Home ವಿಶೇಷ ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

0

ಪ್ರತಿ ವರ್ಷ ನವೆಂಬರ್‌ ತಿಂಗಳ ಹನ್ನೊಂದನೆಯ ದಿನವನ್ನು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನೆಲ್ಲೆಡೆ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ಪ್ರವೇಶ ಮತ್ತು ಹೆಚ್ಚಿನ ವಿಷಯಗಳ ಕುರಿತು ಕಾರ್ಯಕ್ರಮಗಳು ಮತ್ತು ಚರ್ಚೆಗಳನ್ನು ನಡೆಸುತ್ತವೆ.

UNICEF ಈ ವರ್ಷದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಆಯ್ಕೆ ಮಾಡಿಕೊಂಡಿರುವ ಘೋಷ ವಾಕ್ಯ, ʼಇದು ನಮ್ಮ ಕಾಲ – ನಮ್ಮ ಹಕ್ಕುಗಳು ನಮ್ಮ ಭವಿಷ್ಯ.ʼ ಈ ಬಾರಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ದಶಮಾನೋತ್ಸವವೂ ಹೌದು.

ಡಿಸೆಂಬರ್ 2011ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 66/170 ನಿರ್ಣಯವನ್ನು ಅಂಗೀಕರಿಸಿತು, ಇದು 2012ರ ಅಕ್ಟೋಬರ್ ತಿಂಗಳ 11ನೇ ದಿನವನ್ನು ಉದ್ಘಾಟನಾ ದಿನವೆಂದು ಘೋಷಿಸಿತು ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳ ಮೇಲಿನ ಹೂಡಿಕೆಯ ಅಗತ್ಯವನ್ನು ಗುರುತಿಸುವುದು ಕೂಡಾ ಇದರ ಉದ್ದೇಶವಾಗಿತ್ತು.

ಈ ವರ್ಷ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ದಿನದ ಉದ್ದೇಶವು, ಮೊದಲ ಉಸಿರಾಟದ ಕ್ಷಣದಿಂದಲೂ ಗಂಡು ಮಕ್ಕಳಿಗಿಂತ ಹೆಚ್ಚು ತಾರತಮ್ಯ ಮತ್ತು ಹಿಂಸಾಚಾರಕ್ಕೆ ಗುರಿಯಾಗುವ ಹೆಣ್ಣು ಮಕ್ಕಳ ಪರವಾಗಿ ಅವರೊಂದಿಗೆ ನಿಲ್ಲುವುದು ಈ ದಿನದ ಧ್ಯೇಯ. ಅವಳ ಸಾಮರ್ಥ್ಯವು ಗಂಡಿನ ಸಾಮರ್ಥ್ಯಕ್ಕೆ ಸಮಾನವಾಗಿದ್ದರೂ, ಅಂತಹ ಸಾಮರ್ಥ್ಯಕ್ಕೆ ಇಲ್ಲಿ ಬೆಲೆ ನೀಡಲಾಗುವುದಿಲ್ಲ ಮತ್ತು ಅದನ್ನು ಪೋಷಿಸಲಾಗುವುದಿಲ್ಲ. ಲಿಂಗ ತಾರತಮ್ಯದಿಂದಾಗಿ ಈ ಭೂಮಿಯಿಂದ ಸುಮಾರು 14 ಕೋಟಿ ಹೆಣ್ಣು ಮಕ್ಕಳು ಕಣ್ಮರೆಯಾಗಿದ್ದಾರೆ. ಅಲ್ಲದೆ ಇಂದು 15ರಿಂದ 19 ವರ್ಷ ವಯಸ್ಸಿನ 4 ಹೆಣ್ಣು ಮಕ್ಕಳಲ್ಲಿ ಒಬ್ಬರು ಶಾಲೆ, ಉದ್ಯೋಗ ಅಥವಾ ತರಬೇತಿಯನ್ನು ಪಡೆಯುತ್ತಿಲ್ಲ, ಅದೇ ಗಂಡುಮಕ್ಕಳ ವಿಷಯದಲ್ಲಿ ಈ ಸಂಖ್ಯೆ 10 ಗಂಡು ಮಕ್ಕಳಿಗೆ ಒಬ್ಬರಷ್ಟಿದೆ.

66/140 ನಿರ್ಣಯವು ಬಾಲ್ಯ ಮತ್ತು ಹದಿಹರೆಯದ ಹಕ್ಕುಗಳು, ಅವಕಾಶಗಳು ಮತ್ತು ಪ್ರಯೋಜನಗಳನ್ನು ಆನಂದಿಸಲು ಇರುವ ತೊಡಕುಗಳನ್ನು ಸಹ ಪಟ್ಟಿ ಮಾಡುತ್ತದೆ. ಬಾಲ್ಯ ಮತ್ತು ಬಲವಂತದ ವಿವಾಹಗಳು ಸಣ್ಣ ವಿವಾಹಿತ ಹೆಣ್ಣು ಮಕ್ಕಳನ್ನು ಎಚ್ಐವಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಹೆಚ್ಚಿನ ಅಪಾಯಕ್ಕೆ ಈಡು ಮಾಡುತ್ತವೆ. ಇದಲ್ಲದೆ ಅಪ್ರಾಪ್ತ ವಯಸ್ಸಿನ ಹೆರಿಗೆ, ಅಂಗವೈಕಲ್ಯದಂತಹ ಅಪಾಯಕ್ಕೂ ಇದು ಕಾರಣವಾಗುತ್ತದೆ. ಶಿಶು ಮರಣ ಮತ್ತು ಪ್ರಸವ ಸಮಯದಲ್ಲಿ ತಾಯಿಯ ಮರಣಕ್ಕೂ ಇಂತಹ ವಿವಾಹಗಳು ಕಾರಣವಾಹುವುದನ್ನು ಇದು ಗುರುತಿಸುತ್ತದೆ. ಇಂತಹ ಮದುವೆಗಳು ಅವರ ಶಿಕ್ಷಣ ಪೂರ್ಣಗೊಳಿಸಲು ತೊಡಕಾಗುವುದರ ಜೊತೆಗೆ ಸಮಗ್ರ ಜ್ಞಾನ ಗಳಿಸಲು, ಸಮುದಾಯದಲ್ಲಿ ತೊಡಗಿಸಿಕೊಳ್ಳಲು ಹಾಗೂ ಉದ್ಯೋಗ ಸಂಬಂಧಿ ಕೌಶಲಗಳನ್ನು ಕಲಿಯಲು ಅಡ್ಡಗಾಲು ಹಾಕುತ್ತವೆ. ಅಲ್ಲದೆ ಓರ್ವ ಬಾಲಕಿಯಾಗಿ ಆಕೆ ಬದುಕನ್ನು ಅನುಭವಿಸಲು ಇರುವ ಹಕ್ಕುಗಳನ್ನು ಸಹ ಇದು ಇಲ್ಲವಾಗಿಸುತ್ತದೆ.”

ಇಂದು, ಅಂತರಾಷ್ಟ್ರೀಯ ದಿನದಂದು ನಾವು ನಮ್ಮ ಸುತ್ತಮುತ್ತಲಿನ ಹೆಣ್ಣು ಮಕ್ಕಳೊಡನೆ ಸೌಜನ್ಯದಿಂದ ನಡೆದುಕೊಳ್ಳುವ, ಅವರ ಹಕ್ಕುಗಳನ್ನು ಪ್ರೋತ್ಸಾಹಿಸುವ, ಅವರನ್ನು ನಮ್ಮಂತೆಯೇ ಎಂದು ಪರಿಭಾವಿಸಿ ನಡೆದುಕೊಳ್ಳುವ ಮೂಲಕ ಈ ದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸೋಣ. “ಬೇಟಿ ಬಚಾವೋ, ಬೇಟಿ ಪಡಾವೋ,” ಎನ್ನುವುದು ಕೇವಲ ಘೋಷಣೆ ಮಾತ್ರವಾಗಿ ಉಳಿಯದೆ ಬದುಕಿನ ಧ್ಯೇಯವೂ ಆಗಲಿ ಎಂದು ಹಾರೈಸೋಣ.

You cannot copy content of this page

Exit mobile version