“…ಜನರು ಎಷ್ಟರ ಮಟ್ಟಿನ ಮೂಢನಂಬಿಕೆಗಳಲ್ಲಿ ಮುಳುಗಿದ್ದಾರೆ ಎಂದರೆ, ಇದು ನಗೆಪಾಟಲಾಗುವ ಬದಲು, ಕೆಲವು ಸನಾತನಿ ಅಜ್ಞಾನಿಗಳು ಇಂತಾ ಮೂಢನಂಬಿಕೆಗಳ ಹಿಂದಿರುವ ಕಾಲ್ಪನಿಕವಾದ “ವೈಜ್ಞಾನಿಕ” ಕಾರಣಗಳನ್ನು ನೀಡುತ್ತಾರೆ ಮತ್ತು ವಿದ್ಯಾವಂತರು, ವಿಜ್ಞಾನಿಗಳು ಎಂದು ಹೇಳಿಕೊಳ್ಳುವವರು ಕೂಡಾ ಇದನ್ನು ಕುರುಡಾಗಿ ನಂಬುತ್ತಾರೆ…” ನಿಖಿಲ್ ಕೋಲ್ಪೆಯವರ ಬರಹದಲ್ಲಿ
“ಬೊಗಸೆಗೆ ದಕ್ಕಿದ್ದು-45″ರಲ್ಲಿ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ತೆಳುವಾದ ಗೆರೆಯ ಬಗ್ಗೆ ಬರೆದಿದ್ದೆ. ಈಗ ನಮ್ಮಲ್ಲಿ ಇರುವ ಅಮಾನವೀಯ ಆಚರಣೆಗಳನ್ನು ಕುರಿತು ನೋಡೋಣ. ನಂಬಿಕೆಯಿರಲೀ, ಮೂಢನಂಬಿಕೆಯೇ ಇರಲಿ- ವ್ಯಕ್ತಿಗತವಾಗಿ ಇದ್ದರೆ, ಅದು ಸಮಾಜಕ್ಕೆ ಅಂತಾ ಹಾನಿಯನ್ನೇನಾದರೂ ಮಾಡಲಾರದು. ಉದಾಹರಣೆಗೆ ಸಿನಿಮಾ, ಕ್ರಿಕೆಟ್ ತಾರೆಯರಿಂದ ಹಿಡಿದು, ಜನರ ಮೇಲೆ ಪ್ರಭಾವ ಬೀರುವ ಅನೇಕ ಖ್ಯಾತನಾಮರು ತಮ್ಮ ಮೂಢನಂಬಿಕೆಗಳ ಪರೋಕ್ಷ ಪ್ರಚಾರ ಮಾಡುತ್ತಲೇ ಇದ್ದಾರೆ. ಜನರು ಅವುಗಳನ್ನು ಅನುಸರಿಸುತ್ತಲೂ ಇದ್ದಾರೆ. ಎಡಗಾಲಿಗೆ ಮೊದಲು ಪ್ಯಾಡ್ ಕಟ್ಟುವುದು, “ಮೈ ಲಕ್ಕಿ ಕ್ಯಾಪ್, ಬ್ರೇಸ್‌ಲೆಟ್, ಚಾರ್ಮ್” ತಾಯಿತ, ನೂಲು ಎಂದು ಇವರು ತಮ್ಮ ಪೆದ್ದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಢನಂಬಿಕೆಗಳಿಂದ ಬೇರೆಯವರಿಗೆ, ಸಮಾಜಕ್ಕೆ ನೇರ ಹಾನಿಯೇನೂ ಇಲ್ಲ. ಜೊತೆಗೆ ಜನರು ದೇವರು, ದಿಂಡರ ನಂಬಿಕೆಯಿಂದ ನೂರಾರು ಆಚರಣೆಗಳನ್ನು- ವ್ರತಗಳನ್ನು ಮಾಡುತ್ತಾರೆ, ನೂರಾರು ಬಗೆಯ ಹರಕೆ ಹೊರುತ್ತಾರೆ; ಬಡವರು ಬೆವರು, ದುಡಿಮೆಯ ಹಣವನ್ನು ಪೂಜಾಸ್ಥಾನಗಳ ಕಾಣಿಕೆ ತಟ್ಟೆ ಡಬ್ಬಿಗಳಿಗೆ, ಶ್ರೀಮಂತರು ಅನ್ಯಾಯದ ಹಣವನ್ನು ಹುಂಡಿಗಳಿಗೆ ಸುರಿಯುತ್ತಾರೆ…. ಹೀಗೆ ಹಲವಾರನ್ನು ಮಾಡುತ್ತಾರೆ.
ಕಳೆದ ಬಾರಿ ಕೊರೋನಾ ಬಂದಾಗ ದೇಶದ “ವೈಜ್ಞಾನಿಕ” ಪ್ರಗತಿಗೆ ತಾನೇ ಕಾರಣ ಎಂಬಂತೆ ಪೋಸು ನೀಡುವ ಪ್ರಧಾನಿಯೇ ತಟ್ಟೆ ಬಟ್ಟಲು ಬಾರಿಸಿ, ದೀಪ ಹಚ್ಚಿ ಇತ್ಯಾದಿ ಶತಮೂರ್ಖ ಸಲಹೆಗಳನ್ನು ನೀಡಿದರು; ಜನರು ಅವುಗಳನ್ನು ಸಮೂಹಸನ್ನಿ ಹಿಡಿದವರಂತೆ ಅನುಸರಿಸಿದರು. ನಮ್ಮ ಜನರು ಎಷ್ಟರ ಮಟ್ಟಿನ ಮೂಢನಂಬಿಕೆಗಳಲ್ಲಿ ಮುಳುಗಿದ್ದಾರೆ ಎಂದರೆ, ಇದು ನಗೆಪಾಟಲಾಗುವ ಬದಲು, ಕೆಲವು ಸನಾತನಿ ಅಜ್ಞಾನಿಗಳು ಇಂತಾ ಮೂಢನಂಬಿಕೆಗಳ ಹಿಂದಿರುವ ಕಾಲ್ಪನಿಕವಾದ “ವೈಜ್ಞಾನಿಕ” ಕಾರಣಗಳನ್ನು ನೀಡುತ್ತಾರೆ ಮತ್ತು ವಿದ್ಯಾವಂತರು, ವಿಜ್ಞಾನಿಗಳು ಎಂದು ಹೇಳಿಕೊಳ್ಳುವವರು ಕೂಡಾ ಇದನ್ನು ಕುರುಡಾಗಿ ನಂಬುತ್ತಾರೆ. ಇದರಿಂದಲೂ ನೇರ ಹಾನಿಯೇನಿಲ್ಲ. ನೂರಾರು ಸಲ ಸುಳ್ಳು ಭವಿಷ್ಯ ಹೇಳಿ ವಿಚಾರವಂತರಿಂದ ನಗೆಪಾಟಲಿಗೀಡಾಗಿದ್ದರೂ, ಕೆಲವು ಬ್ರಹ್ಮಾಂಡ ಪಿಂಡಗಳು ಮಾನವಿಲ್ಲದ ಮುಖಗೇಡಿಗಳಂತೆ ಟಿ.ವಿ. ಚಾನೆಲ್‌ಗಳಲ್ಲಿ ನಿತ್ಯವೂ ಭವಿಷ್ಯ ಕೊರೆಯುತ್ತವೆ. ಜನ ಅವುಗಳನ್ನೂ ನಂಬುತ್ತಾರೆ.
ಆದರೆ, ಪರೋಕ್ಷ ಹಾನಿಯೆಂದರೆ, ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವ ಮನೋಭಾವವನ್ನು ಅದು ಕುಂದಿಸುತ್ತದೆ. ಇದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಜನರಿಗೆ ಹಾನಿಯುಂಟುಮಾಡುತ್ತದೆ. ಜನರು ಮೌಢ್ಯ ಮತ್ತು ಮುಗ್ಧತೆಯ ಕಾರಣದಿಂದ ಇಂತವರ ಯಂತ್ರ, ಮಂತ್ರ, ತಂತ್ರ, ಕುತಂತ್ರಗಳಿಗೆ ಬಲಿಬೀಳುತ್ತಾರೆ. ನಮ್ಮಲ್ಲಿ ಹಳ್ಳಿಗಾಡಿನ ಮಂತ್ರವಾದಿಗಳಿಂದ ಹಿಡಿದು, ಹೈಟೆಕ್ ಸ್ವಯಂಘೋಷಿತ ದೇವಮಾನವರ ತನಕ ನೂರಾರು ಪ್ರಬೇಧಗಳು ಇವೆ. ಮೂಢನಂಬಿಕೆಗೆ ಬಡವ, ಶ್ರೀಮಂತ, ಶಿಕ್ಷಿತ, ಅಶಿಕ್ಷಿತ ಎಂಬ ಭೇದವೂ ಇಲ್ಲ. ಅನ್ಯಾಯದಿಂದ ಗಳಿಸಿದ ಹಣವನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ದೇವಾಲಯಗಳ ಹುಂಡಿಗೆ ಸುರಿದು, ಪಾಪ ಕಳೆದುಕೊಂಡೆವಂದು ನಿರಾಳರಾಗುವವರಿದ್ದಾರೆ. ಹಾಗೆಯೇ ನಿತ್ಯದ ಊಟ, ಮಕ್ಕಳ ಶಿಕ್ಷಣ, ಆರೋಗ್ಯ ಇತ್ಯಾದಿಗಳನ್ನು ಕಡೆಗಣಿಸಿ, ಕಷ್ಟಪಟ್ಟು ದುಡಿದ ಹಣವನ್ನು ದೇವರು, ಧರ್ಮ, ನಂಬಿಕೆ ಎಂದು ಖರ್ಚು ಮಾಡುವವರೂ ಇದ್ದಾರೆ. ನಮ್ಮಲ್ಲಿ ಮಾಟಮಾಡುವವರೂ ಇದ್ದಾರೆ, ಮಾಟ ತೆಗೆಯುವವರೂ ಇದ್ದಾರೆ. ಮಾಟಗಾರ್ತಿಯರೆಂಬ ಸಂಶಯದ ಮೇಲೆ ಥಳಿಸಿಕೊಂದ ಘಟನೆಗಳೂ ನಮ್ಮ ದೇಶದಲ್ಲಿ ನಡೆದಿವೆ. ಮೈಮೇಲೆ ಬಂದವರಂತೆ ವಿಕೃತವಾಗಿ ನಟಿಸುವ, ಕಾಲಿನಿಂದ ಆಶೀರ್ವಾದ ಮಾಡುವ, ಬೆತ್ತ-ಬರಲುಗಳಿಂದ ಥಳಿಸುವ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ವಾಕರಿಕೆ ಬರಿಸುವಷ್ಟು ಧಾರಾಳವಾಗಿ ನೋಡಬಹುದು. ತಮಗೇ ಮತ ಹಾಕುವಂತೆ ಜನರಿಂದ ಆಣೆ ಪ್ರಮಾಣ ಮಾಡಿಸುವ, ಅದ್ಧೂರಿ ಹೋಮ ಹವನಗಳನ್ನು ಮಾಡಿಸುವ ನಿಂಬೆ ಹಣ್ಣು ರಾಜಕಾರಣಿಗಳನ್ನೂ ನೋಡಬಹುದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ “ಅತ್ತೆ ಸಾಯಲಿ” ಎಂದು- ದೇವರು ಸುಪಾರಿ ಕೊಲೆಗಾರ ಎಂಬಂತೆ ನೋಟಿನಲ್ಲಿ ಬರೆದು ಹುಂಡಿಗೆ ಹಾಕಿದ ಘಟನೆಯನ್ನೂ ನೋಡುತ್ತೇವೆ. ಈ ಪಿಡುಗು ಹಿಂದೂ, ಮುಸ್ಲಿಂ, ಕ್ರೈಸ್ತ, ಧರ್ಮಗಳೆಲ್ಲದರಲ್ಲೂ ಇದೆ. ಇಂತಾ ಅಜ್ಞಾನಕ್ಕೆ ಔಷಧಿ ನೀಡದೆ, ಅದನ್ನು ಕಟುವಾಗಿ ಟೀಕಿಸುವುದರಿಂದ, ನಿಂದಿಸುವುದರಿಂದ ಈ ಮೂಢನಂಬಿಕೆಗಳು ಇನ್ನಷ್ಟು ಗಟ್ಟಿಯಾಗುತ್ತವೆಯೇ ಹೊರತು ಆಳಿಯುವುದಿಲ್ಲ. ಇದನ್ನು ನಾವು ನಮ್ಮ ಪರಿಸರ ಮತ್ತು ಕುಟುಂಬದಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.
ಆದರೂ, ಇವುಗಳನ್ನು ನಿಯಂತ್ರಿಸಬೇಕಾದ ಅಗತ್ಯವೂ ಇದೆ. ಯಾಕೆಂದರೆ, ಇವುಗಳಿಂದ ಹೆಚ್ಚು ಶೋಷಣೆಗೆ, ಅವಮಾನಕ್ಕೆ ಒಳಗಾಗುವವರು ದಲಿತರು, ಹಿಂದುಳಿದ ವರ್ಗದವರು ಮತ್ತು ಎಲ್ಲಾ ಧರ್ಮಗಳ ಬಡವರು. ಸಾಮಾನ್ಯರ, ಅಬ್ರಾಹ್ಮಣ ನಂಬಿಕೆ, ನಡವಳಿಕೆಗಳು ಮೂಢನಂಬಿಕೆಗಳಾಗಿ, ಸನಾತನಿ ಎನ್ನುವ ಕಂದಾಚಾರಗಳೆಲ್ಲಾ ಧರ್ಮ, ಸಂಸ್ಕೃತಿ , ಪರಂಪರೆಗಳಾಗುವುದು ಹೇಗೆ? ಇದುವೇ ಮುಖ್ಯ ಪ್ರಶ್ನೆ. ಇವುಗಳ ನಿಯಂತ್ರಣಕ್ಕೆ ಕಾನೂನುಗಳೂ ಇವೆ. ಆದರೆ, ಅವುಗಳನ್ನು ಅನ್ವಯಿಸುವುದು ಹೇಗೆ? ವಂಚಕರಿಗೆ ಶಿಕ್ಷೆಯಾಗಬೇಕೇ ಹೊರತು, ಬಲಿಪಶುಗಳಿಗೆ ಅಲ್ಲ. ಹಿಂದಿನ ಕಂತಿನಲ್ಲಿ ಹೇಳಿದ್ದಂತೆ, ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಅಂತರ ತುಂಬಾ ತೆಳುವಾಗಿರುವಂತೆಯೇ ಮಾನವೀಯ ಮತ್ತು ಅಮಾನವೀಯ ಆಚರಣೆಗಳ ನಡುವಿನ ಅಂತರವೂ ತೀರಾ ತೆಳುವಾಗಿದೆ, ಸೂಕ್ಷ್ಮವಾಗಿದೆ. ಇದನ್ನು ನಿರ್ಧರಿಸುವುದು ಹೇಗೆ? ಅದಕ್ಕೆ ಮಾನದಂಡ ಯಾವುದು? ಯಾಕೆಂದರೆ, ಜಾತಿ ತಾರತಮ್ಯ ಮತ್ತು ಪರಧರ್ಮ ದ್ವೇಷವೂ ಇಂತಾ ನಂಬಿಕೆ- ಮೂಢನಂಬಿಕೆಗಳ ಫಲವೇ!
ಸುಮಾರು ಎರಡು ದಶಕಗಳ ಹಿಂದೆ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕರಾಗಿದ್ದ ಬಿ.ಎಚ್.ಅನಿಲ್ ಕುಮಾರ್ ಅವರು ಈ ಪಂಗಡಗಳಲ್ಲಿ ಇರುವ ಮತ್ತು ಅವರು ಒಳಗಾಗಿರುವ ಅಮಾನವಿಯ ಆಚರಣೆಗಳ ದಾಖಲಾತಿಗೆ ಒಂದು ಯೋಜನೆ ರೂಪಿಸಿದ್ದರು. ಇದರ ಜವಾಬ್ದಾರಿಯನ್ನು ಕಿಶೋರ್ ಅತ್ತಾವರ್ ಅವರು ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರಕ್ಕೆ ವಹಿಸಲಾಗಿತ್ತು. ಯೋಜನೆಗೆ ಲಿಂಗದೇವರು ಹಳೆಮನೆ, ಸಿದ್ಧನಗೌಪಾಟೀಲ ಮುಂತಾದವರು ಆರಂಭಿಕ ಮಾರ್ಗದರ್ಶನ ನೀಡಿದ್ದು, ರಾಜ್ಯ ಸಂಪನ್ಮೂಲ ಕೇಂದ್ರದ ಇತ್ತೀಚಿನ ನಿರ್ದೇಶಕ ಎಸ್. ತುಕಾರಾಂ, (ಈಗ ಈ ಸಂಸ್ಥೆ ಬರಕಾಸ್ತು ಹೊಂದಿದೆ ಎಂದು ಕೇಳಿದ್ದೇನೆ), ರಾಜಾ ಹೊಸಮಾಳ, ದೇವನೂರ ಬಸವರಾಜ್ ಮುಂತಾದವರು ಜೊತೆಗಿದ್ದರು. ಶಶಿಕಲಾ ಹೆಗ್ಗಾರ್ ಅವರು ಕಾನೂನು ಸಲಹೆಗಾರರಾಗಿದ್ದರು. ಟಿ. ವೆಂಕಟೇಶ್ ಯೋಜನಾ ಉಸ್ತುವಾರಿಯಾಗಿದ್ದರು. ನಾನು ಮಖ್ಯ ಸಂಯೋಜಕನಾಗಿದ್ದೆ. ಕ್ಷೇತ್ರ ಕಾರ್ಯಕ್ಕೆ ನನಗೆ ನೆರವಾಗಲು ದಲಿತ ಹಿನ್ನೆಲೆಯಿಂದ ಬಂದ ಜಿ.ಕೆ. ಶಿವಣ್ಣ ಮತ್ತು ಕೆ.ಎ. ಭಾನುಪ್ರಕಾಶ್ ಎಂಬ ಆಗ ತಾನೇ ಯುನಿವರ್ಸಿಟಿಯಿಂದ ಹೊರಬಂದ ಇಬ್ಬರು ಯುವಕರು ಇದ್ದರು.
ಜೊತೆಗೆ ಸಂಪನ್ಮೂಲ ವ್ಯಕ್ತಿಗಳಾಗಿದ್ದವರ ಹೆಸರುಗಳನ್ನು ಇಲ್ಲಿ ನೆನಪಿಸಲು ಕಾರಣವೆಂದರೆ, ಇವರೆಲ್ಲರೂ ಈ ವಿಷಯದಲ್ಲಿ ಕಾಳಜಿ ಹೊಂದಿದ್ದವರು, ಪತ್ರಕರ್ತರು, ಬೇರೆ ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದವರು, ದುಡಿಯುತ್ತಿರುವವರು. ಈಗ ಮುಖ್ಯವಾಹಿನಿಯ ಮಾಧ್ಯಮ ಕ್ಷೇತ್ರವೇ ಮಾರಿ ಹೋಗಿರುವ ಕಾಲದಲ್ಲಿ ಹಿಂದೆ ಏನು ಮಾಡಲು ಸಾಧ್ಯವಿತ್ತು, ಮಾಡಲಾಗಿತ್ತು, ಈಗೇನು ಮಾಡಲಾಗುತ್ತಿದೆ ಎಂಬುದನ್ನು ನೆನಪಿಸಲು ಅಷ್ಟೇ. ಅವರೆಂದರೆ ಬಿ.ಎ. ಸಂಶುದ್ದೀನ್, ಕೋಡಿ ರಂಗಪ್ಪ, ಪಿ.ಕೆ.ಅಬ್ದುಲ್ ಲತೀಫ್, ವಿಲ್ಫ್ರೆಡ್ ಡಿಸೋಜಾ, ಡಾ. ಶೈಲಜಾ ಹಿರೇಮಠ, ಶ್ರೀಶೈಲ ಹುದ್ದಾರ, ಕೆ.ಎಸ್.ಸತೀಶ್, ಹರಸೂರು ಅಪ್ಪಾರಾವ್, ಬಿ.ಆರ್. ಪೊಲೀಸಪಾಟೀಲ ಮತ್ತು ಬಿ. ರಾಘವೇಂದ್ರ. ನಂತರ, ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ದಾಖಲಾತಿ ಬಿಡುಗಡೆ ಸಮಾರಂಭದಲ್ಲಿಯೂ ಮೋಟಮ್ಮ, ಸಿದ್ಧಲಿಂಗಯ್ಯ, ಸೇರಿದಂತೆ ದಲಿತ ಮತ್ತು ಪ್ರಗತಿಪರ ಚಳವಳಿಯ ಹಲವರು ಭಾಗವಹಿಸಿದ್ದರು.
ಆಗ ಈ ಯೋಜನೆಗಾಗಿ ಹಾಕಿಕೊಂಡಿದ್ದ ಮಾನದಂಡಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು. ಯಾವುದೇ ಆಚರಣೆ ಅಥವಾ ನಂಬಿಕೆಯಿಂದ ವ್ಯಕ್ತಿಗೆ ದೈಹಿಕ ಅಥವಾ ಮಾನಸಿಕ ಹಿಂಸೆಯಾಗುವುದು, ಯಾವುದೇ ರೀತಿಯ ಶೋಷಣೆ ಅಥವಾ ತಾರತಮ್ಯಕ್ಕೆ ಸಂಪ್ರದಾಯ , ಪರಂಪರೆಯ ಹೆಸರಿನಲ್ಲಿ ನೆಪವಾಗಿದ್ದರೆ, ವ್ಯಕ್ತಿ ಅಥವಾ ಮಾನವೀಯ ಘನತೆ, ಗೌರವಗಳಿಗೆ ಧಕ್ಕೆ ಉಂಟಾಗುವುವಂತಿದ್ದರೆ, ಸಮಾಜಕ್ಕೆ ಹಾನಿಯಾಗುವಂತಿದ್ದರೆ ಅವುಗಳನ್ನು ಮೂಢನಂಬಿಕೆ, ಅಮಾನವೀಯ ಆಚರಣೆಗಳು ಎನ್ನಬಹುದು. ಇದು ತೀರಾ ಸಡಿಲವಾದ ಚೌಕಟ್ಟಾದರೂ, ಅನಿವಾರ್ಯ ಎನಿಸಿತ್ತು. ನಂತರ ನಾವು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ಈ ಕುರಿತು ತಿಳಿಸಬಹುದಾದವರ ಪಟ್ಟಿ ಮಾಡಿ, ಮೂರು ಮಂದಿ ರಾಜ್ಯದ ಮೂರು ಭಾಗಗಳಲ್ಲಿ ಸುತ್ತಾಡಿದೆವು. ಸಂಪನ್ಮೂಲ ವ್ಯಕ್ತಿಗಳೂ ಕೆಲವು ಆಚರಣೆಗಳ ಬಗ್ಗೆ ಬರೆದರು. ಇದು ಸೀಮಿತ ಮಾನವ ಹಾಗೂ ಹಣಕಾಸು ಸಂಪನ್ಮೂಲ ಮತ್ತು ಸೀಮಿತ ಸಮಯದಲ್ಲಿ ನಡೆದ ದಾಖಲಾತಿ ಆಗಿದ್ದುದರಿಂದ, ಇದು ಸಮಗ್ರವಾಗಿದೆ ಅಥವಾ ತೀರಾ ನಿಖರವಾಗಿದೆ ಎಂದು ಹೇಳುವ ಧೈರ್ಯ ನನಗೆ ಅಥವಾ ಯಾರಿಗೂ ಕಂಡಿತಾ ಇಲ್ಲ. ಆದರೂ, ಇದು ಅಂತದ್ದೊಂದು ಆರಂಭಿಕ ಪ್ರಯತ್ನವಾಗಿತ್ತು ಎಂದು ಹೇಳಬಹುದು. ಆದರೆ, ಹಲವಾರು ಬುಡಕಟ್ಟುಗಳ ಆಚರಣೆಗಳ ಕುಲ ಶಾಸ್ತ್ರೀಯ ಅಧ್ಯಯನಗಳು ಹಿಂದೆಯೇ ನಡೆದಿದ್ದವು. ಅವುಗಳು ಮಾನವೀಯ-ಅಮಾವೀಯವೆಂದು ನಾವು ಕರೆಯಬಹುದಾದ ದೃಷ್ಟಿಕೋನದಿಂದ ನಡೆದಿರಲಿಲ್ಲ ಅಷ್ಟೇ.
ಈ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಅಮಾನವೀಯ ಎಂದು ಕರೆಯಬಹುದಾದ ಪದ್ಧತಿಗಳನ್ನು ಗುರುತಿಸಿ- ಆಯಾ ಜನಾಂಗ, ಕಾರಣಗಳು, ಹಿನ್ನೆಲೆ, ಆಚರಣೆಗಳ ವಿವರಣೆಗಳನ್ನು ನೀಡುವುದರ ಜೊತೆಗೆ ಅವುಗಳನ್ನು ನಿವಾರಿಸುವುದಕ್ಕಾಗಿ ತೆಗೆದುಕೊಳ್ಳಬಹುದಾದ ಪರಿಹಾರೋಪಾಯಗಳು, ಅನಿವಾರ್ಯವಾದಲ್ಲಿ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳನ್ನು ಬೇರೆಬೇರೆಯಾಗಿ ಸೂಚಿಸಲಾಗಿತ್ತು. ಈಗ ಸುರಿಸುಮಾರು ಇಪ್ಪತ್ತು ವರ್ಷಗಳ ನಂತರ, ರಾಜ್ಯದಲ್ಲಿ ಅವು ಎಷ್ಟರ ಮಟ್ಟಿಗೆ ಇವೆ ಅಥವಾ ಇಲ್ಲ ಎಂಬುದನ್ನು ಒಬ್ಬ ವ್ಯಕ್ತಿಯಾಗಿ, ಒಬ್ಬ ಸ್ವತಂತ್ರ ಪತ್ರಕರ್ತನಾಗಿ ತಿಳಿದುಕೊಳ್ಳುವ ವ್ಯವಸ್ಥೆಗಳು ನನಗಿಲ್ಲ. ಮಾಧ್ಯಮಗಳು- ಸುದ್ದಿಗಾರರ ಜಾಲ, ಸಂಪನ್ಮೂಲ ಹೊಂದಿರುವ ಮಾಧ್ಯಮಗಳು, ವಿಶ್ವವಿದ್ಯಾಲಯಗಳು, ಸಮಾಜ ಸೇವಾ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇದನ್ನು ಕಂಡಿತವಾಗಿ ಮಾಡಬಹುದು. ಸರಕಾರ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ನಿಗಮಗಳು, ವಿವಿಧ ಇಲಾಖೆಗಳ ನೆರವಿನಿಂದ ಇದನ್ನು ಮಾಡಲು ಸಾಧ್ಯವಿತ್ತು. ಸಾಧ್ಯವಿದೆ.
ಆದರೆ, ಹಿಂದಿನ ದಾಖಲಾತಿಯ ಕುರಿತು ಕ್ರಮ ಕೈಗೊಂಡ ವರದಿಯಾಗಲೀ, ನಂತರ ಸರಕಾರದ ವತಿಯಿಂದ ಇಂತ ದಾಖಲಾತಿ ನಡೆದ ಬಗ್ಗೆ ನನಗೆ ಮಾಹಿತಿಯಿಲ್ಲ. ಕೆಲವರು ವೈಯಕ್ತಿಕವಾಗಿ ಲಂಬಾಣಿ, ಗೊರವರು, ಮಾಂಗ್‌ಗಾರುಡಿ, ಹಕ್ಕಿಪಿಕ್ಕಿ, ಕೊರಗರು, ಕೊರವರು, ಕಾಡುಕುರುಬರು, ಜೇನುಕುರುಬರು, ಮುಸ್ಲಿಂ ಸಮುದಾಯದೊಳಗಿರುವ ಹಲವಾರು ಜನಾಂಗಗಳು…. ಹೀಗೆ ಹಲವು ಬುಡಕಟ್ಟು ಸಮುದಾಯಗಳ ಬಗ್ಗೆ ಬೇರೆಬೇರೆ ರೀತಿಯಲ್ಲಿ ಬೇರೆಬೇರೆ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಮುಖ್ಯವಾಗಿ, ಇವುಗಳಲ್ಲಿ ಹೆಚ್ಚಿನವುಗಳಲ್ಲಿ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಗಳಿಗೆ, ದಂತಕತೆಗಳಿಗೆ ಒತ್ತು ನೀಡಲಾಗಿದೆಯೇ ಹೊರತು- ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳಿಗೆ ನೀಡಬೇಕಾದಷ್ಟು ಗಮನ ನೀಡಲಾಗಿಲ್ಲ ಎನಿಸುವುದಕ್ಕೆ ನನ್ನ ಅಜ್ಞಾನ ಕಾರಣವಿರಬಹುದು; ಉದ್ಧಟತನ ಎಂದು ಭಾವಿಸಬೇಡಿ. ಮಾನವೀಯ ಕಾಳಜಿಯೇ ಇಂತಾ ಅಧ್ಯಯನಗಳಿಗೆ ಪ್ರೇರಣೆ ಆಗಿರಬೇಕೇ ಹೊರತು, ಒಣಪಂಡಿತ ಜ್ಞಾನವಲ್ಲ ಎಂದು ನನಗನಿಸುತ್ತದೆ. ಸರಕಾರ ಇದಕ್ಕಾಗಿಯೇ ಇಂತಾ ತಿಳಿದವರನ್ನು (ಹಲವು ಹೆಸರುಗಳು ತಕ್ಷಣವೇ ನಿಮ್ಮ ಮನಸ್ಸಿಗೆ ಹೊಳೆಯಬಹುದು) ಜೊತೆಗೆ ಸೇರಿಸಿ, ಈ ಸಮುದಾಯಗಳ ಜೀವನದಲ್ಲಿ ಬೆಳಕು ತರಬಹುದಾದ ಅಧ್ಯಯನಗಳನ್ನು ಸಂಘಟಿತ ರೀತಿಯಲ್ಲಿ ನಡೆಸಬೇಕು; ಡಾಕ್ಟರೇಟ್ ಅಥವಾ ಪ್ರಶಸ್ತಿಗಳ ಶ್ರೇಯಸ್ಸಿಗಾಗಿ ಅಲ್ಲ. ಜಾತಿ ಜನಗಣತಿಗೆ ಮೇಲ್ಜಾತಿ ಎನಿಸಿಕೊಂಡವರ, ಮೇಲ್ವರ್ಗದ ಜನರ ಪ್ರಬಲ (ಸಂಖ್ಯೆಯಲ್ಲಿ ಅಲ್ಲ, ಕಿರುಚಾಟದಲ್ಲಿ) ವಿರೋಧ ಇರುವುದರಿಂದ, ಈ ಸಂದರ್ಭದಲ್ಲಿ ಇಂತಾ ಒಂದು ಕೆಲಸ ಮಹತ್ವದ್ದು. ಅಹಿಂದ ಎಂದು ಹೇಳಿಕೊಳ್ಳುವ ಸರಕಾರಗಳಿಗೆ ಇದು ಇನ್ನಷ್ಟು ಮಹತ್ವದ್ದು.
ಈ ದಾಖಲಾತಿ ಸಂದರ್ಭದಲ್ಲಿ ನಾನು ಮೊಹಮ್ಮದ್ ಪೀರ್, ಅಮೃತ ಸೋಮೇಶ್ವರ ಮತ್ತು ಗೋಕುಲದಾಸ್ ಅವರ ಸಹಿತ ಕೆಲವು ಕೊರಗ ನಾಯಕರನ್ನು ಭೇಟಿಯಾಗಿದ್ದೆ. ಜೊತೆಗೆ ಕೊರಗರ ಜೊತೆಗೆ ಬಾಲ್ಯದಲ್ಲಿ ಬೆಳೆದಿದ್ದ ನನಗೆ ಅಜಲು ಪದ್ಧತಿಯ ಬಗ್ಗೆ ಗೊತ್ತಿತ್ತು. ವಿದ್ವಾಂಸ ಮಹಮ್ಮದ್ ಪೀರ್ ಅವರ ಮಹತ್ವದ ವರದಿಯ ಬಳಿಕ, ಈ ದಾಖಲಾತಿಯ ನಂತರ ಕರಾವಳಿಯ ಅಜಲು ಪದ್ಧತಿಯನ್ನು ನಿಷೇಧಿಸಲಾಯಿತು. ಇದನ್ನೂ “ಹಿಂದೂ ಒಂದು” ಬಾಯ್ಮಾತಿನ ಚಡ್ಡಿ ಚತುರರು ವಿರೋಧಿಸಿದ್ದೂ ಆಯಿತು.
ಈ ಅಜಲು ಪದ್ಧತಿಯಲ್ಲಿ ತರಾವರಿ ಇದ್ದವು. ಒಂದನೆಯದು ಮೇಲ್ವರ್ಗದ ಜಮೀನ್ದಾರರು ನಡೆಸುವ ಕಂಬಳ ಅಥವಾ ಕೋಣಗಳ ಓಟದಲ್ಲಿ ಕೊರಗರಿಗೆ ಕೆಲವು ವಿಧಿಗಳಿದ್ದವು. (ಬೆತ್ತಲೆ ಕುಳಿತುಕೊಳ್ಳುವುದು ಇತ್ಯಾದಿ- ಅವುಗಳನ್ನು ಇಲ್ಲಿ ಹೇಳದಿರುವುದು ಒಳ್ಳೆಯದು). ಅವರನ್ನು ಕಂಬಳದ ಪೂರ್ವಭಾವಿಯಾಗಿ, ಮೊದಲಿಗೆ ಕೋಣಗಳಂತೆ ಓಡಿಸಲಾಗುತ್ತಿತ್ತು. ಕಂಬಳ ಒಂದು ಕ್ರೀಡೆ. ಕರಾವಳಿಯ ಕ್ರೀಡೆ- ಹೆಮ್ಮೆಯ ಕ್ರೀಡೆ. ಜಲ್ಲಿಕಟ್ಟು, ಕೊಂಡ ಹಾಯಿಸುವುದು, ಸ್ಪ್ಯಾನಿಷ್ ಬುಲ್ ಫೈಟಿಂಗ್ ರೀತಿ ಒಂದು ಜನಪ್ರಿಯ ಕ್ರೀಡೆ. ಒಂದು ಜೂಜು, ಕೋಳಿ ಅಂಕದಂತೆ ಅಕ್ರಮ-ಸಕ್ರಮ ಆರ್ಥಿಕ ಚಟುವಟಿಕೆಗಳ ತಾಣವೂ ಹೌದು. ಕಂಬಳದ ಪ್ರಾಣಿದಯಾ ಕೇಸುಗಳು ನ್ಯಾಯಾಲಯದಲ್ಲಿ ಇರುವಾಗ, ಇದಕ್ಕೆ ಕ್ರೀಡೆಯಾಗಿ ನನಗೆ ಯಾವ ಆಕ್ಷೇಪವೂ ಇರಲಿಲ್ಲ. ಆದರೆ, ಅಜಲು ಪದ್ಧತಿಯ ಹಿನ್ನೆಲೆಯಲ್ಲಿ ನಾನು ಹಾಕುತ್ತಿದ್ದ ಪ್ರಶ್ನೆ ಎಂದರೆ, ಸರಿ ಬಿಡಿ, ನೀವು ಹೇಳಿದಂತೆ ಇದೊಂದು “ಪಾರಂಪರಿಕ ಮತ್ತು ಸಾಂಸ್ಕೃತಿಕ” ಕ್ರೀಡೆಯೇ ಸರಿ. ಆದರೆ, ಮೊದಲೇ ಶೋಷಣೆಗೆ ಒಳಗಾಗಿದ್ದ ನಿರುಪದ್ರವಿ ಕೊರಗರಿಂದ ಇದನ್ನೆಲ್ಲಾ ಏಕೆ ಮಾಡಿಸಿದಿರಿ? ಅವರನ್ನು ಕೋಣಗಳಂತೆ ಓಡಿಸುವ ಬದಲು ನೀವು ಮೇಲ್ಜಾತಿಯವರನ್ನೇ ಯಾಕೆ ಕೋಣಗಳಂತೆ ಓಡಿಸಲಿಲ್ಲ? ನೀವೇ ಯಾಕೆ ಓಡಲಿಲ್ಲ?
ಇನ್ನೊಂದು- ಮೇಲ್ಜಾತಿಯವರ ಮನೆಯಲ್ಲಿ ಮಗು ಹುಟ್ಟಿದಾಗ, ಮಗುವನ್ನು ಕೊರಗತಿಯ ಕೈಗೆ ಕೊಡುವುದು ಮತ್ತು ಎಂಜಲನ್ನವನ್ನು ಮಗುವಿನ ತಲೆಗೂದಲು ಮತ್ತು ಉಗುರು ಬೆರೆಸಿ ಕೊಡುವುದು. ಅದನ್ನು ಆಕೆಯ ಜೊತೆಗಿರುವವರೂ, ಆಕೆಯ ಹಸಿದ ಮಕ್ಕಳೂ ತಿನ್ನುತ್ತಾರೆ. ಜೊತೆಗೆ ಹಳೆ ಸೀರೆ, ಗೀರೆ ಇತ್ಯಾದಿ. ಆ ಕಾಲದಲ್ಲಿ, ಬಡವರಾದ, ಕಾಡಿನಿಂದ ಹೊರಬಿದ್ದ, ಸ್ವಂತ ದುಡಿಮೆಯ ಜಾಗವಿಲ್ಲದ ಮಂದಿ ಅನಿವಾರ್ಯ ಒತ್ತಡದಿಂದ ಇದನ್ನು ಅನುಭವಿಸಬೇಕಾಗಿತ್ತು. ಅದು ಅವರಿಗೆ ಅಭ್ಯಾಸವೂ ಆಗಿತ್ತು. ಮದುವೆ ನಡೆಯುವಲ್ಲಿ ದೂರ ನಿಲ್ಲುತ್ತಿದ್ದರು. ಎಂಜಲೆಲೆಗೆ ಕಾದು! ಕಣ್ಣಾರೆ ನೋಡಿದ್ದೇನೆ, ಬೈದಿದ್ದೇನೆ, ಹೊಸ ಊಟ ತೆಗೆಸಿಕೊಟ್ಟಿದ್ದೇನೆ. ನಂತರ ಸ್ವಲ್ಪ ಬದಲಾವಣೆ ಆಗಿ, ಕೆಲವರು ಎಂಜಲೆಲೆ ಅಲ್ಲದ ನಿಜ ಊಟವೇ ಕೊಡುತ್ತಿದ್ದರು; ಹೊರಗೆ ಮತ್ತು ಎಲ್ಲರ ನಂತರ. ಸ್ವಲ್ಪ ಕಡಿಮೆ ಅವಮಾನ ಅಷ್ಟೇ.
ಆದರೆ, ಕರಾವಳಿಯ ಉಡುಪಿ ಜಿಲ್ಲೆಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ನನ್ನ ಬಾಲ್ಯ ಕಾಲದಲ್ಲಿ ಸ್ವಲ್ಪ ಬೇರೆಯಾಗಿತ್ತು. ಕಡಿಮೆ ಕ್ರೌರ್ಯದ್ದಾಗಿತ್ತು. ಆದರೂ, ಈಗಿನ ನಮ್ಮ ದೃಷ್ಟಿಯಿಂದ ಅವಮಾನಕಾರಿಯೇ. ಇಲ್ಲಿ ಉಗುರು, ಕೂದಲು ಬೆರೆಸಲಾಗುತ್ತಿರಲಿಲ್ಲ. ಒಳ್ಳೆಯ ಹಬ್ಬದೂಟ ಮಾಡಿ ಕೊಡಲಾಗುತ್ತಿತ್ತು. ಆದರೆ, ಮನೆಯ ಒಳಗಲ್ಲ; ಹೊರಗೆ. ಇನ್ನೊಂದು ದಂಗುಬಡಿಸುವ ವಿಷಯ ಹೇಳುತ್ತೇನೆ: ಅವರು ಅಸ್ಪೃಶ್ಯರಾಗಿದ್ದರು. ಆದರೆ, ಮಗುವನ್ನು ಆ ತಾಯಿಗೆ ಸಾಂಕೇತಿಕವಾಗಿ ದಾನ ಮಾಡಲಾಗುತ್ತಿತ್ತು. ಬೇರೆ ಸಮಯದಲ್ಲಿ ಮುಟ್ಟಬಾರದ ಅವಳು ಮೊಲೆ ಕುಡಿಸಿ, ಒಂದು ಕೊರಗ ಹೆಸರಿಡುತ್ತಿದ್ದಳು. ನಂತರ ಅಕ್ಕಿ, ತೆಂಗಿನಕಾಯಿ, ತೆಂಗಿನೆಣ್ಣೆ ಕೊಟ್ಟು ಮಕ್ಕಳನ್ನು ಮರಳಿ ಪಡೆಯಲಾಗುತ್ತಿತ್ತು. ನನ್ನ ತಂದೆ, ತಾಯಿ ಶಿಕ್ಷಿತರಾಗಿದ್ದರೂ, ಹಿರಿಯರಿಗೆ ಬಗ್ಗಿ, ಸಂಪ್ರದಾಯದ ಹೆಸರಲ್ಲಿ ಇದನ್ನು ನಾವು ನಾಲ್ಕು ಮಕ್ಕಳಿಗೂ ಮಾಡಿದ್ದರು. ಗೊತ್ತಿದ್ದು ಅವಮಾನ ಮಾಡಿರಲಿಲ್ಲ. ನಂಬಿಕೆ ಅಥವಾ ಮೂಢನಂಬಿಕೆಗಳ ಬಲದಲ್ಲಿ ಮಾಡಿದ್ದರು. ನಂತರ ತಾಯಿಯನ್ನು ಕೇಳಿದ್ದಾಗ ಅವರು ಹೇಳಿದ್ದು: ಅವರು ಕಾಡುಮೇಡಿನ ಜನರು ಅವರಿಗೆ ದೇವರ ಆಶೀರ್ವಾದ ಇದೆ. ನೀವು ಅವರ ಮಕ್ಕಳಾದರೆ, ದೇವರು ನಿಮ್ಮನ್ನೂ ಕಾಪಾಡುತ್ತಾನೆ. ನನ್ನ ಮನೆಯವರು ಹಲವು ಮಕ್ಕಳ ಈ ಕುಟುಂಬಕ್ಕೆ ಎಲ್ಲಾ ಸಹಾಯ ಮಾಡಿದ್ದಾರೆ. ಅಣ್ಣನಂತೆ ಕಾಡುಮೇಡಿನ ಪಾಠ ಕಲಿಸಿದ, ನಮ್ಮಲ್ಲೇ ಇದ್ದ ಬಲ್ಲುವಿನ ದುರಂತ ಕತೆ ಕೆಲವು ಸಲ ಬರೆದಿದ್ದೇನೆ. ಇದರ ಅರ್ಥವೆಂದರೆ, ಬರೇ ಶಾಲೆ ಕಲಿತರೆ, ಮಾನವೀಯ ಹೃದಯ ಇದ್ದರೆ, ಇವುಗಳನ್ನು ಧಿಕ್ಕರಿಸಿ ನಡೆಯಲು ಆಗುವುದಿಲ್ಲ! ಅದಕ್ಕೆ ನಮ್ಮ ಮೇಲೆ ಹೇರಲಾದ ಸನಾತನ ಬಟ್ಟೆಯನ್ನು ಕಳಚಿ, ಕಿತ್ತೆಸೆದು ಬತ್ತಲಾಗುವ- ನಮ್ಮವರ ಎದುರೇ ನೀಚರಾಗುವ, ಧರ್ಮ ವಿರೋಧಿ ಎನಿಸಿಕೊಳ್ಳುವ ಧೈರ್ಯ ಬೇಕು.
ಅಂದ ಹಾಗೆ, ನನಗೆ ಮೊಲೆ ಕೊಟ್ಟ ಕೊರಗ ತಾಯಿಯ ಹೆಸರು- ಚೋಮು. ನನ್ನ ತಮ್ಮ ತಂಗಿಯರಿಗೆ ಇಟ್ಟ ಹೆಸರುಗಳನ್ನು ಅವರಿಗೆ ಮುಜುಗರವಾಗಬಹುದಾದ ಕಾರಣದಿಂದ ನನಗೆ ಹೇಳುವ ಹಕ್ಕಿಲ್ಲವಾದರೂ, ನನ್ನ ಹೆಸರು ಹೇಳುತ್ತೇನೆ- ಮಾಂಕು. ಕೊರಗರ ಬಗ್ಗೆ, ದಲಿತರ ಬಗ್ಗೆ ಏನೇ ಕೆಟ್ಟ ಮಾತಾಡಿದರೆ, ಯಾಕೋ ನನ್ನ ಮುದಿ ರಕ್ತವೂ ಕುದಿಯುತ್ತದೆ.
ಮುಂದೆ ಇನ್ನಷ್ಟು ನೋಡೋಣ.