Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೋದಿ ಸರ್ಕಾರದಿಂದ ತೆರಿಗೆ ಪಾಲಿನಲ್ಲಿ ಕರ್ನಾಟಕ್ಕೆ ಅನ್ಯಾಯ!

ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ಚುನಾಯಿತರಾದ ಸಂಸದೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಾ? ಸದ್ಯ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ಇವರು, 2016 ರಿಂದ, ಕರ್ನಾಟಕದಿಂದ ಚುನಾಯಿತರಾದ ನಂತರ ನಮ್ಮ ರಾಜ್ಯಕ್ಕಾಗಿ ಏನು ಮಾಡಿದ್ದಾರೆ?

ಗಣತಂತ್ರ ದೇಶವಾಗಿರುವ ಭಾರತದಲ್ಲಿ ಪ್ರತೀ ರಾಜ್ಯವೂ ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ. ಆಗ ಅಲ್ಲಿನ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯದ ಒಳಿತಿಗಾಗಿ ರಾಷ್ಟ್ರಮಟ್ಟದಲ್ಲಿ ದನಿಯೆತ್ತಬೇಕು. ಡಬಲ್‌ ಇಂಜೀನ್‌ ಸರ್ಕಾರ ಇದೆ ಎಂದು ತಕತೈ ಕುಣಿದು ಎನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಅರಿವಿಗೆ ಬಂದಿತ್ತು.

ಕರ್ನಾಟಕದ್ದೇ ಸಂಸದೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡಿದ ನಂತರ ಕರ್ನಾಟಕ ಕಾಂಗ್ರೆಸ್ ಸಂಸದ, ಡಿಕೆ ಸುರೇಶ್ ಅವರ ಒಂದು ಹೇಳಿಕೆ ವ್ಯಾಪಕ ಚರ್ಚೆಗೆ ಘ್ರಾಸವಾಯ್ತು. ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಆರ್ಥಿಕವಾಗಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡ್ತಾ ಇದೆ, ಹೀಗೇ ಆದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಡಿಕೆ ಸುರೇಶ್‌ ಹೇಳಿಕೆ ಕೊಟ್ಟರು.

“ಕೇಂದ್ರವು ದಕ್ಷಿಣ ಭಾರತದ ರಾಜ್ಯಗಳಿಗೆ ಜಿಎಸ್ಟಿ ಮತ್ತು ನೇರ ತೆರಿಗೆಯ ಸರಿಯಾದ ಪಾಲು ನೀಡುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸುವ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದು ಮುಂದುವರಿದರೆ ಪ್ರತ್ಯೇಕ ರಾಷ್ಟ್ರವಾಗಿ ವಿಭಜನೆಯಾಗುವ ಸಾಧ್ಯತೆ ಇದೆ,” ಎಂದು ಹೇಳಿದ್ದರು. ಆ ಹೇಳಿಕೆಯಲ್ಲಿ ಅನ್ಯಾಯವನ್ನು ನಿರ್ಭಯವಾಗಿ ಡಿಕೆ ಸುರೇಶ್‌ ವ್ಯಕ್ತಪಡಿಸಿದ್ದರು.

ಈಗ ಮತ್ತೆ ಸುರೇಶ್‌ ಹೇಳಿಕೆ ಬೆನ್ನಲ್ಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಮ್ಮ ತೆರಿಗೆಯ ಪಾಲನ್ನು ನಮಗೆ ಕೊಡಿ” ಎಂದು ದೆಹಲಿಯಲ್ಲಿ ಇಂದು, ಅಂದರೆ ಫೆಬ್ರವರಿ 7ಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ವಿರುದ್ಧದ ಪ್ರತಿಭಟನೆ ಅಲ್ಲ, ಹಾಗಾಗಿ ಬಿಜೆಪಿ ನಾಯಕರೂ ಬೆಂಬಲ ಕೊಡಿ ಎಂದು ಕೇಳಿಕೊಂಡು ಪತ್ರ ಬರೆದಿದ್ದಾರೆ.

ಈಗ ಉತ್ತರ ದ್ರುವದಿಂ ದಕ್ಷಿಣ ದ್ರುವಕೆ ಚುಂಬಕ ಗಾಳಿ ಬೀಸುತ್ತಿಲ್ಲ, ಉತ್ತರ-ದಕ್ಷಿಣ ಎಂಬ ಭಿನ್ನಾಭಿಪ್ರಾಯದ ದನಿ ಎದ್ದಿದೆ.

“ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರಿಂದ ಕಳೆದ 4 ವರ್ಷಗಳಲ್ಲಿ ರಾಜ್ಯಕ್ಕೆ 45 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಕನ್ನಡಿಗರು ಕಟ್ಟುವ ತೆರಿಗೆ ರಾಜ್ಯದ ಕಷ್ಟಕಾಲಕ್ಕೆ ಉಪಯೋಗವಾಗದೆ ಉತ್ತರದ ರಾಜ್ಯಗಳಿಗೆ ಹೋಗುತ್ತಿದೆ. ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರೂ ಬೆಂಬಲ ನೀಡುವಂತೆ ಪತ್ರ ಬರೆದಿದ್ದಾರೆ.

ಅನ್ಯಾಯ ಆಗಿದ್ಯಾ?
ಕೇಂದ್ರ ಸರ್ಕಾರ ಈಗ ರಾಜ್ಯಗಳಿಂದ ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಎಷ್ಟು ಪಾಲನ್ನು ರಾಜ್ಯಕ್ಕೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ. ಹೀಗೆ ಈ 15 ನೇ ಹಣಕಾಸು ಆಯೋಗ ದೇಶದ ಅನೇಕ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡಿ, ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಇದು ಕರ್ನಾಟಕದ ಆರೋಪ, ಇದರ ವಿರುದ್ಧ ಪ್ರತಿಭಟನೆ.

ಈಗ ಯಾವ ಮಾನದಂಡಗಳ ಮೂಲಕ ತೆರಿಗೆಗಳ ಪಾಲನ್ನು ಹಣಕಾಸು ಆಯೋಗ ಕೊಡ್ತದೆ? ಇದನ್ನು ನಿರ್ಧಾರ ಮಾಡುವಾ ಆ ರಾಜ್ಯದ ಜನಸಂಖ್ಯೆ, ತಲಾದಾಯದಲ್ಲಿ ಇರುವ ವ್ಯತ್ಯಾಸ, ರಾಜ್ಯದ ವಿಸ್ತೀರ್ಣತೆ ಎಷ್ಟಿದೆ..ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಎಷ್ಟು ತೆರಿಗೆ ಕೊಡಬೇಕು ಎಂಬುದನ್ನು ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ.

ಈ ಮಾನದಂಡಗಳ ಮೂಲಕ ತೆರಿಗೆಯ ಪಾಲನ್ನು ನಿರ್ಧಾರ ಮಾಡುವಾಗ ಕಡಿಮೆ ತೆರಿಗೆ ಪಾವತಿ ಮಾಡಿದ, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪಾಲು ಹೋಗುತ್ತದೆ. ಆಗ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದ ರಾಜ್ಯಗಳು ಹೆಚ್ಚಿನ ಪಾಲನ್ನು ಪಡಿತವೆ.

ಆದರೆ, ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನಂತವಕ್ಕೆ ಕಡಿಮೆ ಪಾಲು ಸಿಗುತ್ತದೆ. 2020–21ನೇ ಆರ್ಥಿಕ ವರ್ಷದವರೆಗೂ ಈ ರೀತಿ ನಡೆಯುತ್ತಿತ್ತು.

ಈಗ 15 ನೇ ಹಣಕಾಸು ಆಯೋಗ ಬಂದಿದೆ. ಇದು ಪಾಲನ್ನು ಹಂಚುವಾಗ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಬೇರೆ ರಾಜ್ಯಗಳ ಪಾಲನ್ನು ಹೆಚ್ಚು ಮಾಡಿದೆ. ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ರಾಜ್ಯಗಳಿಗೆ ಸಿಗಬೇಕಾದ ಹೆಚ್ಚಿನ ಪಾಲನ್ನು ಕೊಟ್ಟದ್ದಾರೆ.

ಆದರೆ, ಇಲ್ಲಿ ಅನಾಥವಾಗಿದ್ದು ಕರ್ನಾಟಕ. ಕನ್ನಡಿಗರಿಗೆ ಇರುವ ಸಿಟ್ಟೇ ಇದು. ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು. ಕರ್ನಾಟಕ ಬಿಟ್ಟು ಉಳಿದ ದಕ್ಷಿಣದ ರಾಜ್ಯಗಳಿಗೆ 2018–19ರಲ್ಲಿ ಸಿಕ್ಕಿದ್ದ ತೆರಿಗೆ ಪಾಲಿನ ಮೊತ್ತಕ್ಕಿಂತ ಹೆಚ್ಚು 2022–23ರಲ್ಲಿ ಸಿಕ್ಕಿದೆ.

2018–19ರಲ್ಲಿ ಕರ್ನಾಟಕಕ್ಕೆ ಸಿಕ್ಕಿದ ತೆರಿಗೆ ಆದಾಯದ ಪಾಲು 35,894 ಕೋಟಿ ರುಪಾಯಿಯಷ್ಟೇ. ಅದೇ ಕಡಿಮೆ ಅಂತ ಅಂದುಕೊಂಡರೆ, 2022–23ರಲ್ಲಿ ಸಿಕ್ಕಿದ್ದು ಕೇವಲ 34,496 ಕೋಟಿ ಮಾತ್ರ. ಹಿಂದಿಗಿಂತಲೂ ಕಡಿಮೆ.

ಈ 15 ನೇ ಹಣಕಾಸು ಆಯೋಗ ಲೆಕ್ಕ ಹಾಕಿದಂತೆ ನಾವು ತೆರಿಗೆ ಪಾಲನ್ನು ಹಂಚುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಆಗಾಗ ಹೇಳುತ್ತದೆ. ಇದನ್ನು ನಾವು ನಂಬಿದರೆ, 2019–20ರವರೆಗೆ ಕರ್ನಾಟಕ್ಕೆ ಶೇ 4.74ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಈ 15 ನೇ ಹಣಕಾಸು ಆಯೋಗ ಈಗ ಇದನ್ನು ಶೇ 3.64ಕ್ಕೆ ಇಳಿಸಿದೆ.

ಈ ಲೆಕ್ಕಾಚಾರವನ್ನು ಹಣಕಾಸು ಆಯೋಗ ಕೇರಳ ಮತ್ತೆ ಕರ್ನಾಟಕಕ್ಕೆ ಮಾತ್ರ ಯಾಕೆ ಉಲ್ಟಾ ಬರುವಂತೆ ಮಾಡಿದೆ? ಉತ್ತರ ಭಾರತದ, ಮಧ್ಯ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದ ದೊಡ್ಡ ಪಾಲಿನಲ್ಲಿ ಹೇಳಿಕೊಳ್ಳುವಂತ ಹೆಚ್ಚು ಅಥವಾ ಕಡಿಮೆ ಆಗಿಲ್ಲ. ಆದರೂ ಅವೇ ಹೆಚ್ಚಿನ ಪಾಲನ್ನು ನುಂಗುತ್ತಿದ್ದಾವೆ.ಇಲ್ಲೆಲ್ಲಾ ಬಿಜೆಪಿ ಸರ್ಕಾರ ಕೂಡ ಇದೆ.

ಆದರೆ ಈ ಹಿಂದೆ ಕಡಿಮೆ ಪಾಲನ್ನು ಪಡೆಯುತ್ತಿದ್ದ ಆಂದ್ರ, ತಮಿಳುನಾಡಿನಂತ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಿಗೆ ಈ ಬಾರಿ ಏರಿಕೆಯಾಗಿದೆ. ಯಾಕೆ?

2018–19ಕ್ಕೆ ಹೋಲಿಸಿದರೆ 2023–24ರಲ್ಲಿ ಒರಿಸ್ಸಾಗೆ ತೆರಿಗೆ ಪಾಲು ₹10,000 ಕೋಟಿಗಿಂತ ಹೆಚ್ಚಾಗಿದೆ. ಆಂದ್ರಕ್ಕೆ ₹8,551 ಕೋಟಿ ಹೆಚ್ಚು ಸಿಕ್ಕಿದೆ, ತಮಿಳುನಾಡಿಗೆ ₹11,026 ಕೋಟಿ ಹೆಚ್ಚು ಪಾಲು ಸಿಕ್ಕಿದೆ. ಅದರೆ ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು? ಕೇವಲ ಏರಿಕೆಯಾಗಿದ್ದು ಎಷ್ಟು? ₹1,358 ಕೋಟಿ ಮಾತ್ರ ಮಾತ್ರ ಏರಿಕೆಯಾಗಿದೆ. ಅದೂ 3.8% ಮಾತ್ರ!

ಈಗ 14 ನೇ ಹಣಕಾಸು ಆಯೋಗ ಹೇಳಿದಂತೆ ಪಾಲು ಕೊಟ್ಟರೂ 2023–24ರಲ್ಲಿ ಕರ್ನಾಟಕಕ್ಕೆ ಸಿಗಬೇಕಾಗಿದ್ದು ₹48,517 ಕೋಟಿ. ಆದರೆ ಸಿಕ್ಕಿದ್ದು ಎಷ್ಟು ಗೊತ್ತಾ? ₹37,252 ಕೋಟಿ! ಮೋದಿ ಸರ್ಕಾರ ಈ ಒಂದೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹11,265 ಕೋಟಿ ರುಪಾಯಿ ಮೋಸ ಮಾಡಿದೆ.

ಸರಿಯಪ್ಪಾ…. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನ ಮಧುರೈ ಮೂಲದವರು. ಕರ್ನಾಟಕಕ್ಕೆ ಬಂದರು. 2016 ರಲ್ಲಿ ಕರ್ನಾಟಕದಿಂದ ಗೆದ್ದು ಸಂಸದೆ ಆದರು. ರಕ್ಷಣೆ ಅದೂ ಇದೂ ಅಂತ ಈಗ ಆರ್ಥಿಕ ಸಚಿವೆ. ಕರ್ನಾಟಕದವರು ಅಲ್ಲದೇ ಇರಬಹುದು. ಆದರೆ ಗೆದ್ದಿದ್ದು ಕರ್ನಾಟಕದ ಜನತೆಯ ಓಟಿನಿಂದ ಅಲ್ವಾ? ಈಗ ಕರ್ನಾಟಕವನ್ನೇ ಮರೆತು ಬಿಟ್ಟಿದ್ದಾರೆ.

ಗೆಲ್ಲಿಸಿದ ತಪ್ಪಿಗೆ ಇವತ್ತು ತೆರಿಗೆ ಹಂಚಿಕೆಯಲ್ಲಿ ಈ ರೀತಿ ಅನ್ಯಾಯ ಮಾಡಿದ್ದಾರೋ? ಸರಿ, ಇವರು ಗೆದ್ದಿದ್ದು ಮಾತ್ರ ಕರ್ನಾಟಕದಿಂದ, ಆದರೆ ಇವರು ಕರ್ನಾಟಕದವರು ಅಲ್ಲ ಅಂತಲೇ ಹೇಳೋಣ…. ತೆರಿಗೆ ಪಾಲಿನಲ್ಲಿ ಇಷ್ಟು ಕಡಿಮೆ ಮಾಡುವಾಗ ಕರ್ನಾಟಕದಲ್ಲೇ ಹುಟ್ಟಿ, ಕನ್ನಡಿಗರ ಓಟಿನಿಂದಲೇ ಗೆದ್ದ ಬಿಜೆಪಿ ಸಂಸದರು ಯಾಕೆ ಮೌನವಾಗಿದ್ದಾರೆ? ಮೋದಿಯವರು ಇವರಿಗೆ ಕಣ್‌ ಕಟ್…ಬಾಯ್‌ ಮುಚ್… ಎಂದು ಪಿನಿಷ್‌ಮೆಂಟ್‌ ಕೊಟ್ಟಿದ್ದಾರಾ?

ಮೋದಿಯವರು ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಇವರ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಗೊತ್ತಾ? ಗುಜರಾತ್‌ಗೆ ಈ ಬಾರಿ ತೆರಿಗೆ ಪಾಲಿನಲ್ಲಿ ಶೇ 51ರಷ್ಟು ಏರಿಕೆಯಾಗಿದೆ. 2018–19ರಲ್ಲಿ ₹23,489 ಕೋಟಿ ತೆಗೆದುಕೊಂಡಿದ್ದ ಗುಜರಾತ್‌ಗೆ 2023–24ರಲ್ಲಿ ₹35,525 ಕೋಟಿ ಸಿಕ್ಕಿದೆ. ₹12,036 ಕೋಟಿ ಹೆಚ್ಚು ಸಿಕ್ಕಿದೆ.

ಗುಜರಾತ್‌ನಷ್ಟು ಬೇರೆ ಯಾವ ರಾಜ್ಯಕ್ಕೂ ಸಿಕ್ಕಿಲ್ಲ. ಇದಕ್ಕೆ ಕಾರಣ, ಬಿಜೆಪಿ ಗುಜರಾತ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವರಿಗೆ ಅಲ್ಲಿ ಗೆಲ್ಲುವುದಕ್ಕೆ ಎಲ್ಲವೂ ಸುಲಭವಾಗಿಲ್ಲ. ಗುಜರಾತ್‌ ಮಾಡೆಲ್‌ ಎಂಬುದು ಒಂದು ಸುಳ್ಳು ಎಂಬುದು ಗೊತ್ತಾಗಿದೆ. ಹೀಗಾಗಿ, ಇಲ್ಲಿಗೆ ಹೆಚ್ಚಿನ ಪಾಲನ್ನು ಕೊಟ್ಟಿದ್ದಾರೆ.

ಇನ್ನು ದಕ್ಷಿಣ ಭಾರತದಲ್ಲಿ ತಮ್ಮ ಹಿಡಿತವನ್ನು ಸರಿಯಾಗಿ ಸಾಧಿಸಲು, ತಮಿಳುನಾಡು, ಆಂದ್ರಗಳಿಗೆ ತರಿಗೆ ಪಾಲನ್ನು ಹೆಚ್ಚು ಮಾಡಲಾಗಿದೆ. ಆದರೆ ಕರ್ನಾಟಕಕ್ಕೆ ಮತ್ತೆ ಕೇರಳಕ್ಕೆ ಮೋದಿ ಅನ್ಯಾಯ ಮಾಡಿದ್ದಾರೆ.

“ಕೇರಳ ಕೂಡ ಕೇಂದ್ರದ ಈ ಅನ್ಯಾಯದ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ತೆರಿಗೆ ಆದಾಯದಲ್ಲಿ ರಾಜ್ಯ ಸಂಗ್ರಹಿಸುವ ಪ್ರತಿ 100 ರೂ.ಗೆ ಕೇರಳಕ್ಕೆ ಕೇವಲ 21 ರೂ ಸಿಗುತ್ತಿದೆ. ಉತ್ತರ ಪ್ರದೇಶಕ್ಕೆ 46 ರುಪಾಯಿ ಹೋಗುತ್ತದೆ,” ಎಂದು ಕೇರಳದ ಆರ್ಥಿಕ ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿಕೆ ನೀಡಿದ್ದಾರೆ.

ಇನ್ನು ಹಣಕಾಸು ಆಯೋಗ ಒಂದು ಇಂಡಿಪೆಂಡೆಂಟ್‌ ಬಾಡಿ, ಕೇಂದ್ರ ಅದರ ಜೊತೆ ಯಾವುದೇ ರೀತಿಯ ಹಿಂಬಾಗಿಲಿನ, ಮುಂಬಾಗಿಲಿನ, ಫಾರ್ಮಲ್‌, ಇನ್‌ಫಾರ್ಮಲ್‌ ಮಾತುಕತೆ ಮಾಡಲು ಸಾಧ್ಯ ಇಲ್ಲ. ಹಾಗಾಗಿ ಹಣಕಾಸು ಆಯೋಗ ಏನು ಹೇಳಬೇಕು ಎಂಬುದು, ಹೇಗೆ ಆದಾಯವನ್ನು ಹಂಚಬೇಕು ಎಂಬುದನ್ನು ಕೇಂದ್ರ ನಿರ್ಧರಿಸಲು ಸಾಧ್ಯ ಇಲ್ಲ. ಹೀಗೆ ಯಾರೇ ಆದರೂ ಸಮರ್ಥನೆ ಮಾಡಿಕೊಂಡಾರು!

ಆದರೆ,
2014 ರಲ್ಲಿ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಹಣಕಾಸು ಆಯೋಗದ ಜೊತೆಗೆ ಹಿಂದಿನ ಬಾಗಿಲಿನಿಂದ, ಅಸಂವಿಧಾನಿಕವಾಗಿ ಮಾತುಕತೆ ನಡೆಸಿ ರಾಜ್ಯಗಳಿಗೆ ಸೇರಬೇಕಾದ ತೆರಿಗೆ ಆದಾಯದ ಪಾಲನ್ನು ಕಡಿಮೆ ಮಾಡುವಂತೆ ಒತ್ತಡ ಹೇರಿದ್ದರು. ಅದಕ್ಕೆ ಹಣಕಾಸು ಆಯೋಗ ಹಾಗೂ ಮೋದಿ ಮಧ್ಯೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಹ್ಮಣ್ಯಂ.

ಆಗ ಹಣಕಾಸು ಆಯೋಗದ ಚೇರ್ಮನ್‌ ಆಗಿದ್ದ, ಆರ್‌ಬಿಐನ ಎಕ್ಸ್‌ ಗವರ್ನರ್‌ ವೈವಿ ರೆಡ್ಡಿ ವಿರೋಧ ಮಾಡಿದ್ದರು. ಅವರು ನೇರವಾಗಿ ಸುಬ್ರಹ್ಮಣ್ಯಂ ಅವರಿಗೆ “ಅಪ್ಪಾ, ಹೋಗಿ ನಿಮ್ಮ ಬಾಸ್ [ಪ್ರಧಾನಿ] ಗೆ ಹೇಳಿ, ಅವರಿಗೆ ಯಾವುದೇ ಆಯ್ಕೆಯಿಲ್ಲ ಅಂತ” ಎಂದು ಅವರು ಹೇಳಿದ್ದರು.

ಸೆಂಟರ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್‌ಇಪಿ) ಆಯೋಜಿಸಿದ್ದ ಭಾರತದಲ್ಲಿ ಹಣಕಾಸು ವರದಿ ಕುರಿತ ವಿಚಾರ ಸಂಕಿರಣದಲ್ಲಿ ಪ್ಯಾನೆಲಿಸ್ಟ್ ಆಗಿ ಮಾತನಾಡುತ್ತಾ ಸುಬ್ರಹ್ಮಣ್ಯಂ ಇದನ್ನು ಹೇಳಿದ್ದರು. ಅವರು ಭಾಷಣ ಮಾಡುವಾಗ ಆ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಲೈವ್‌ ಹೋಗುತ್ತಿತ್ತು. ತಕ್ಷಣ ಅದನ್ನು ನಿಲ್ಲಿಸಿ, ವಿಡಿಯೋವನ್ನು ಡಿಲಿಟ್‌ ಮಾಡಲಾಯ್ತು.

14 ನೇ ಹಣಕಾಸು ಆಯೋಗದ ರೆಕಮಂಡೇಷನ್‌ ಅನ್ನು ಮೋದಿ ಸರ್ಕಾರ ತಿರಸ್ಕರಿಸಿತ್ತು. ಯಾವಾಗ ಹಣಕಾಸು ಆಯೋಗ ಮೋದಿಗೆ ಬಗ್ಗಲಿಲ್ಲವೋ, ಎರಡೇ ದಿನಗಳಲ್ಲಿ ಇಡೀ ದೇಶದ ಬಜೆಟ್‌ ಅನ್ನು ಬರೆದರು. ಯಾಕೆಂದರೆ, ಆಯೋಗದ ವರದಿ ಬರುವುದು ತಡವಾಯ್ತು, ಆ ಹೊತ್ತಿಗೆ ಎಲ್ಲಾ ಬಜೆಟ್‌ ಬರೆಯಲಾಗಿದೆ ಅಂತ ಹೇಳಿಕೊಳ್ಳಲು ತುರಾತುರಿಯಲ್ಲಿ ಇದನ್ನು ಮಾಡಿದರು. ನೀತಿ ಆಯೋಗದ ಕಾನ್ಪರೆನ್ಸ್‌ ಹಾಲ್‌ನಲ್ಲಿ ಕೇವಲ ನಾಲ್ಕು ಜನ ಕೂತು ಎರಡೇ ದಿನದಲ್ಲಿ ಬಜೆಟ್‌ ಬರೆದೆವು ಅಂತ ಸುಬ್ಯಹ್ಮಣ್ಯಂ ಹೇಳಿದ್ದಾರೆ.

ಅಂದರೆ, ತಾವು ಅಧಿಕಾರಕ್ಕೆ ಬಂದ 2014 ರಲ್ಲೇ ಸ್ವತಂತ್ರ ಸಂಸ್ಥೆಯಾದ ಹಣಕಾಸು ಆಯೋಗವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು, ಅದರ ಕತ್ತಿಗೆ ಸಂಕೋಲೆ ಹಾಕಲು ಮೋದಿ ಸರ್ಕಾರ ತಂತ್ರ ಹೂಡಿತ್ತು. ಈಗ ರಾಜ್ಯಗಳಿಗೆ ಎಷ್ಟು ಪಾಲು ಕೊಡಬೇಕು ಎಂಬುದನ್ನು ತನ್ನ ರಾಜಕೀಯ ತಂತ್ರಗಳ ಭಾಗವಾಗಿ ಹಣಕಾಸು ಆಯೋಗಕ್ಕೆ ಮೋದಿ ಸರ್ಕಾರವೇ ಯಾಕೆ ಹೇಳಿರಬಾರದು?

ಈಗ ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇಂದು, ಫೆಬ್ರವರಿ 7 ಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಡೆಲ್ಲಿ ಚಲೋ ಮಾಡ್ತಾ ಇದ್ದಾರೆ. ಈ ಪ್ರತಿಭಟನೆಗೆ ತಮಿಳುನಾಡು, ಕೇರಳ, ತೆಲಂಗಾಣ ಕೂಡ ಬೆಂಬಲ ನೀಡಲಿದೆ. ಬಿಜೆಪಿಯ ಅನ್ಯಾಯದ ವಿರುದ್ಧ ದಕ್ಷಿಣದ ರಾಜ್ಯಗಳು ಒಂದಾಗುವ ಲಕ್ಷಣ ಕಾಣಿತ್ತಿದೆ. ಡಿಕೆ ಸುರೇಶ್‌ ಹೇಳಿದಂತೆ ನಮಗೆ ಪ್ರತ್ಯೇಕ ರಾಷ್ಟ್ರ ಬೇಡ. ಕನ್ನಡಿಗರಿಗೆ ಏನು ದಕ್ಕಬೇಕೋ..ಅದನ್ನು ಕೊಡಲಿ..ಅಷ್ಟೇ….

ಲೇಖನ: ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು