ಬೆಂಗಳೂರು: ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೈಜ ಸ್ವಾತಂತ್ರ್ಯ ಸೇನಾನಿಗಳನ್ನು ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿ೦ಪಡೆಯುವ ಮೂಲಕ ರಾಜ್ಯದಲ್ಲಿ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಸಂಘಟನೆಗಳಿಗಿಂತಲೂ ಹೆಚ್ಚು ಅಪಾಯಕಾರಿ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಉತ್ತರ ಕೊಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಿದ್ದಾರೆ ಎಂದು ಹೇಳಿದರು.
ಮದನ್ ಲಾಲ್ ಧಿಂಗ್ರಾ, ವಾಸುದೇವ ಬಲವಂತ ಫಡಕೆ ಸಹಿತ ಕಾಂಗ್ರೆಸ್ ಪಡ್ಯಂತ್ರದಿಂದ ಇತಿಹಾಸದಲ್ಲಿ ಅಜ್ಞಾತವಾಗಿರುವ ಲಕ್ಷಾಂತರ ನೈಜ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ನಮಗೆ ಸ್ವಾತ೦ತ್ರ್ಯ ಲಭಿಸಿದೆ. ಕಾಂಗ್ರೆಸ್ಸಿನಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನೈಜ ಸ್ವಾತಂತ್ರ್ಯ ಸೇನಾನಿಗಳನ್ನು ಅಪಮಾನ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಸಹಿತ ನೈಜ ದೇಶಭಕ್ತರು ಅಂದು ಕಟ್ಟಿದ್ದ ಕಾಂಗ್ರೆಸ್ ಮತ್ತು ಮೂರು ತಲೆಮಾರಿಗೆ ಬೇಕಾದಷ್ಟು ಮಾಡಿದ್ದೇವೆ ಎಂದು ಹೇಳುವ ಇಂದಿನ ಕಾಂಗ್ರೆಸ್ ಮುಖಂಡರಿಗೂ ವ್ಯತ್ಯಾಸವಿದೆ. ನಕಲಿ ಕಾಂಗ್ರೆಸ್ ನಿಷೇಧವಾಗಲಿ ಎಂದು ಜನರೇ ಬಯಸುತ್ತಿದ್ದಾರೆ ಎಂದು ಕಟೀಲ್ ಹೇಳಿದರು.
ಸ್ವಾತಂತ್ರ್ಯ ಸಿಕ್ಕಿದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮಾಗಾಂಧೀಜಿ ಹೇಳಿದ್ದರೂ ಸ್ವಪ್ರತಿಷ್ಟೆ, ಸ್ವಲಾಭಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮುಂದುವರೆಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಸ್ಥಾನಮಾನ ಸಿಗಲಿಲ್ಲ ಎಂದು ಕಾಂಗ್ರೆಸ್ಸಿಗೆ ಜಿಗಿದ ನಕಲಿ ಗಾಂಧಿಗಳ ಗುಲಾಮರಿಗೆ ಅದೆಲ್ಲ ನೆನಪಿಲ್ಲವೇ? ಎಂದು ಕಟೀಲ್ ಪ್ರಶ್ನಿಸಿದರು.