Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ಯಾತ್ರೆಯಲ್ಲಿ ಅತಿಹಿಂದುಳಿದ ಸಮುದಾಯಗಳಿಗೆ ಅಪಮಾನ: ಸಿದ್ಧರಾಮಯ್ಯನವರೇ ಹೀಗೇಕೆ ಮಾಡಿದಿರಿ?

ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಾಡುಗೊಲ್ಲ, ಕೋಲೆಬಸವ, ಕೋಲಿ, ಕಬ್ಬಲಿಗ, ಹಕ್ಕಿಪಿಕ್ಕಿ, ದೊಂಬಿದಾಸ ಸಮುದಾಯದ ನಾಯಕರಿಗೆ ಅಪಮಾನ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯಾತ್ರೆ ಕರ್ನಾಟಕ ಪ್ರವೇಶಿಸಿದ ಸಂದರ್ಭದಲ್ಲಿ ಕನ್ನಡಪರ ಚಿಂತಕ ಅರುಣ್ ಜಾವಗಲ್ ಅವರನ್ನು ಆಹ್ವಾನಿಸಿ, ರಾಹುಲ್ ಜೊತೆಗಿನ ಸಂವಾದದಲ್ಲಿ ಮಾತನಾಡಲು ಅವಕಾಶ ನೀಡದೇ ಇದ್ದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಂಥದ್ದೇ ಘಟನೆ ರಾಯಚೂರಿನಲ್ಲೂ ನಡೆದಿದ್ದು, ಹಿಂದುಳಿದ ಸಮುದಾಯದ ಮುಖಂಡರಿಗೆ ಆಹ್ವಾನ ನೀಡಿ, ವಿಶೇಷ ಪಾಸ್ ಕೊಟ್ಟು ಕರೆಯಿಸಿಕೊಂಡು ಅಪಮಾನವೆಸಗಿ ಹಿಂದಕ್ಕೆ ಕಳುಹಿಸಲಾಗಿದೆ.

ಈ ಸಂಬಂಧ ‘ಪೀಪಲ್ ಮೀಡಿಯಾ’ ಜೊತೆ ಕಾಡುಗೊಲ್ಲ ಸಮುದಾಯದ ಮುಖಂಡರಾದ ನಾಗಣ್ಣ ಮಾತನಾಡಿದ್ದು, ಅವರ ಹೇಳಿಕೆಯ ಪೂರ್ಣಪಾಠ ಹೀಗಿದೆ:

ಈ ಘಟನೆ ನಡೆದು ಸುಮಾರು ಮೂರು ದಿನ ಆಯಿತು, ಸಿದ್ದರಾಮಯ್ಯನವರ ಉಗ್ರ ಅಭಿಮಾನಿಯಾದ ನನಗೆ ಇದನ್ನು ಹೇಳಲು ಮನಸ್ಸಿಲ್ಲ, ಹೇಳದಿದ್ದರೆ, ಹಿಂದುಳಿದ ವರ್ಗಗಳಲ್ಲಿನ ಅತಿ ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಚ್ಚೆತ್ತುಕೊಳ್ಳಲಾರವು ಮತ್ತು ಸತ್ಯ ಹೇಳದಿದ್ದರೆ ನನಗೆ ಆತ್ಮವಂಚನೆ ಎನಿಸುತ್ತದೆ. ಆದ್ದರಿಂದ ಹೇಳುತ್ತಿದ್ದೇನೆ.

ಧರ್ಮ-ಜಾತಿ ದ್ವೇಷ, ಅಸಹನೆ, ಹಿಂಸೆ, ಸರ್ಕಾರದ ದಬ್ಬಾಳಿಕೆ, ಭ್ರಷ್ಟಾಚಾರದಿಂದ ಬಾಧಿತವಾಗಿರುವ ಭಾರತವನ್ನು ರಕ್ಷಣೆ ಮಾಡಿ ಇಂಡಿಯಾದ ಜನರನ್ನು ಬೆಸೆಯುವ  ಮಹತ್ವಾಕಾಂಕ್ಷೆ ಯಿಂದ  ‘ಭಾರತ್ ಜೋಡೋ  ಯಾತ್ರೆ’ ಎಂಬ ಹೆಸರಿನಲ್ಲಿ  ಪ್ರಿಯ ರಾಹುಲ್ ಗಾಂಧಿಯವರು ಪ್ರಾರಂಭಿಸಿರುವ ಕಾಲ್ನಡಿಗೆ ಜಾತಕ್ಕೆ ಅಭೂತಪೂರ್ವ ಜನ ಸ್ಪಂದನೆ ಸಿಗುತ್ತಿದೆ. ಈ ಜಾತಾದಲ್ಲಿ ಸಮಾಜದ ರೈತಾಪಿ ವರ್ಗ, ಮಹಿಳೆಯರು, ದಲಿತರು, ನಿರುದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ಆದಿವಾಸಿಗಳು ,ಅಲೆಮಾರಿಗಳು, ಬುಡಕಟ್ಟಿನ ಜನರು ಅಲ್ಪಸಂಖ್ಯಾತರು, ವಿಕಲ ಚೇತನರು, ಯುವಕ ಯವತಿಯರು  ವಯೋವೃದ್ದರು  ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ  ತಬ್ಬಿ  ಆಲಂಗಿಸಿಕೊಂಡು  ತಮ್ಮ ದುಃಖ  ದುಮ್ಮಾನಗಳನ್ನು  ಹೇಳಿಕೊಳ್ಳುತ್ತಿದ್ದಾರೆ.

ಇಂತಹ ದುರಿತ ಕಾಲದಲ್ಲಿ  ನೊಂದ ಜನರನ್ನು ಅಪ್ಪಿಕೊಂಡು ಸಾಂತ್ವನ ಹೇಳುವ ರಾಹುಲ್ ಅವರ ವ್ಯಕ್ತಿತ್ವ  ಅತೀ ಭಾವುಕನಾದ ನನಗೆ ತುಂಬಾ ಇಷ್ಟವಾಯಿತು.  ಕಷ್ಟದಲ್ಲಿರುವ ಜನರನ್ನು ರಾಹುಲ್ ಅಪ್ಪಿಕೊಂಡ ಫೋಟೋಗಳನ್ನು ನಾನು ನೋಡಿದಾಗ  ಎಷ್ಟೋ ಬಾರಿ ನನ್ನ ಹೃದಯ ಮತ್ತು ಕಣ್ಣುಗಳು ನನ್ನ ನಿಯಂತ್ರಣ ಕಳೆದುಕೊಂಡು ಕಣ್ಣೀರು ಸುರಿಸಿದ್ದು ಉಂಟು.  ನಾನು ಕೂಡ ರಾಹುಲ್ ಗಾಂಧಿ ಅವರನ್ನು ನೋಡಿ  ನನ್ನ ತಬ್ಬಲಿ ಸಮುದಾಯವಾದ ಕಾಡುಗೊಲ್ಲ ಜನಾಂಗದ  ನೋವುಗಳನ್ನು ಮತ್ತು ನಮಗೆ ಆಗುತ್ತಿರುವ ಅನ್ಯಾಯಗಳನ್ನು  ಅವರಿಗೆ ತಿಳಿಸಬೇಕು ಅನ್ನಿಸುತ್ತಿತ್ತು.

ಆದರೆ ನಮ್ಮಂತ ಸಣ್ಣ ಬುಡಕಟ್ಟು ಸಮುದಾಯದವರಿಗೆ ಅದು ಸಾಧ್ಯವಿಲ್ಲ. ಏಕೆಂದರೆ ನಮ್ಮ ಜಾತಿಯಲ್ಲಿ ಅಷ್ಟು ಎತ್ತರಕ್ಕೆ ಬೆಳೆದಿರುವ ಯಾವ ನಾಯಕರೂ ಇಲ್ಲ‌. ಇಂತಹ ವ್ಯಥೆಪಟ್ಟುಕೊಳ್ಳುತ್ತಿದ್ದ ಸಂದರ್ಭದಲ್ಲಿ  ಇದ್ದಕ್ಕಿದ್ದಂತೆ ಡಾ.ಸಿ.ಎಸ್. ದ್ವಾರಕಾನಾಥ್ ಅವರು ದಿನಾಂಕ 20/10/2022 ರಂದು ಪೋನ್ ಮಾಡಿ  “ನಾಳೆ ರಾಯಚೂರು ಜಿಲ್ಲೆಯ ಗಿಲ್ಲೆಸೆಗೂರು ಪಿ.ಯು ಕಾಲೇಜಿನಲ್ಲಿ  ನಿಮ್ಮ ಕಾಡುಗೊಲ್ಲ ಸಮುದಾಯವನ್ನು ಪ್ರತಿನಿಧಿಸಿ ರಾಹುಲ್ ಗಾಂಧಿ ಅವರ ಜೊತೆಗೆ ಸಂವಾದ ಮಾಡುವ ಸಮಯ ನಿಗದಿ ಆಗಿದೆ ನೀವು ಕೂಡಲೇ ರಾಯಚೂರಿಗೆ ಹೊರಡಿ, ನಿಮ್ಮ ಜೊತೆಗೆ  ಕೊಲೇಬಸವ ಸಮುದಾಯದ ಶ್ರೀನಿವಾಸ, ಹಕ್ಕಿ- ಪಿಕ್ಕಿ ಸಮುದಾಯದ ಪುನೀತ್, ಕೊಲಿ  ಮತ್ತು ಕಬ್ಬಲಿಗ ಸಮುದಾಯದ ಶಿವಪುತ್ರಪ್ಪ, ದೊಂಬಿದಾಸ ಸಮುದಾಯದ ರಂಗಮುನಿದಾಸ್ ಸೇರಿಕೊಳ್ಳುತ್ತಾರೆ” ಎಂದರು.

ನಾನು ತುಂಬಾ ಸಂತೋಷದಿಂದ ರಾಯಚೂರು ತಲುಪಿದೆ. ನಿಗದಿಯಂತೆ ರಾಹುಲ್ ಗಾಂಧಿ ಜೊತೆಗಿನ ಸಂವಾದ ಕಾರ್ಯಕ್ರಮದ ವ್ಯವಸ್ಥೆ ಆಗಿತ್ತು. ನಮ್ಮ ಐದು ಸಮುದಾಯಗಳ ಪ್ರತಿನಿಧಿಗಳ ತಂಡಕ್ಕೆ  ಪ್ರವೇಶಕ್ಕೆ ವಿಶೇಷ ಪಾಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪಾಸ್ ಪಡೆದು ರಾಹುಲ್ ಗಾಂಧಿ ಅವರು ತಂಗಿದ್ದ ಗಿಲ್ಲೆಸೆಗೂರು ಪಿ.ಯು ಕಾಲೇಜಿನ ಒಳಕ್ಕೆ ಹೋದೆವು  ಅಲ್ಲಿ ಮಾಜಿ  I A S ಅಧಿಕಾರಿ ಸೆಂಥಿಲ್ ಅವರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿಸಿದರು. ಎರಡು ಗಂಟೆಗೆ ರಾಹುಲ್ ಗಾಂಧಿ ಅವರ ಜೊತೆಗೆ ನಿಮ್ಮ ಸಂವಾದ ಕಾರ್ಯಕ್ರಮ ಇದೆ ನೀವು ಕನ್ನಡದಲ್ಲಿಯೇ ನಿಮ್ಮ ಸಮುದಾಯ ಸಮಸ್ಯೆಗಳನ್ನು ಹೇಳಿಕೊಳ್ಳಿ ನಾನು ಇಂಗ್ಲಿಷ್ ಗೆ ಭಾಷಾಂತರ ಮಾಡುತ್ತೇನೆ” ಎಂದರು.

ತುಂಬಾ ಜವಾಬ್ದಾರಿಯಿಂದ ನಾವು ನಮ್ಮ ಸಮುದಾಯಗಳ ಸ್ಥಿತಿ ಗತಿಗಳ ಬಗ್ಗೆ ಮಾತನಾಡಲು ಟಿಪ್ಪಣಿ ಮಾಡಿಕೊಂಡು  ಕಾಯುತ್ತಿದೆವು. ರೈತ ಮುಖಂಡರ ಸಂವಾದ ಮುಗಿದ ನಂತರ ನಮ್ಮನ್ನು ಕರೆದರು  ನಾವು ಸಂವಾದ ನಡೆಯುವ ಕಾರ್ಯಕ್ರಮದ ಕೊಠಡಿಗೆ ಹೋಗುವ ಸಂದರ್ಭದಲ್ಲಿ  ರವಿವರ್ಮ ಕುಮಾರ್  ಅವರ ನೇತೃತ್ವದಲ್ಲಿ ಬಂದಿದ್ದ  “ಹಿಂದುಳಿದ ವರ್ಗಗಳ ಒಕ್ಕೂಟ”ದ  ರಾಮಚಂದ್ರ, ಎಚ್.ಎಂ. ರೇವಣ್ಣ, ಬೈರತಿ ಸುರೇಶ್ ಮತ್ತು ಅವರ ಬಳಗ ನಮ್ಮನ್ನು ಒಳಗಡೆ ಹೋಗಲು ಬಿಡಲಿಲ್ಲ . “ಹಿಂದುಳಿದ ವರ್ಗಗಳ ವತಿಯಿಂದ  ಒಕ್ಕೂಟದ ಸದಸ್ಯರು ಮಾತ್ರ ಒಳಕ್ಕೆ ಹೊಗಬೇಕು ನೀವು ಯಾರು?” ಎಂದು ಎಚ್.ಎಂ.ರೇವಣ್ಣ ಅವರು ನನ್ನ ಕತ್ತಿನ ಪಟ್ಟಿಹಿಡಿದು ನೂಕಿದರು.  ಆಗ ನಾನು “ಸರ್ ನಾನು ಅತ್ಯಂತ ಹಿಂದುಳಿದ  ಕಾಡುಗೊಲ್ಲ ಸಮುದಾಯದ ಪ್ರತಿನಿಧಿ. ನಮಗೆ ರಾಹುಲ್ ಗಾಂಧಿ ಅವರ ಜೊತೆಗೆ ಮಾತನಾಡಲು ಸಮಯ ನಿಗದಿಯಾಗಿದೆ ನಿಮಗೆ ಅನುಮಾನವಿದ್ದರೆ ಆಯೋಜಕರ ಹತ್ತಿರ ಕೇಳಿ  ಪಟ್ಟಿಯಲ್ಲಿ ನಮ್ಮ ಹೆಸರಿದೆ. ನಮಗೆ ವಿಶೇಷ ಪಾಸ್ ಕೊಟ್ಟಿದ್ದಾರೆ ನೋಡಿ,  ನಿಮ್ಮಂತ ದೊಡ್ಡವರು ನಮ್ಮಂತಹ ತಬ್ಬಲಿ ಸಮುದಾಯದವರನ್ನು ಈ ರೀತಿಯಲ್ಲಿ ದೌರ್ಜನ್ಯ ಮಾಡಬಾರದು ನಮ್ಮನ್ನು ಒಳಗಡೆ ಬಿಡಿ ಸಾರ್” ಎಂದೆ.

ಅದಕ್ಕೆ  ಮಾಜಿ ಸಚಿವ ರೇವಣ್ಣ ಮತ್ತು ಕುರುಬ ಸಮುದಾಯದ  ರಾಮಚಂದ್ರ ನಮ್ಮ ಮೇಲೆ ವ್ಯಗ್ರರಾದರು.  ನಮ್ಮ ತಂಡದಲ್ಲಿದ್ದ  ಮೂರು ಜನರನ್ನು ಒಳಗೆ ಬಿಡದೆ ನೂಕಿದರು.  ನಾನು ಮತ್ತು ಕೊಲೇಬಸವ ಸಮುದಾಯದ ಶ್ರೀನಿವಾಸ ಅವರು ಕಷ್ಟಪಟ್ಟು ಒಳ ಹೋದೆವು. ನಾವು ಒಳ ಹೋಗುತ್ತಿದ್ದಂತೆ  ಅಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನೀವು ಯಾಕೆ?” ಎಂದು ಪ್ರಶ್ನೆ ಮಾಡಿದರು. ಆಗ ನಮ್ಮ ಪಾಸ್ ತೋರಿಸಿ “ರಾಹುಲ್ ಸರ್ ಜೊತೆಗೆ ಸಂವಾದಕ್ಕೆ ಆಹ್ವಾನಿತರಾಗಿ ಬಂದಿದ್ದೇವೆ” ಎಂದಾಗ ಒಳಗೊಳಗೆ ಗೊಣಗಿಕೊಂಡು ಅಸಹನೆಯಿಂದ ನಮ್ಮನ್ನು ನೋಡಿದರು.  ನನ್ನ ಪಕ್ಕದಲ್ಲಿ ಕುಳಿತಿದ್ದ ಕೊಲೇ ಬಸವ ಸಮುದಾಯದ ಶ್ರೀನಿವಾಸ್ “ಸರ್ ನಾವು M B C ಗಳು” ಅಂದಾಗ ಕೊಪಗೊಂಡ ಕುರುಬ ಸಮುದಾಯದ ಮುಖಂಡರು ಶ್ರೀನಿವಾಸ ಅವರನ್ನು ಹಿಡಿದು ಹಿಂದಕ್ಕೆ ತಳ್ಳಿದರು.  ಇಷ್ಟೆಲ್ಲಾ   ದೌರ್ಜನ್ಯದ ನಡುವೆ ನಾವು ರಾಹುಲ್ ಗಾಂಧಿ ಅವರ ಬಳಿಗೆ ಹೋಗಿ ಮನವಿ ಕೊಡಲು ಪ್ರಯತ್ನ ಮಾಡಿದಾಗ ಸಿದ್ದರಾಮಯ್ಯ ಅವರು ನನ್ನನ್ನು ಹಿಂದಕ್ಕೆ ನೂಕಿದರು.

ಇಷ್ಟೆಲ್ಲಾ ಸನ್ನಿವೇಶವನ್ನು ನೋಡುತ್ತಿದ್ದ ಮಧು ಬಂಗಾರಪ್ಪ ಅವರ ಬಳಿ ನಾನು ಹೋಗಿ “ಏನ್ ಸರ್ ನಮ್ಮಂತಹ ತಬ್ಬಲಿ ಸಮುದಾಯಗಳಿಗೆ  ಇವರು ಹೇಗೆ ಮಾಡುತ್ತಿದ್ದಾರೆ ನೋಡಿ” ಎಂದಾಗ  “ನಾನು ಮೂಕ ಪ್ರೇಕ್ಷಕ  ನೋ ಕಾಮೆಂಟ್ಸ್” ಎಂದು ಬಿಟ್ಟರು. ಅತೀ ಉತ್ಸಾಹದಿಂದ ನಮ್ಮ ಸಮುದಾಯಗಳ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದ ನಾವು ಹತಾಶೆಯಿಂದ ಹೊರಬಂದೆವು.

ಮಾಜಿ ಸಚಿವ ರೇವಣ್ಣ  ಅವರು ವೇದಿಕೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಸಾಕಷ್ಟು ಭಾಷಣ ಮಾಡುತ್ತಾರೆ  ಅತ್ಯಂತ ಹಿಂದುಳಿದ ಅಲಕ್ಷಿತ ಸಮುದಾಯಗಳ ಬಗ್ಗೆ ತೋರುವ ಕಾಳಜಿ ಇದೆನಾ..? ಇಂತವರ ನಾಯಕತ್ವದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತದೆಯೆ? ನಮ್ಮಂತಹ ದಿಕ್ಕಿಲ್ಲದ ಸಮುದಾಯಗಳ ಬೇರುಗಳನ್ನು ಕತ್ತರಿಸುವ ಕ್ರೌರ್ಯ ನಮ್ಮ ಅರಿವಿಗೆ ಬಂದಿದ್ದರೂ ನಾವು ಏನನ್ನೂ ಮಾತನಾಡದೇ “ಜೈ  ಹುಲಿಯಾ” “ಜೈ ಸಿದ್ದರಾಮಯ್ಯ” ಎಂದು ಜೈ ಕಾರ ಕೂಗುವುದಷ್ಟೇ ನಮ್ಮ ಯೋಗ್ಯತೇನಾ..?

ಇದು ನಾಗಣ್ಣ ಅವರ ನೊಂದ ನುಡಿಗಳು. ಕಾಂಗ್ರೆಸ್ ಮುಖಂಡರು ಹೀಗೇಕೆ ಮಾಡಿದರು? ಹೀಗೆ ಕರೆದು ಅಪಮಾನಿಸುವ ಅಗತ್ಯವೇನಿತ್ತು? ಬೇರೆಯವರ ವಿಷಯ ಹಾಗಿರಲಿ, ಸಿದ್ಧರಾಮಯ್ಯ ಅವರೇಕೆ ಹೀಗೆ ಮಾಡಿದರು?

Related Articles

ಇತ್ತೀಚಿನ ಸುದ್ದಿಗಳು