Home ರಾಜ್ಯ ಚಾಮರಾಜನಗರ ಭಾರತ ಐಕ್ಯತಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮ : ಕಾಂಗ್ರೆಸ್ ನಾಯಕರ ಮಾತುಗಳು

ಭಾರತ ಐಕ್ಯತಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮ : ಕಾಂಗ್ರೆಸ್ ನಾಯಕರ ಮಾತುಗಳು

0

ಚಾಮರಾಜನಗರ : ಇಂದಿನಿಂದ ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಶುರುವಾಗಿದ್ದು, ಯಾತ್ರೆಯು ಚಾಮರಾಜನಗರದ ಗುಂಡ್ಲುಪೇಟೆಯಿಂದ ಆರಂಭವಾಗಿದೆ. ಉದ್ಘಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವಾರು ಮುಖಂಡರು ಯಾತ್ರೆಯ ಕುರಿತು ಮಾತನಾಡಿದ್ದಾರೆ.

ಭಾರತ ಐಕ್ಯತಾ ಯಾತ್ರೆ ಉದ್ದೇಶದ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಈ ಭಾರತ ಜೋಡೋ ಯಾತ್ರೆ ಸಾಗಲಿದೆ. ಇದರ ಉದ್ದೇಶ ಬಿಜೆಪಿ ಹಾಗೂ ಆರ್ ಎಸ್ಎಸ್ ವಿಚಾರಧಾರೆಗಳಿಂದ ದೇಶದಲ್ಲಿ ಹಬ್ಬುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಹೋರಾಟ ಮಾಡುವುದು. ಈ ಯಾತ್ರೆ ಸಂವಿಧಾನದ ರಕ್ಷಣೆ ಯಾತ್ರೆ. ಸಂವಿಧಾನದ ಹೊರತಾಗಿ ಈ ನಮ್ಮ ತಿರಂಗಾಕ್ಕೆ ಬೆಲೆ ಇರುವುದಿಲ್ಲ. ಈ ಯಾತ್ರೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೂ ನಾವು ಹೆಜ್ಜೆ ಹಾಕುತ್ತೇವೆ. ಕೆಲವೊಮ್ಮೆ ಮಳೆ ಬೀಳುತ್ತದೆ, ಮತ್ತೆ ಕೆಲವೊಮ್ಮೆ ಸುಡು ಬಿಸಿಲು ಬರುತ್ತದೆ ಆದರೂ ನಾವು ನಿರಂತರವಾಗಿ ಹೆಜ್ಜೆಹಾಕುತ್ತೇವೆ. ನಾನು ಒಬ್ಬನೇ ಸಾಗುವುದಿಲ್ಲ, ನನ್ನ ಜತೆಗೆ ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿ, ಭಾಷಿಗರು ಒಟ್ಟಿಗೆ ಹೆಜ್ಜೆ ಹಾಕುತ್ತಾರೆ. ಈ ಪಾದಯಾತ್ರೆ ಸಾಗುವಾಗ ಯಾರಾದರೂ ಬಿದ್ದರೆ ಉಳಿದವರೆಲ್ಲರೂ ಸೇರಿ ಅವರನ್ನು ಮೇಲೆತ್ತುತ್ತಾರೆ. ಆಗ ಯಾರೋಬ್ಬರು ನಿಮ್ಮ ಧರ್ಮ, ಜಾತಿ, ಭಾಷೆ ಯಾವುದು ಎಂದು ಯಾರೂ ಕೇಳುವುದಿಲ್ಲ. ಇದೇ ನಮ್ಮ ಪ್ರೀತಿಯ, ಶಾಂತಿಯ, ಭ್ರಾತೃತ್ವದ ಭಾರತ. ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಾಗಲಿದ್ದು, ಯಾವುದೇ ಶಕ್ತಿ ಇದನ್ನು ತಡೆಯಲು ಸಾಧ್ಯವಿಲ್ಲ. ಕಾರಣ ಇದು ಭಾರತದ ಧ್ವನಿಯ ಯಾತ್ರೆಯಾಗಿದೆ. ನಾವು 7-8 ಗಂಟೆಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಹೆಜ್ಜೆ ಹಾಕುತ್ತೇವೆ. ಈ ಸಮಯದಲ್ಲಿ ದಾರಿಯುದ್ಧಕ್ಕು ಜನರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ. ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದೌರ್ಜನ್ಯ, ಸಾರ್ವಜನಿಕ ಉದ್ಯೋಗ ಖಾಸಗಿಕರಣದ ಬಗ್ಗೆ, ಇಡೀ ದೇಶದ ಜನ ತಮ್ಮ ನೋವು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಎಲ್ಲೂ ದೊಡ್ಡ ಭಾಷಣಗಳು ಇರುವುದಿಲ್ಲ. 7-8 ಗಂಟೆ ಹೆಜ್ಜೆ ಹಾಕಿ 15 ನಿಮಿಷಗಳ ಭಾಷಣ ಇರುತ್ತದೆ ಎಂದು ಭಾರತದ ಏಕತಾ ಮನೋಭಾವದ ಬಗ್ಗೆ ಮಾತನಾಡಿದರು.

ಈ ಪಾದಯಾತ್ರೆ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ನಿಮ್ಮ ಸಮಸ್ಯೆಗಳನ್ನು ಆಲಿಸಲು ಮಾಡಲಾಗುತ್ತಿದೆ. ಜನ ಪ್ರಶ್ನೆ ಕೇಳಬಹುದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಯುವುದೇಕೆ? ಪ್ರಜಾಪ್ರಭುತ್ವದಲ್ಲಿ ಹಲವು ಸಂಸ್ಥೆಗಳಿವೆ. ಮಾಧ್ಯಮ, ಸಂಸತ್ತುಗಳಿವೆ. ಇವೆಲ್ಲವೂ ವಿರೋಧ ಪಕ್ಷಗಳಿಗೆ ಬಂದ್ ಮಾಡಲಾಗಿದೆ. ಮಾಧ್ಯಮಗಳಲ್ಲಿ ನಮ್ಮ ವಿಚಾರ ಬರುವುದಿಲ್ಲ, ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ. ಸಂಸತ್ತಿನಲ್ಲಿ ನಾವು ಏನಾದರೂ ಹೇಳಲು ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ವಿರೋಧ ಪಕ್ಷದವರನ್ನು ಬಂಧಿಸಲಾಗುತ್ತದೆ. ಹೀಗಾಗಿ ನಮ್ಮ ಮುಂದೆ ಬೇರೆ ದಾರಿ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದೇವೆ. ಜನರ ಜತೆ ಸಾವಿರಾರು ಕಿ.ಮೀ ಹೆಜ್ಜೆ ಹಾಕುವುದೊಂದೆ ವಿರೋಧ ಪಕ್ಷಗಳ ಮುಂದೆ ಉಳಿದಿರುವ ದಾರಿ. ಈ ದಾರಿಯಲ್ಲಿ ನಡೆಯುವುದನ್ನು ಯಾರೂ ಕೂಡ ತಡೆಯಲಾಗುವುದು. ಕಾರಣ ಇಲ್ಲಿ ನಾವು ನಡೆಯುತ್ತಿಲ್ಲ, ದೇಶದ ಜನ ನಡೆಯುತ್ತಿದ್ದಾರೆ ಎಂದು ಯಾತ್ರೆಯಲ್ಲಿ ಹೆಜ್ಜೆ ಹಾಕಿರುವ ಜನರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಯಾತ್ರೆಯಲ್ಲಿ ದೇಶದ ಜನರ ಧ್ವನಿಯನ್ನು ಕೇಳಲಾಗುವುದು. ಭಾರತೀಯರ ಧ್ವನಿಯನ್ನು ಅಡಗಿಸುವ ಸಾಮರ್ಥ್ಯ ಯಾವುದೇ ಶಕ್ತಿಗಳಿಗೆ ಇಲ್ಲ. ಇಂದು ಇಷ್ಟು ಬಿಸಿಲಿನಲ್ಲಿ ನನ್ನ ಮಾತು ಕೇಳಲು ಬಂದಿರುವ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ 21 ದಿನ ನೀವು ನನ್ನೊಂದಿಗೆ ಈ ಉರಿ ಬಿಸಿಲಿನಲ್ಲಿ ಹೆಜ್ಜೆ ಹಾಕಬೇಕು.  ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ. ಕರ್ನಾಟಕದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಗಳನ್ನು ಆಲಿಸುತ್ತೇವೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು’ಎಂದು ಎಲ್ಲ ಯಾತ್ರಿಗಳಿಗೆ ಹುರುಪು ತುಂಬಿದರು.

ಕಾರ್ಯಕ್ರಮದಲ್ಲೊ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲರವರು ‘ಈ ಪಾದಯಾತ್ರೆಯ ಸಂಕಲ್ಪ ರಾಜಕೀಯ ಲಾಭಕ್ಕಾಗಿ, ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಇದು ಈ ದೇಶವನ್ನು ಬೆಲೆ ಏರಿಕೆಯಿಂದ ಮುಕ್ತಿಗೊಳಿಸಲು, ದೇಶದ ಯುವಕರಿಗೆ ಉದ್ಯೋಗ ನೀಡಲು, ದೇಶದಲ್ಲಿ ಭಾರತೀಯರು ಪರಸ್ಪರ ತಿಕ್ಕಾಟ ನಡೆಸುತ್ತಿದ್ದು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾ ದ್ವೇಷದ ರಾಜಕಾರಣ ಮಾಡಲಾಗುತ್ತಿರುವುದರ ವಿರುದ್ಧ ಸಮರ ಸಾರಲು ಸಂಕಲ್ಪ ಮಾಡಿ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಇಂದು ನಾವು ಕೂಡ ನಿರುದ್ಯೋಗ, ಜಾತಿ ಧರ್ಮಗಳ ಹೆಸರಿನ ಬೇಧ ಭಾವ ತೊಡೆದು ಹಾಕಿ, ಬೆಲೆ ಏರಿಕೆ ತಡೆದು, ಭಾರತ ದೇಶವನ್ನು ಮತ್ತೆ ಒಂದು ಗೂಡಿಸುವ ಸಂಕಲ್ಪದೊಂದಿಗೆ ಹೆಜ್ಜೆ ಹಾಕಬೇಕಿದೆ. ನಾವೆಲ್ಲರೂ ರಾಹುಲ್ ಗಾಂಧಿ ಅವರ ಜತೆ ಇರುತ್ತೇವೆ ಎಂಬ ಸಂಕಲ್ಪ ಮಾಡಬೇಕುʼ ಎಂಬ ಸಂದೇಶ ನೀಡಿದರು.

ಭಾರತ ಐಕ್ಯತಾ ಯಾತ್ರೆಯಲ್ಲಿ ಮಾತನಾಡಿದ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯರವರು, ‘ರಾಹುಲ್ ಗಾಂಧಿ ಅವರು ಈಗಾಗಲೇ ಕೇರಳ ಹಾಗೂ ತಮಿಳುನಾಡಿನಲ್ಲಿ ಪಾದಯಾತ್ರೆ ಮುಗಿಸಿ ಇಂದು ಕರ್ನಾಟಕದಲ್ಲಿ ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ಆರಂಭಿಸಲಿದ್ದಾರೆ. ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ 510 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಇಡೀ ದೇಶದಲ್ಲಿ ಸುಮಾರು 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಇಷ್ಟು ದೊಡ್ಡ ಪ್ರಮಾಣದ ಪಾದಯಾತ್ರೆ ಮಾಡುತ್ತಿರುವುದು ಇದೇ ಮೊದಲು. ಬೇರೆ ಯಾವ ಪಕ್ಷಗಳು ಅಥವಾ ನಾಯಕರು ಈ ರೀತಿ ಮಾಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ . ರಾಹುಲ್ ಗಾಂಧಿ ಅವರು ಕೋಮುವಾದಿ ರಾಜಕಾರಣದಿಂದ ಬೇಸತ್ತು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಧರ್ಮ ರಾಜಕಾರಣ, ಕೋಮುವಾದಿ ರಾಜಕಾರಣ, ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಇಂದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಎಲ್ಲ ವರ್ಗದವರು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸದಾ ಪ್ರಜಾಪ್ರಭುತ್ವದ ಮೇಲೆ ಸಂವಿಧಾನದ ಮೇಲೆ ನಂಬಿಕೆ ಗೌರವ ಇಟ್ಟುಕೊಂಡಿಲ್ಲ. ಅವರು, ಒಬ್ಬ ನಾಯಕ, ಒಂದು ಸಿದ್ಧಾಂತ, ಒಂದು ಚಿಹ್ನೆ ಮೇಲೆ ನಂಬಿಕೆ ಇಟ್ಟುಕೊಂಡಿರುವವರು. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಅದನ್ನು ಜಾರಿಗೆ ತಂದ ದಿನದಿಂದಲೂ ಇದನ್ನು ಬಿಜೆಪಿಯವರು ವಿರೋಧಿಸುತ್ತಲೇ ಇದ್ದಾರೆ. ಅನೇಕ ಬಾರಿ ಮಂತ್ರಿಗಳು, ಸಂಸದರು, ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ, ಈ ಸಂವಿಧಾನ ಬೇಡ ಎಂದು ಹೇಳಿದ್ದಾರೆ. ಇದು ಬಿಜೆಪಿ ವರಿಷ್ಠರಿಗೆ ತಿಳಿದಿದೆ. ಹೀಗಾಗಿ ಬಿಜೆಪಿಗೆ ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇಂತಹ ಮಾತನಾಡುತ್ತಾರೆ. ಎಂದು ರಾಹುಲ್‌ ಗಾಂಧಿಯವರ ಬಗ್ಗೆ ಹೆಮ್ಮೆ ಪಟ್ಟರು. ಹಿಂದೆ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಿಸಲು ಪ್ರಯತ್ನ ಮಾಡಿದ್ದರು. ಆಗ ರಾಷ್ಟ್ರಪತಿ ನಾರಾಯಣ್ ಅವರು ಇಲ್ಲದಿದ್ದರೆ ಬದಲಾವಣೆ ಆಗುತ್ತಿತ್ತೇನೋ. ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸಿ ರಾಜಕೀಯ ಲಾಭ ಮಾಡುವುದು ಬಿಜೆಪಿ ಉದ್ದೇಶ. ಇದು ಮೋದಿ ಅವರು ಪ್ರಧಾನಿ ಆದ ನಂತರ ದೇಶದಲ್ಲಿ ಹೆಚ್ಚುತ್ತಿದೆ. ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಾಗಿರಬೇಕು. ಅದಕ್ಕಾಗಿ ಇಂದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ನಾಗರಿಕ ವೇದಿಕೆಗಳು, ಬರಹಗಾರರು, ಚಿಂತಕರು, ರೈತ ಸಂಘಗಳು ಎಲ್ಲರೂ ದೇಶ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಯಾತ್ರೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ದೇಶದಲ್ಲಿ ಅಶಾಂತಿ ಜತೆಗೆ, ರೈತರು, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರು, ಬೆಲೆ ಏರಿಕೆ ಸಮಸ್ಯೆ ವಿರುದ್ಧ ಹೋರಾಡಲು ಈ ಪಾದ್ಯಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಜನಜನಿತವಾಗಿದೆ. ಇಂದು ದೇಶ, ಪ್ರಜಾತಂತ್ರ, ಸಂವಿಧಾನ ಉಳಿಯಬೇಕಾದರೆ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಇದರ ನಾಯಕತ್ವವನ್ನು ರಾಹುಲ್ ಗಾಂಧಿ ಅವರು ವಹಿಸಿದ್ದು, ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆಗಳನ್ನು ಕೋರುತ್ತಾ ಈ ಯಾತ್ರೆ ಕರ್ನಾಟಕದಲ್ಲಿ ಯಶಸ್ವಿಯಾಗಬೇಕು. ನಮ್ಮ ಈ ಯಾತ್ರೆ ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಕರ್ನಾಟಕದಲ್ಲಿ ಪೋಸ್ಟರ್‌ ಗಳಿಗೆ ಮಸಿ ಬಳಿಯುವ, ಹರಿದು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ನೀವು ಇದೇ ರೀತಿ ಮುಂದುವರೆದೆ ಬಿಜೆಪಿಯ ಯಾವುದೇ ನಾಯಕರು ಹೊರಗಡೆ ತಿರುಗಾಡಬಾರದು, ಅಂಥಾ ಪರಿಸ್ಥಿತಿಯನ್ನು ನಾವು ನಿರ್ಮಾಣ ಮಾಡಲು ಶಕ್ತರಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಇಂಥಾ ಘಟನೆಗಳು ನಡೆಯದಂತೆ ತಡೆಯಿರಿ ಎಂದು ಪೊಲೀಸರಿಗೆ ನಾನು ಹೇಳಿದ್ದೇನೆ, ಆದರೂ ಇವು ನಿಂತಿಲ್ಲ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆದು ಸರ್ಕಾರ ಬದಲಾಗಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ, ಬಿಜೆಪಿಯವರು ಹೇಳಿದಂತೆ ಕುಣಿಯುತ್ತಾ, ಕಾನೂನಿನ ರಕ್ಷಣೆಯನ್ನು ಮಾಡದ ಪೊಲೀಸರಿಗೆ ಆಗ ನಾವು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬುದನ್ನು ಹೇಳಲು ಬಯಸುತ್ತೇನೆ ಎಂದು ಮಾತನಾಡಿದರು.

ಇಂದು ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಪಾದಯಾತ್ರೆ ಆರಂಭವಾಗುತ್ತಿದೆ. ರಾಜ್ಯದ ಸುಮಾರು 8 ಜಿಲ್ಲೆಗಳಲ್ಲಿ ಸುಮಾರು 510 ಕಿ.ಮೀ ಈ ಪಾದಯಾತ್ರೆ ಸಾಗಲಿದೆ. ಇಡೀ ದೇಶದಲ್ಲಿ 3570 ಕಿ.ಮೀ ಪಾದಯಾತ್ರೆ ನಡೆಯಲಿದೆ. ಬಹುಶಃ ಸ್ವಾತಂತ್ರ್ಯ ನಂತರ ಒಂದೇ ಬಾರಿ ಇಷ್ಟೊಂದು ದೂರ ಪಾದಯಾತ್ರೆಯನ್ನು ಬೇರೆ ಯಾವ ಪಕ್ಷಗಳ ಯಾವ ನಾಯಕರು ಮಾಡಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಇಂದು ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ ಅಲ್ಲ. ಬಿಜೆಪಿ ಅವರು ಒಬ್ಬ ನಾಯಕ, ಒಂದು ಸಿದ್ಧಾಂತ ಹಾಗೂ ಒಂದು ಚಿಹ್ನೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಅಂಬೇಡ್ಕರರು ಸಂವಿಧಾನ ರಚನೆ ಮಾಡಿದ ದಿನದಿಂದ ಇಂದಿನವರೆಗೆ ಅದನ್ನು ವಿರೋಧ ಮಾಡುತ್ತಾ ಬಂದಿದ್ದಾರೆ. ಬಿಜೆಪಿಯ ಅನೇಕ ಜನ ಮಂತ್ರಿಗಳು, ಸಂಸದರು, ಶಾಸಕರು ಈ ಸಂವಿಧಾನ ಬೇಡ ಬೇರೆ ಸಂವಿಧಾನವನ್ನು ನಾವು ತರುತ್ತೇವೆ ಎಂದು ಹೇಳಿದ್ದಾರೆ. ಇದು ಬಿಜೆಪಿಯ ವರಿಷ್ಠರಿಗೆ ಗೊತ್ತಿಲ್ಲದೆ ಆಡಿದ ಮಾತುಗಳಲ್ಲ. ಅಂದರೆ ಇಡೀ ಬಿಜೆಪಿಗೆ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ಈ ದೇಶದಲ್ಲಿ ಶಾಂತಿ ಸಾಮರಸ್ಯ ಇರಬಾರದು, ಧರ್ಮ, ಜಾತಿಗಳ ಆಧಾರದ ಮೇಲೆ ಜನರನ್ನು ವಿಭಾಗ ಮಾಡಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಬೇಕು ಎಂಬುದು ಬಿಜೆಪಿ ಉದ್ದೇಶ. ಇದೇ ಕಾರಣಕ್ಕಾಗಿ ಬರೀ ಕಾಂಗ್ರೆಸ್‌ ಪಕ್ಷ ಮಾತ್ರವಲ್ಲದೆ ಬರಹಗಾರರು, ಚಿಂತಕರು, ಸಂಘಟನೆಗಳು, ರೈತ ಸಂಘಗಳು, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಸಿಪಿಐ, ಸಿಪಿಐಎಂ ಪಕ್ಷಗಳು ಹೀಗೆ ಅನೇಕ ಸಂಘ ಸಂಸ್ಥೆಗಳು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಜೊತೆಗೂಡಿ ದೇಶ ಉಳಿಸಲು ಟೊಂಕ ಕಟ್ಟಿ ನಿಂತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿ ಇಂದಿನಿಂದ ರಾಹುಲ್‌ ಗಾಂಧಿ ಅವರು ಪಾದಯಾತ್ರೆಯನ್ನು ಗುಂಡ್ಲುಪೇಟೆಯಿಂದ ಆರಂಭ ಮಾಡುತ್ತಿದ್ದಾರೆ. ಅವರಿಗೆ ನನ್ನ ಶುಭ ಹಾರೈಕೆಗಳು. ರಾಜ್ಯದಲ್ಲಿ ಪಾದಯಾತ್ರೆ ಮುಗಿಯುವ ವರೆಗೆ ರಾಹುಲ್‌ ಗಾಂಧಿ ಅವರಿಗೆ ತಮ್ಮ ಸಹಕಾರ ಇರಲಿ ಎಂದು ಮನವಿ ಮಾಡುತ್ತೇನೆ ಎಂದು ಭಾರತ ಐಕ್ಯತಾ ಯಾತ್ರೆಗೆ ಶುಭ ಹಾರೈಸಿದರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನು ನೋಡಿ:‌ ಕಮೆಂಟ್ ಮಾಡಿ ಆಭಿಪ್ರಾಯ ತಿಳಿಸಿ ಹಾಗೆಯೇ

peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ https://m.facebook.com/story.php?story_fbid=pfbid02kFuYkZBXM4zJGAsnm6rVK3brpLXq7L49xypZxDbrVoN6eEbALx1hiXU5UddUH2DBl&id=100084050041308&sfnsn=wiwspwa

You cannot copy content of this page

Exit mobile version