Home ಬ್ರೇಕಿಂಗ್ ಸುದ್ದಿ ಹಣದುಬ್ಬರ ಮತ್ತೆ ಬೆಲೆ ಏರಿಕೆ ಶಾಕ್ ? ಇಂಧನ, ಆಹಾರ – ಬೆಲೆ ಏರಿಕೆ

ಹಣದುಬ್ಬರ ಮತ್ತೆ ಬೆಲೆ ಏರಿಕೆ ಶಾಕ್ ? ಇಂಧನ, ಆಹಾರ – ಬೆಲೆ ಏರಿಕೆ

ಮುಂಬೈ: ದೇಶದಲ್ಲಿ ಆಹಾರ ಸೇರಿದಂತೆ ಹಲವು ಸರಕುಗಳ ಬೆಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸಕ್ತ ಹಣಕಾಸು ವರ್ಷ 2026-27ರ ಚಿಲ್ಲರೆ ಹಣದುಬ್ಬರದ ಅಂದಾಜನ್ನು ಶೇ.5ರಿಂದ ಶೇ.5.2ಕ್ಕೆ ಪರಿಷ್ಕರಿಸಿದೆ.ಬುಧವಾರ ಅಕ್ಟೋಬರ್ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣದುಬ್ಬರದ ಮೇಲಿನ ಒತ್ತಡ ಮುಂದಿನ ದಿನಗಳಲ್ಲೂ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಆಹಾರ, ತೈಲ ಬೆಲೆಗಳ ಮೇಲೆ ಒತ್ತಡ

ನೈಋತ್ಯ ಮುಂಗಾರು ಮಳೆಯ ಕೊರತೆ, ಎಲ್ ನಿನೊ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಳಿತದಿಂದ ಪೂರೈಕೆ ಭಾಗದಲ್ಲಿ ಒತ್ತಡ ಉಂಟಾಗುವ ಸಾಧ್ಯತೆಯಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ. ತೈಲ ಹೊರತುಪಡಿಸಿ ಆಹಾರ ವಿಭಾಗದಲ್ಲಿನ ಹಲವು ಸರಕುಗಳ ಬೆಲೆಗಳ ಮೇಲೂ ಒತ್ತಡ ಹೆಚ್ಚುತ್ತಿರುವುದು ಗೋಚರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ, ಹಣದುಬ್ಬರದ ಪರಿಣಾಮ ಇತರ ವಲಯಗಳಿಗೂ ವ್ಯಾಪಿಸುತ್ತಿರುವ ಆರಂಭಿಕ ಸೂಚನೆಗಳು ಕಂಡುಬರುತ್ತಿವೆ. ಕೋರ್ ಹಣದುಬ್ಬರ ಏರಿಕೆಯಾಗಿರುವುದು ಹಾಗೂ ಗ್ರಾಹಕ ಬೆಲೆ ಸೂಚ್ಯಂಕ (CPI) ಬುಟ್ಟಿಯ ಹೆಚ್ಚಿನ ಸರಕುಗಳಲ್ಲಿ ಹಣದುಬ್ಬರ ಹೆಚ್ಚಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಯಾವ ತ್ರೈಮಾಸಿಕದಲ್ಲಿ ಎಷ್ಟು ಹಣದುಬ್ಬರ?

ಎಲ್ಲಾ ಅಂಶಗಳನ್ನು ಪರಿಗಣಿಸಿ 2026-27ನೇ ಸಾಲಿನ CPI ಆಧಾರಿತ ಚಿಲ್ಲರೆ ಹಣದುಬ್ಬರ ಶೇ.5.2ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

  • 2026-27ರ 2ನೇ ತ್ರೈಮಾಸಿಕ: ಶೇ.4.9
  • 3ನೇ ತ್ರೈಮಾಸಿಕ: ಶೇ.6.0
  • 4ನೇ ತ್ರೈಮಾಸಿಕ: ಶೇ.5.7
  • 2027-28ರ ಮೊದಲ ತ್ರೈಮಾಸಿಕ: ಶೇ.5.6

ಆದಾಗ್ಯೂ ಹಣದುಬ್ಬರದ ಅಪಾಯಗಳು ಎರಡೂ ದಿಕ್ಕುಗಳಲ್ಲಿ ಸಮತೋಲನದಲ್ಲಿವೆ ಎಂದು ಆರ್‌ಬಿಐ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗುವ 2027ರ ಮಾರ್ಚ್ ವೇಳೆಗೆ ಕೋರ್ ಹಣದುಬ್ಬರ ಶೇ.4.4ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್‌ನಲ್ಲಿ ಶೇ.4.8ಕ್ಕೆ ಏರಿಕೆ CPI ಆಧಾರಿತ ಚಿಲ್ಲರೆ ಹಣದುಬ್ಬರ ಜುಲೈ 2026ರಲ್ಲಿ ಶೇ.4.5ರಷ್ಟಿದ್ದರೆ, ಆಗಸ್ಟ್‌ನಲ್ಲಿ ಶೇ.4.8ಕ್ಕೆ ಏರಿಕೆಯಾಗಿದೆ. ಆಹಾರ ಮತ್ತು ಇಂಧನ ವಿಭಾಗಗಳಲ್ಲಿನ ಹಣದುಬ್ಬರ ಹೆಚ್ಚಳವೇ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಗಿದೆ. ಆರ್‌ಬಿಐನ ಈ ಪರಿಷ್ಕೃತ ಅಂದಾಜು ಮುಂದಿನ ದಿನಗಳಲ್ಲಿ ಆಹಾರ ಸೇರಿದಂತೆ ವಿವಿಧ ಸರಕುಗಳ ಬೆಲೆಗಳ ಮೇಲೆ ಗ್ರಾಹಕರು ಮತ್ತಷ್ಟು ಒತ್ತಡ ಎದುರಿಸುವ ಸಾಧ್ಯತೆಯತ್ತ ಗಮನ ಸೆಳೆಯುತ್ತಿದೆ.

You cannot copy content of this page

Exit mobile version