Home ರಾಜ್ಯ HPCL ವಿರುದ್ಧ ಕಾರ್ಮಿಕರ ಆಕ್ರೋಶ: ನಾಲ್ವರು ಮಹಿಳಾ ಕಾರ್ಮಿಕರ ಮರುನೇಮಕಕ್ಕೆ ಆಗ್ರಹ;7 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ...

HPCL ವಿರುದ್ಧ ಕಾರ್ಮಿಕರ ಆಕ್ರೋಶ: ನಾಲ್ವರು ಮಹಿಳಾ ಕಾರ್ಮಿಕರ ಮರುನೇಮಕಕ್ಕೆ ಆಗ್ರಹ;7 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

0

ಮಂಗಳೂರು: ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (HPCL) ವಿರುದ್ಧ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

MRPL ಘಟಕಕ್ಕೆ ಹೊಂದಿಕೊಂಡಿರುವ HPCL ಸ್ಥಾವರದಲ್ಲಿ ನಾಲ್ವರು ಮಹಿಳೆಯರು ಸುಮಾರು 15ರಿಂದ 25 ವರ್ಷಗಳವರೆಗೆ ಗುತ್ತಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ಆದರೆ ಸುಮಾರು ಒಂದು ತಿಂಗಳ ಹಿಂದೆ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸಿಐಟಿಯು ಹಾಗೂ ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಆರೋಪಿಸಿವೆ.

ಕೆಲಸ ಕಳೆದುಕೊಂಡಿರುವ ಮಹಿಳಾ ಕಾರ್ಮಿಕರು ನ್ಯಾಯಕ್ಕಾಗಿ ಪ್ರತಿದಿನ ಕಂಪೆನಿ ಗೇಟ್‌ ಬಳಿ ಹಾಜರಾಗಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಪರವಾಗಿ ಸಂಘಟನೆಗಳ ಮುಖಂಡರಾದ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಕಂಪೆನಿ ಆಡಳಿತಕ್ಕೆ ಮನವಿ ಸಲ್ಲಿಸಲು ಮುಂದಾದರು.

ಆದರೆ ಮನವಿ ಸ್ವೀಕರಿಸಲು ಕಂಪೆನಿ ಅಧಿಕಾರಿಗಳು ಆರಂಭದಲ್ಲಿ ನಿರಾಕರಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಸತಾಯಿಸಲಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರಿಂದ ಸ್ಥಳದಲ್ಲಿ ಆಕ್ರೋಶ ವ್ಯಕ್ತವಾಯಿತು.

ನಿರಂತರ ಒತ್ತಡದ ಬಳಿಕ HPCL ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಿಳಾ ಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೆಲಸದಿಂದ ವಜಾಗೊಳಿಸಿರುವ ಕ್ರಮದ ಕುರಿತು ಪರಿಶೀಲನೆ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಮುಖಂಡರಾದ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ನಾಲ್ವರು ಮಹಿಳಾ ಕಾರ್ಮಿಕರಿಗೆ ಏಳು ದಿನಗಳೊಳಗೆ ನ್ಯಾಯ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ದೀರ್ಘಕಾಲ ಕಂಪೆನಿಯಲ್ಲಿ ಸೇವೆ ಸಲ್ಲಿಸಿರುವ ಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆ ಹಾಗೂ ಅವರ ಹಕ್ಕುಗಳ ಕುರಿತು ಆಡಳಿತ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂಬುದು ಸಂಘಟನೆಗಳ ಪ್ರಮುಖ ಆಗ್ರಹವಾಗಿದೆ.

You cannot copy content of this page

Exit mobile version