Home ವಿಶೇಷ ಇಂದಿರಾ ಪ್ರಿಯದರ್ಶಿನಿ ಎಂಬ ಧಾಡಸಿ ಹೆಣ್ಣು ಮಗಳು

ಇಂದಿರಾ ಪ್ರಿಯದರ್ಶಿನಿ ಎಂಬ ಧಾಡಸಿ ಹೆಣ್ಣು ಮಗಳು

0
ಪ್ರಧಾನಿಯಾಗಿ ಹೊಸತನದ ಭಾರತಕ್ಕೆ ಅಡಿಗಲ್ಲು ಹಾಕಿ ದೇಶವನ್ನು ನಿರ್ಭಿಡೆಯಿಂದ ಮುನ್ನಡೆಸಿದ ವರ್ಚಸ್ವೀ ರಾಜಕಾರಣಿ ಇಂದಿರಾ ಗಾಂಧಿಯವರಿಗೆ ಇಂದು ೧೦೫ ನೆಯ ಜನ್ಮ ದಿನ. ಅವರ ನೆನಪಲ್ಲಿ, ಪೀಪಲ್‌ ಮೀಡಿಯಾ ಕನ್ನಡ ಜಾಲತಾಣಕ್ಕೆ ಅವರ ವ್ಯಕ್ತಿತ್ತ್ವವನ್ನು ಹೃದಯದಿಂದ ಕಟ್ಟಿಕೊಟ್ಟಿದ್ದಾರೆ ಹಿರಿಯ ಲೇಖಕಿ ಉಷಾ ಕಟ್ಟೆಮನೆ

 
ನಮ್ಮ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗಿರುವ ಸ್ಥಾನಮಾನ ಏನು? ಎಂದು ಯಾರನ್ನಾದರೂ ಕೇಳಿ ನೋಡಿ. ತಕ್ಷಣ ‘ಆಕೆ ದೇವತೆ’ ಎಂಬ ಉತ್ತರ ರಪ್ಪನೆ ನಿಮ್ಮ ಮುಖಕ್ಕೆ ಅಪ್ಪಳಿಸುತ್ತದೆ. ಆದರೆ ವಾಸ್ತವ ಬೇರೆಯೇ ಇದೆ.


ಹಿಂದೂಧರ್ಮವನ್ನು ಒಳಗೊಂಡಂತೆ ಭಾರತೀಯ ಸಮಾಜದಲ್ಲಿ ಸ್ತ್ರೀಯರ ಬಗೆಗಿನ ಧೋರಣೆ ಎರಡು ನೆಲೆಗಳಲ್ಲಿ ವ್ಯಕ್ತವಾಗುತ್ತದೆ. ಒಂದು ದೇವತೆ, ಇನ್ನೊಂದು ದಾಸಿ. ದೇವತೆ ಎಂಬುದು ಆದರ್ಶ. ಅದು ವಾಸ್ತವದಲ್ಲಿ ನಿಜವಲ್ಲ. ದಾಸಿ ಎಂಬುದು ವಾಸ್ತವ. ಆಕೆ ಗಂಡನ ದಾಸಿ. ಅಥವಾ ಕುಟುಂಬದ ಸೊತ್ತು. ಆಕೆಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಅವಳು ಯಾರದೋ ಖಾಸಗಿ ಆಸ್ತಿ. ಧರ್ಮದ ಮುದ್ರೆಯೊತ್ತಿರುವ ಈ ರೂಢಿಗತ ಪರಂಪರಾಗತ ನಂಬಿಕೆಯನ್ನು ಮೀರಲೆತ್ನಿಸುವ ಯಾರೇ ಆಗಿದ್ದರೂ ಅವಳು ಗಂಡುಬೀರಿ. 
ಅಂತಹ ಒಬ್ಬ ಗಂಡುಬೀರಿಯೇ ಇಂದಿರಾಗಾಂಧಿ. ಆಕೆ ದುರ್ಗೆ.


ಇತಿಹಾಸದತ್ತ ಹೊರಳಿ ನಾನಿದನ್ನು ಬರೆಯುತ್ತಿಲ್ಲ. ನನ್ನ ವರ್ತಮಾನದಲ್ಲಿ ನಿಂತು ಅರುವತ್ತರ ದಶಕದ ಸಾಮಾಜಿಕ ಸ್ಥಿತಿಗತಿ ಹೇಗಿದ್ದಿರಬಹುದು ಎಂದು ಯೋಚಿಸಿ ಬರೆಯುತ್ತಿದ್ದೇನೆ. ಖಂಡಿತವಾಗಿಯೂ ಅದು ಇಂದಿನಷ್ಟು ಮಹಿಳಾ ವಿರೋಧಿಯಾಗಿರಲಿಲ್ಲ. ಆ ಕಾಲದ ಸಮಾಜ ಆಧುನಿಕ, ವಿದ್ಯಾವಂತ ಮಹಿಳೆಯನ್ನು ಅಚ್ಚರಿ, ಮೆಚ್ಚುಗೆ ಮತ್ತು ಒಂದು ರೀತಿಯ ಮತ್ಸರದ ಕಣ್ಣಿನಿಂದ ನೋಡುತ್ತಿತ್ತು. ಹಾಗಾಗಿಯೇ ಅಂದು ಇಂದಿರಾ ಗಾಂಧಿಯವರ ಚಾರಿತ್ರ್ಯ ವಧೆ ಮಾಡುವ ಕೃತ್ಯಕ್ಕೆ ಅಂದಿನ ಸಮಾಜ ಅಷ್ಟಾಗಿ ಮುಂದಾಗಲಿಲ್ಲ. ಪರಿಣಾಮವಾಗಿ ಬಲಿಷ್ಠ ಭಾರತವನ್ನು ಕಟ್ಟಲೆತ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕಿಯೊಬ್ಬಳು ದೊರೆತಳು. 

ಒಬ್ಬ ವ್ಯಕ್ತಿ ‌ಏನು ಅನ್ನುವುದು ಹೊರ ಜಗತ್ತಿಗೆ ಗೊತ್ತಾಗುವುದು ನಿರ್ಣಾಯಕ ಸಂದರ್ಭಗಳಲ್ಲಿ ಅವರು ‌ತೆಗೆದುಕೊಳ್ಳುವ ತೀರ್ಮಾನಗಳಿಂದ. ಹಾಗೆ ತೀರ್ಮಾನ ತೆಗೆದುಕೊಳ್ಳಲು ಕಾರಣವಾಗುವುದು ಅವರು ಬೆಳೆದು ಬಂದ ವಾತಾವರಣದಿಂದ. ಇಂದಿರಾ ಗಾಂಧಿಯವರ ಸದೃಢ ವ್ಯಕ್ತಿತ್ವ ರೂಪುಗೊಂಡಿದ್ದೇ ಅವರ ಬಾಲ್ಯದಿಂದ.


ಆಗರ್ಭ ಶ್ರೀಮಂತ ಮನೆತನದಲ್ಲಿ ಜವಾಹರ್ ಲಾಲ್ ಮತ್ತು ಕಮಲಾ ದಂಪತಿಗಳ ಏಕೈಕ ಕುಡಿಯಾಗಿ ಹುಟ್ಟಿದ ಇಂದಿರಾ ಸಮಾಜದ ಉನ್ನತ ಸ್ತರದ ಜನರ ಒಡನಾಟವನ್ನು ಸಹಜವಾಗಿಯೇ ಪಡೆದುಕೊಂಡಿದ್ದರು.‌ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳು ಅವರ ಮನೆಯಲ್ಲೇ ಸಿದ್ಧಗೊಳ್ಳುತ್ತಿದ್ದವು. ತಾಯ್ನಾಡು ದಾಸ್ಯದಲ್ಲಿದ್ದಾಗ ಶ್ರೀಮಂತಿಕೆಯ ಲೋಲುಪ್ತತೆಯಲ್ಲಿ ಮೈಮರೆಯದೆ ತನ್ನ ಸಮಸ್ತ ಆಸ್ತಿಯನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಧಾರೆಯೆರೆದುದನ್ನು ಆಕೆ ಕಣ್ಣಾರೆ ಕಂಡಿದ್ದಳು. ತಂದೆ ತಾಯಿ ಇಬ್ಬರೂ ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುತ್ತಾ ಜೈಲುಗಂಬಿಗಳ ಹಿಂದೆ ಬಂಧಿಯಾಗಿದ್ದಾಗ ಈ ಬಾಲೆ ಒಂಟಿಯಾಗಿ ತನ್ನೊಳಗೊಂದು ಲೋಕವನ್ನು ಸೃಷ್ಟಿಸಿಕೊಂಡು ಒಳಗಿಂದೊಳಗೆ ಸಮಾಜಮುಖಿ ವ್ಯಕ್ತಿತ್ವವೊಂದನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬರುತ್ತಿದ್ದಳು.


ಹೌದು. ಇಂದಿರಾ ಒಬ್ಬ ಪರಿಪೂರ್ಣ ಮಹಿಳೆ. ತಂದೆ ತಾಯಿಯರ ಮುದ್ದಿನ ಮಗಳು.‌ ರಾಜಕಾರಣಿಯಾಗಿ ದೇಶಕಂಡ ಅತ್ಯುತ್ತಮ ಪ್ರಧಾನಿ, ಮುತ್ಸದ್ದಿ.

ಆಕೆಯ‌ ದಾಂಪತ್ಯ ಬದುಕಿನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಆದರೆ ಕಾಶ್ಮೀರಿ ಪಂಡಿತೆಯಾದ ಈಕೆ ಫಿರೋಜ್ ಗಾಂಧಿ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇನ್ನೊಬ್ಬರಿಗಾಗಿ ಮಿಡಿಯುವ, ಸಂಭಾಳಿಸುವ, ಕರಗುವ, ಬಾಗುವ ಹೃದಯವುಳ್ಳವರು ಮಾತ್ರ ಪ್ರೀತಿ ಮಾಡಬಲ್ಲರು. ಇನ್ನೊಬ್ಬರಿಗಾಗಿ, ಇನ್ನೊಂದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬಲ್ಲರು. ಹಾಗೆಯೇ ಸಮಾನ ದೂರದಲ್ಲಿ ನಿಂತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು.


ರಾಜಕೀಯ ಖೈದಿಯಾಗಿ ಜೈಲಿನೊಳಗೆ ಇದ್ದಾಗ ತನ್ನಪ್ಪ ತನಗೆ ಬರೆಯುತ್ತಿದ್ದ ಪತ್ರಗಳಿಂದಲೇ ಭಾರತದ ಭೌಗೋಳಿಕ ಪರಿಚಯವನ್ನು ಪಡೆದಿದ್ದ ಇಂದಿರಾ 1967ರ ಲೋಕಸಭಾ ಚುನಾವಣೆಯ ಪ್ರಚಾರ ಸಮಯದಲ್ಲಿ ಅದನ್ನು ಪ್ರತ್ಯಕ್ಷ ಕಾಣುವ ಅವಕಾಶವನ್ನು ನಿರ್ಮಿಸಿಕೊಂಡರು. ಇಡೀ ಭಾರತವನ್ನು ತೆರೆದ ಜೀಪಿನಲ್ಲಿ ಸುತ್ತಿದರು. ನೂರಾರು ಕಡೆ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನ ಮಂತ್ರಿಗೆ ಇರುತ್ತಿದ್ದ ರಕ್ಷಣಾ ಕವಚವನ್ನು ಭೇದಿಸಿ ಜನಸಾಮಾನ್ಯರ ಜೊತೆ ಬೆರೆತರು. ಅವರ ಕೈ ಹಿಡಿದು ನೃತ್ಯ ಮಾಡಿದರು. ಸ್ಥಳೀಯ ಜನರ ಉಡುಗೆ ತೊಡುಗೆ ತೊಟ್ಟು ಜನ ಸಾಮಾನ್ಯರ ಜೊತೆ ನಲಿದಾಡಿದರು. ಗ್ರಾಮೀಣ ಭಾರತದ ಪರಿಚಯ ಮಾಡಿಕೊಂಡರು. ಜನರ ದನಿಗೆ ಕಿವಿಯಾದರು. ಅವರ ಅಂತರಂಗವನ್ನು ಗೆದ್ದರು. ಕಾಂಗ್ರೆಸ್ ಪಕ್ಷದ ಗೆಲುವಿನ ರೂವಾರಿಯಾಗಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು


ಹುಟ್ಟಿನಿಂದಲೇ ಬಂದ ಶ್ರೀಮಂತಿಕೆಯ ಗತ್ತು ಗೈರತ್ತುಗಳಿದ್ದವು. ಆಕ್ಸ್ಫರ್ಡ್ ನಲ್ಲಿ ಓದಿದ ಹಿನ್ನಲೆಯಿತ್ತು. ಹೆಸರಿನ ಮುಂದೆ ರವೀಂದ್ರನಾಥ ಠಾಗೋರ್ ಸೇರಿಸಿದ ಪ್ರಿಯದರ್ಶಿನಿ ಎಂಬ ವಿಶೇಷಣವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಎದೆಯಲ್ಲಿ ಇಂದಿರಮ್ಮ ಎಂಬ ದೇವತೆ ಪ್ರತಿಷ್ಠಾಪನೆಗೊಂಡಿದ್ದಳು.


ಎಲ್ಲವೂ ಇತ್ತು. ಆ ಕಾರಣದಿಂದಲೇ ಒಬ್ಬಂಟಿಯಾಗಿ ಮುನ್ನುಗ್ಗುವ ಛಾತಿಯಿತ್ತು. ಎಲ್ಲರನ್ನೂ ಎದುರು ಹಾಕಿಕೊಳ್ಳುವ ಧಾಡಸೀತನವಿತ್ತು. ಆಕೆಯ ಮನಸ್ಸಿನಲ್ಲಿ ಇದ್ದದ್ದು ʼಗರೀಬಿ ಹಟಾವೋʼ ಎಂಬ ಮಂತ್ರ ಮಾತ್ರ. ಹಾಗಾಗಿಯೇ ವಿತ್ತ ಮಂತ್ರಿಯೊಡನೆ ಸಮಾಲೋಚಿಸದೇ ಏಕಕಾಲದಲ್ಲಿ 14 ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಿದರು. ಬೊಕ್ಕಸಕ್ಕೆ ಹೊರೆಯಾಗಿದ್ದ ರಾಜಧನವನ್ನು ರದ್ದು ಗೊಳಿಸಿದರು. ಭಾರತಕ್ಕೆ ಮಗ್ಗುಲು ಮುಳ್ಳಾಗಿದ್ದ ಪಾಕಿಸ್ತಾನದ ಸೊಕ್ಕು ಮುರಿಯಲು ಬಾಂಗ್ಲಾ ಹೋರಾಟಗಾರರಿಗೆ ಸೇನಾ ಸಹಾಯ ನೀಡಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿದರು. ಬಾಂಗ್ಲಾ ದೇಶದ ಹುಟ್ಟಿಗೆ ಕಾರಣ ಕರ್ತರಾದರು.

ಮೇಲಿನ ಎಲ್ಲಾ ನಿರ್ಧಾರಗಳಲ್ಲಿ ಸರ್ವಾಧಿಕಾರಿಯ ಛಾಯೆಯಿದೆ. ಆದರೆ ಅದು ಬಡವರ ಪರವಾಗಿದ್ದವು. ನಮ್ಮ ಈಗಿನ ಪ್ರಧಾನಿಯವರಲ್ಲಿಯೂ ಸರ್ವಾಧಿಕಾರಿಯ ಗುಣಲಕ್ಷಣಗಳಿವೆ. ಆದರೆ ಇವರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಬಂಡವಾಳಶಾಹಿಗಳ ಪರವಾಗಿವೆ. ಮತ್ತು ಕೆಲವೇ ಜನರ ಕೈಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುತ್ತಿದೆ.

ತುರ್ತು ಪರಿಸ್ಥಿತಿ ಒಂದನ್ನು ಹೊರತುಪಡಿಸಿ ಇಂದಿರಾ ತೆಗೆದುಕೊಂಡ ಬಹುತೇಕ ಎಲ್ಲಾ ನಿರ್ಧಾರ ಮತ್ತು ಬದಲಾವಣೆಗಳು ದೂರದರ್ಶಿತ್ವ ಹೊಂದಿದ್ದವು.


ಇದೆಲ್ಲದರ ನಡುವೆಯೂ ಆಕೆ ತಾನೊಬ್ಬ ತಾಯಿ ಎಂಬುದನ್ನು ಮರೆಯಲಿಲ್ಲ. ಅಪ್ಪಟ ಗೃಹಿಣಿಯಾಗಿ ಸಂಜಯ್ ಮತ್ತು ರಾಜೀವ್ ಅವರನ್ನು ಕೈ ಹಿಡಿದು ಮುನ್ನಡೆಸಿದರು. ಅವರು ಆಯ್ದುಕೊಂಡ ದಾರಿಗೆ ತಾಯ್ತನ ಅಡ್ಡಿಯಾಗದ ಹಾಗೆ ಜಾಣ್ಮೆಯಿಂದ ನಿಭಾಯಿಸಿ ಕೊಂಡರು. ಕೊನೆ ಕೊನೆಗೆ ಸಂಜಯ್ ನಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಕಂಡರಾದರೂ ಸಂಜಯ್ ನ ದುರಂತ ಮರಣದಲ್ಲಿ ಅದೂ ಅಂತ್ಯವಾಯ್ತು. ಇನ್ನೊಬ್ಬ ಮಗ ರಾಜೀವ್ ಇಟಲಿ ಸಂಜಾತೆ ಸೋನಿಯಾಳನ್ನು ಮೆಚ್ಚಿ ಮದುವೆಯಾಗಲು ಮುಂದಾದಾಗ ತೆರೆದ ತೋಳುಗಳಿಂದ ಆಕೆಯನ್ನು ಕುಟುಂಬದೊಳಗೆ ಬರಮಾಡಿಕೊಂಡರು. ಒಳ್ಳೆಯ ಅತ್ತೆಯಾದರು.


ಇಂದಿರಾ ಪ್ರೀತಿಯ ಅಜ್ಜಿ ಕೂಡಾ ಹೌದು. ತನ್ನ ಮೊಮ್ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಜೊತೆಗೆ ಅವರು ಆಟವಾಡುತ್ತಿರುವ, ಅವರನ್ನು ಬೆನ್ನಮೇಲೆ ಹೊತ್ತುಕೊಂಡು ಕೂಸುಮರಿ ಮಾಡುವ ಅಸಂಖ್ಯ ಚಿತ್ರಗಳನ್ನು ನಾವು ಅಂತರ್ಜಾಲದಲ್ಲಿ ಕಾಣಬಹುದು. ಅದು ನಮಗೂ ತಂಗಾಳಿಯಂತೆ ಹಿತಾನುಭವವನ್ನು ನೀಡುತ್ತದೆ.

ಕುಟುಂಬದ ಮುಖ್ಯಸ್ಥಳಾಗಿ ನೋಡುವುದಾದರೆ ಇಂದಿರಾ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ. ಈ ಬಗ್ಗೆ ಸೋನಿಯಾ ವಿವರವಾಗಿ ತಮ್ಮ ʼರಾಜೀವ್ʼ ಪುಸ್ತಕದಲ್ಲಿ ಬರೆದಿದ್ದಾರೆ.‌ ಊಟದ ಹೊತ್ತಿಗೆ ಕುಟುಂಬದ ಎಲ್ಲಾ ಸದಸ್ಯರು ಊಟದ ಟೇಬಲ್ ಮುಂದೆ ಹಾಜರಿರ ಬೇಕಾಗಿತ್ತಂತೆ. ಮತ್ತು ಅಲ್ಲಿ ಕಡ್ಡಾಯವಾಗಿ ಹಿಂದಿ ಮಾತಾಡಲೇ ಬೇಕಾಗಿತ್ತಂತೆ. ತಾನು ಊಟದ ಟೇಬಲ್ ಮೇಲೆಯೇ ಹಿಂದಿ ಕಲಿತದ್ದು ಎಂದು ‌ಅವರು ಬರೆದುಕೊಂಡಿದ್ದಾರೆ.


ಇಂತಹ ನಿರ್ಭೀತ ವ್ಯಕ್ತಿತ್ವ ಹೊಂದಿರುವ ಕಾರಣದಿಂದಲೇ ಅಮೃತಸರದ ಸ್ವರ್ಣಮಂದಿರಕ್ಕೆ ಸೇನೆಯನ್ನು ನುಗ್ಗಿಸುವ ಧಾರ್ಷ್ಟ್ಯ ತೋರಿಸಿದ್ದು.‌ ಇದೇ ಕಾರಣದಿಂದಾಗಿಯೇ ಅವರು ಹಂತಕರ ಗುಂಡಿಗೆ ಎದೆಯೊಡ್ಡ ಬೇಕಾಯ್ತು. ಹೆಣ್ಣೊಬ್ಬಳು ತ್ಯಾಗಿಯಾಗುವುದು ಕುಟುಂಬದ ದೃಷ್ಟಿಯಿಂದ ಬಹುದೊಡ್ಡ ಮೌಲ್ಯ.‌ ಆದರೆ ಹುತಾತ್ಮಳಾಗಿ ಚರಿತ್ರೆಯ ಪುಟಗಳಲ್ಲಿ ಚಿರಸ್ಥಾಯಿಯಾಗುವುದು ಮುಂದಿನ ಜನಾಂಗಕ್ಕೆ ಒದಗುವ ದಾರಿದೀಪ.


ಉಷಾ ಕಟ್ಟೆಮನೆ

ಹಿರಿಯ ಲೇಖಕಿಯಾಗಿರುವ ಇವರು ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.  

You cannot copy content of this page

Exit mobile version