Home ದೇಶ ಕೇರಳ | ಶಿಶು ಮರಣ ದರ ಅತ್ಯಂತ ಕೆಳಮಟ್ಟಕ್ಕೆ: ಅಮೇರಿಕಾವನ್ನೂ ಮೀರಿಸಿದ ರಾಜ್ಯ

ಕೇರಳ | ಶಿಶು ಮರಣ ದರ ಅತ್ಯಂತ ಕೆಳಮಟ್ಟಕ್ಕೆ: ಅಮೇರಿಕಾವನ್ನೂ ಮೀರಿಸಿದ ರಾಜ್ಯ

0

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಶಿಶು ಮರಣ ದರ (IMR) ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಪ್ರತಿ ಸಾವಿರ ಶಿಶು ಜನನಗಳಿಗೆ ಕೇವಲ 5 ಸಾವುಗಳು ಮಾತ್ರ ಸಂಭವಿಸುತ್ತಿವೆ ಎಂದು ಮಾದರಿ ನೋಂದಣಿ ವ್ಯವಸ್ಥೆಯ (SRS) ವರದಿ ತಿಳಿಸಿದೆ. ಈ ದರವು ಅಮೆರಿಕಕ್ಕಿಂತಲೂ ಕಡಿಮೆ ಇದ್ದು, ಭಾರತದ ರಾಷ್ಟ್ರೀಯ ಸರಾಸರಿಗಿಂತ ಸುಮಾರು ಐದು ಪಟ್ಟು ಕಡಿಮೆಯಾಗಿದೆ. ಭಾರತದಲ್ಲಿ ಶಿಶು ಮರಣ ದರ ಸರಾಸರಿ 25% ರಷ್ಟಿದ್ದರೆ, ಕೇರಳದಲ್ಲಿ ಇದು ಕೇವಲ 5% ಇದೆ. ಅಮೆರಿಕದಲ್ಲಿ ಈ ದರವು 5.6% ಇದ್ದು, ಕೇರಳ ಅದನ್ನು ಹಿಂದಿಕ್ಕಿದೆ. ಇದು ಕೇರಳದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಮಹತ್ವದ ಯಶಸ್ಸು ಎಂದು ಈ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ.

ಕೇರಳದಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಇದೇ ರೀತಿಯ ಸುಧಾರಣೆ ಕಂಡುಬಂದಿದೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳಲ್ಲಿ ರಾಜ್ಯವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವಜಾತ ಶಿಶುಗಳ ಮರಣ ದರ (ನಿಯೋನೇಟಲ್ ಮಾರ್ಟಾಲಿಟಿ) ಸಹ 4% ಕ್ಕಿಂತ ಕಡಿಮೆ ಇದೆ. ದೇಶದ ಸರಾಸರಿ 18% ಇದ್ದರೆ, ಕೇರಳದಲ್ಲಿ ಇದು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟಕ್ಕೆ ತಲುಪಿದೆ. ಇದು ಕೇರಳದ ವೈದ್ಯಕೀಯ ಕ್ಷೇತ್ರವು ಎಷ್ಟು ಅಭಿವೃದ್ಧಿ ಹೊಂದಿದೆ ಎಂಬುದನ್ನು ತೋರಿಸುತ್ತದೆ.

ಈ ಯಶಸ್ಸಿಗೆ ಹಲವು ಕಾರಣಗಳಿವೆ. ಮಕ್ಕಳ ಜನನದ ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆಗಳು, ಎಲ್ಲಾ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು, ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿಶೇಷ ಯೋಜನೆಗಳು ಮತ್ತು ಗ್ರಾಮ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರ ಸಕ್ರಿಯ ಪಾತ್ರ ಪ್ರಮುಖವಾಗಿವೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ಸಾಕ್ಷರತೆ, ಲಸಿಕೆ, ವಿಶೇಷ ವೈದ್ಯಕೀಯ ಕಾರ್ಯಕ್ರಮಗಳಂತಹ ಬಹುಮುಖಿ ಕಾರ್ಯತಂತ್ರಗಳಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದರು. ಜನ್ಮಜಾತ ಹೃದಯ ದೋಷಗಳಿಗೆ ಚಿಕಿತ್ಸೆ ನೀಡಲು ವಿಶೇಷ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಈ ದರವನ್ನು ಮತ್ತಷ್ಟು ಕಡಿಮೆ ಮಾಡಿ ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟಕ್ಕೆ ತಲುಪುವ ಗುರಿಯನ್ನು ಕೇರಳ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

You cannot copy content of this page

Exit mobile version