ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮಾಫಿಯಾಗಳಿಗೆ ಕಡಿವಾಣ ಬಿದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಹರಡುವುದಕ್ಕೆ ತಡೆ ಒಡ್ಡಲಾಗಿದೆ ಮತ್ತು ಕೋಮು ಸಂಘರ್ಷಗಳು ಹತೋಟಿಗೆ ಬಂದಿವೆ. ಇದರ ಪರಿಣಾಮವಾಗಿ, ಬೆಂಗಳೂರು ನಂತರ ಮಂಗಳೂರಿನತ್ತ ಅತಿ ಹೆಚ್ಚು ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ‘ಉದಯವಾಣಿ’ ಕಚೇರಿಯಲ್ಲಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಗತಿಯ ಕುರಿತು ಬೆಳಕು ಚೆಲ್ಲಿದರು. ಸಂಪರ್ಕ ವ್ಯವಸ್ಥೆಗಳು ಸುಧಾರಿಸಿದ್ದು, ಜಿಲ್ಲೆಗೆ ಎಲ್ಲ ರೀತಿಯಿಂದ ಬೆಳವಣಿಗೆ ಹೊಂದುವ ಸಾಮರ್ಥ್ಯವಿದೆ ಎಂದರು. ಅಲ್ಲದೆ, ಧರ್ಮಸ್ಥಳ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಹಿಂದೆ ಕೊಲೆ, ಹಿಂಸೆಯಂತಹ ಕೃತ್ಯಗಳಿಂದ ಭಯದ ವಾತಾವರಣ ಮತ್ತು ಸೂಕ್ಷ್ಮ ಪರಿಸ್ಥಿತಿಗಳಿದ್ದವು. ಆದರೆ ಈಗ ಕಾನೂನುಬಾಹಿರ ಚಟುವಟಿಕೆಗಳಿಗೆ ಇದ್ದ ರಾಜಕೀಯ ಬೆಂಬಲ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ದ್ವೇಷ ಸಹಿತ ಎಲ್ಲ ರೀತಿಯ ಪ್ರಚೋದನೆಗಳೂ ನಿಯಂತ್ರಣಕ್ಕೆ ಬಂದಿವೆ.
ವಿಶೇಷ ಕಾರ್ಯಪಡೆ: ಕೋಮು ಸಂಘರ್ಷ ತಡೆಗಟ್ಟಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ.
ನಿಯಂತ್ರಣ: ಮುಖ್ಯವಾಗಿ ಡ್ರಗ್ಸ್ ದಂಧೆ, ಮರಳು ಮಾಫಿಯಾ, ಗಣಿಗಾರಿಕೆ ಮತ್ತು ಮಟ್ಕಾ ಇತ್ಯಾದಿ ಕಾನೂನುಬಾಹಿರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ.
ಕಾನೂನು ಪಾಲನೆ ಸುವ್ಯವಸ್ಥಿತವಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ಕಾನೂನು ಪಾಲನೆ ವ್ಯವಸ್ಥೆ ಉತ್ತಮಗೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ತಮ್ಮದು ಶುದ್ಧ ರಾಜಕಾರಣವಾದ್ದರಿಂದ ಯಾವುದೇ ಸಮಸ್ಯೆಗಳಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರತಿಪಾದಿಸಿದರು.
ಕೆಂಪು (ಮುರ) ಕಲ್ಲು ಗಣಿಗಾರಿಕೆ, ಮರಳು ತೆಗೆಯುವಿಕೆ ಮತ್ತು ಸಿಆರ್‌ಝಡ್ ಸಮಸ್ಯೆಗಳು ಬಗೆಹರಿದಿವೆ.
ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಗಾಗಿ ಕಿಯೋನಿಕ್ಸ್‌ನಿಂದ ₹140 ಕೋಟಿ ಮತ್ತು ವೆನ್‌ಲಾಕ್ ಆಸ್ಪತ್ರೆಗೆ ₹100 ಕೋಟಿ ನೀಡಲಾಗಿದೆ.
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ. ಸರ್ಫಿಂಗ್, ಗಾಳಿಪಟ ಹಬ್ಬ, ಕರಾವಳಿ ಉತ್ಸವ, ಗಣೇಶೋತ್ಸವ, ದಸರಾ ಎಲ್ಲವೂ ವಿಜೃಂಭಣೆಯಿಂದ ನೆರವೇರುತ್ತಿವೆ. ಕಂಬಳ, ಯಕ್ಷಗಾನ, ಕೋಳಿ ಅಂಕಗಳಿಗೂ ಅವಕಾಶ ಕಲ್ಪಿಸಿದ್ದು, ಆದರೆ ಜೂಜಿಗೆ ಕಡಿವಾಣ ಹಾಕಲಾಗಿದೆ.
ಐಟಿ ಉದ್ಯಮಿಗಳು ಹೂಡಿಕೆ ಮಾಡಲು ಉತ್ಸಾಹ ತೋರುತ್ತಿದ್ದು, ಬೆಂಗಳೂರು ಬಿಟ್ಟರೆ ಮಂಗಳೂರು ಅವರ ಎರಡನೇ ಆಯ್ಕೆಯಾಗಿದೆ. ಕಾರವಾರದಿಂದ ಕರಾವಳಿ ತೀರದವರೆಗೆ ಸಂಪರ್ಕ ವ್ಯವಸ್ಥೆಗಳನ್ನು ಸುಧಾರಿಸಲಾಗುತ್ತಿದ್ದು, ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೂ ಪ್ರಸ್ತಾವನೆ ಇದೆ.
ಜಿಲ್ಲೆಯಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿರುವುದರಿಂದ, ‘ಗೋವಾ’ ಮಾದರಿಯ ಬದಲಾಗಿ ‘ಕೇರಳ’ ಮಾದರಿಯ ರಾತ್ರಿ ಜೀವನಕ್ಕೆ ಕರಾವಳಿ ತೆರೆದುಕೊಳ್ಳಬೇಕು ಎಂಬ ಚಿಂತನೆ ಇದೆ. ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚಿಸಿ, ರೆಸಾರ್ಟ್‌ಗಳು ಮತ್ತು ಹೊಟೇಲ್‌ಗಳಂತಹ ವ್ಯವಸ್ಥೆಗಳು ಬರಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.
