Wednesday, June 26, 2024

ಸತ್ಯ | ನ್ಯಾಯ |ಧರ್ಮ

ಪೀಪಲ್ ಮೀಡಿಯಾ ಇಂಪ್ಯಾಕ್ಟ್ – ರಾಷ್ಟ್ರಪತಿಗೆ ಅವಹೇಳನ ; ಮಹಿಳಾ ಆಯೋಗದ ಮುಂದೆ ವಿಶ್ವೇಶ್ವರ ಭಟ್ ಕ್ಷಮೆ ಯಾಚನೆ

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಅವರ ಬಣ್ಣ ಮತ್ತು ಜನಾಂಗವನ್ನು ಉಲ್ಲೇಖಿಸಿ ಅವಹೇಳನಕರವಾಗಿ ಬರೆದಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ತಮ್ಮದೇ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರುವ ತಮ್ಮ ವಾರದ ಅಂಕಣ ‘ನೂರೆಂಟು ವಿಶ್ವ’ದಲ್ಲಿ ಜೋರ್ಡಾನ್ ದೇಶದ ಬಿಸಿಲು ಮತ್ತು ಅದರ ಪರಿಣಾಮದಿಂದಾಗುವ ಚರ್ಮದ ಬಣ್ಣದ ಬದಲಾವಣೆಯನ್ನು ಹೇಳಲು ಹೋಗಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!”  ಎಂದು ಉಲ್ಲೇಖಿಸಿ ಬರೆದಿದ್ದರು. ಈ ಬಗ್ಗೆ ಪೀಪಲ್ ಮೀಡಿಯಾ ಮೊದಲ ಬಾರಿಗೆ ವಿಸ್ತೃತವಾಗಿ ವರದಿ ಮಾಡಿತ್ತು.

ನಂತರ ಇದು ಎಲ್ಲೆಡೆ ವೈರಲ್ ಆಗಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ತಳ ಸಮುದಾಯದಿಂದ ಬಂದ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನಕ್ಕೆ ಏರಿದಾಗ ಆಗುವ ಅಸೂಯೆ ಇದು ಎಂಬಂತೆ ಎಲ್ಲೆಡೆ ನಿಂಧನೆಗೆ ಒಳಪಟ್ಟಿತ್ತು. ಅಷ್ಟಾದರೂ ಇದರ ಮಧ್ಯೆ ವಿಶ್ವೇಶ್ವರ ಭಟ್ ತನ್ನ ಬರಹವನ್ನು ಸಮರ್ಥನೆ ಮಾಡಿಕೊಂಡು, ಇದರಲ್ಲಿ ತಪ್ಪೇನಿದೆ ಎಂದು ಒಬ್ಬ ಹಿರಿಯ ಪತ್ರಕರ್ತ ಎಂಬುದನ್ನೂ ಮರೆತು ಲಜ್ಜೆಬಿಟ್ಟಂತೆ ವರ್ತಿಸಿದ್ದರು.

ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮುಂದಿನ ಪರಿಣಾಮವನ್ನು ಅರಿತ ವಿಶ್ವೇಶ್ವರ ಭಟ್ಟ ನಿನ್ನೆಯ ದಿನ ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಬೇಷರತ್ ಕ್ಷಮೆ ಕೋರಿದ್ದಾರೆ. ಈ ಬಗ್ಗೆ ವಿಶ್ವೇಶ್ವರ ಭಟ್ಟ ಲಿಖಿತವಾಗಿಯೂ ಕ್ಷಮೆ ಕೇಳಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಆಯೋಗದ ಅಧ್ಯಕ್ಷರಾದ ರೇಖಾ ಶರ್ಮಾ ಅವರು, “ವಿಶ್ವೇಶ್ವರ ಭಟ್‌ ಅವರು ಆಯೋಗದ ಮುಂದೆ ಹಾಜರಾಗಿ ಬೇಷರತ್‌ ಕ್ಷಮೆ ಯಾಚಿಸಿದರು. ಮಾತ್ರವಲ್ಲದೇ ಕ್ಷಮಾಪಣೆ ಪತ್ರವನ್ನೂ ಬರೆದುಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ. ತಮಗೆ ಯಾವುದೇ ದುರುದ್ದೇಶವಿಲ್ಲವೆಂದು ಅವರು ತಿಳಿಸಿದ್ದಾರೆ ಎಂದೂ ರೇಖಾ ಶರ್ಮಾ ತಿಳಿಸಿದ್ದಾರೆ.

ವಿಶ್ವೇಶ್ವರ ಭಟ್ ಈ ಹಿಂದೆ ಈ ರೀತಿಯ ವರ್ತನೆ ಹಲವು ಬಾರಿ ಮಾಡಿದ್ದು, ಇಂತವುಗಳನ್ನು ಹಿಂದಿನಿಂದಲೂ ಸಮರ್ಥನೆ ಮಾಡಿಕೊಂಡೇ ಬಂದಿದ್ದರು. ಜನಾಂಗೀಯ ನಿಂಧನೆ, ಸೈದ್ಧಾಂತಿಕವಾಗಿ ವ್ಯಕ್ತಿ ನಿಂಧನೆ, ತನಗಾಗದ ವ್ಯಕ್ತಿಗಳ ನಡತೆ ಬಗ್ಗೆ ಅವಹೇಳನಕರವಾಗಿ ಹಲವು ಬಾರಿ ಬರೆದು, ಅದನ್ನು ಸಮರ್ಥನೆ ಕೂಡಾ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ವ್ಯಕ್ತಿ ಬಹಿರಂಗವಾಗಿ ಕ್ಷಮೆ ಕೇಳಿದ್ದು ಇದು ಪೀಪಲ್ ಮೀಡಿಯಾ ಇಂಪ್ಯಾಕ್ಟ್ ಎಂದೇ ಹೇಳಬಹುದು. ಪತ್ರಕರ್ತ ವಿಶ್ವೇಶ್ವರ ಭಟ್ ಇನ್ನು ಮುಂದಾದರೂ ಹೆಣ್ಣು ಮಕ್ಕಳು, ತಳ ಸಮುದಾಯದ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹೇಳುವುದನ್ನು ಬಿಡುವರೇ ಎಂಬುದು ಯೋಚಿಸಬಹುದಾದ ವಿಚಾರವಾಗಿದೆ.

Related Articles

ಇತ್ತೀಚಿನ ಸುದ್ದಿಗಳು