ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಮುಸುಕಿನ ಗುದ್ದಾಟ ಈಗ ಮಠಕ್ಕೆ ಬೀಗ ಹಾಕುವ ಹಂತಕ್ಕೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಪೀಠದಲ್ಲಿ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಲಾಗಿದ್ದು, ಭಕ್ತರಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಈಗ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಸೂಚನೆ ಮೇರೆಗೆ ಮಠದ ಆವರಣದ ಸುತ್ತಲೂ ಸಿಸಿ ಟಿವಿ ಅಳವಡಿಸಲಾಗಿದೆ. ಮಠದ ಆವರಣದಲ್ಲಿ ಅನೈತಿಕ ಚಟುವಟಿಕೆ ಹೆಚ್ಚಿದ ಕಾರಣ ಮಠದ ಆವರಣದಲ್ಲಿ ಸಿಸಿ ಕ್ಯಾಮೆರಾ ಹಾಕಿದ ಬಗ್ಗೆ ಶಾಸಕರ ಮೂಲದಿಂದ ತಿಳಿದುಬಂದಿದೆ.
ಮಠ ನಮ್ಮ ಸಂಪತ್ತು. ಅದರ ಟ್ರಸ್ಟಿ ಅಧ್ಯಕ್ಷನಾಗಿ ರಕ್ಷಣೆ ಮಾಡಬೇಕಾಗಿರುವುದು ನನ್ನ ಕರ್ತವ್ಯ. ಮಠದ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದರ ಪಾವಿತ್ರ್ಯತೆ ಹಾಳಾಗಬಾರದು. ಈ ನಿಟ್ಟಿನಲ್ಲಿ ಅದರ ರಕ್ಷಣೆಗೆ ನಾವು ಸದಾ ಬದ್ಧರಾಗಿರಬೇಕಾಗುತ್ತದೆ. ಮಠದ ಸುರಕ್ಷತೆ ದೃಷ್ಟಿಯಿಂದ ಗೇಟ್ ಅಳವಡಿಸಲಾಗಿದೆ ಎಂದು ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.