ್ನು ಸಲ್ಲಿಸಿದರೂ, ಅಗತ್ಯ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ನಿಖರವಾದ ಸ್ಥಳವನ್ನು ಗುರುತಿಸಲು ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಜಿಪಿಎಸ್ ತಂತ್ರಜ್ಞಾನವನ್ನು (GPS Technology) ಸಕ್ರಿಯಗೊಳಿಸಬೇಕಾಗುತ್ತದೆ. ಈ ತಂತ್ರಜ್ಞಾನವು ಉಪಗ್ರಹ ಸಿಗ್ನಲ್‌ಗಳು ಮತ್ತು ಸೆಲ್ಯುಲಾರ್ ಡೇಟಾವನ್ನು ಬಳಸಿಕೊಳ್ಳಬಲ್ಲದು. ಇದು ಮೊಬೈಲ್ ಫೋನ್ ಇರುವ ನಿರ್ದಿಷ್ಟ ಪ್ರದೇಶವನ್ನು ಗುರುತಿಸಲು ಸುಲಭವಾಗುತ್ತದೆ ಎಂದು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಅನ್ನು ಪ್ರತಿನಿಧಿಸುವ ಭಾರತೀಯ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ (COAI) ಸರ್ಕಾರಕ್ಕೆ ತಿಳಿಸಿದೆ.
ಜೂನ್‌ನಲ್ಲಿ, ಜಿಪಿಎಸ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸಲು ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರವು ಪತ್ರ ಬರೆಯಬೇಕು ಎಂದು ಸಿಒಎಐ ಸರ್ಕಾರವನ್ನು ಕೋರಿತ್ತು. ಬಳಕೆದಾರರು ನಿಷ್ಕ್ರಿಯಗೊಳಿಸಲು (Disable) ಅವಕಾಶವಿಲ್ಲದಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಷನ್ ಸೇವೆಗಳನ್ನು (Location Services) ಸದಾ ಸಕ್ರಿಯವಾಗಿರಿಸಲು ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಮಾತ್ರ ಸಾಧ್ಯ. ಆದರೆ ಇದು ಬಳಕೆದಾರರಿಗೆ ಕಡ್ಡಾಯವಾಗಿರಬಾರದು ಎಂದು ಆಪಲ್ ಮತ್ತು ಗೂಗಲ್ ಸರ್ಕಾರಕ್ಕೆ ಸ್ಪಷ್ಟಪಡಿಸಿವೆ ಎಂದು ತಿಳಿದುಬಂದಿದೆ.
