ಬೆಂಗಳೂರು : ಭಾರತ ಹಾಗೂ ಪಾಕ್ ನಡುವಿನ ಯುದ್ಧದ ಹಿನ್ನಲೆ ಮುಂದೂಡಲಾಗಿದ್ದ ಐಪಿಎಲ್ ಪಂದ್ಯಾಟಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಕೋಲ್ಕತ್ತಾ ತಂಡವನ್ನು ಆರ್ ಸಿಬಿಯು ತವರಿನಲ್ಲಿ ಎದುರಿಸಲಿದೆ.ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ವಾತಾವರಣ ಹೆಚ್ಚಾದ ಹಿನ್ನಲೆ ಬಿಸಿಸಿಐ ಐಪಿಎಲ್ ಸೀಸನ್ 18 ಅನ್ನು ಒಂದು ವಾರಗಳ ಕಾಲ ಮುಂದೂಡಲಾಗಿತ್ತು, ಇದೀಗ ಮತ್ತೆ ಪಂದ್ಯಾಟವನ್ನು ಪುನಃರಂಭಿಸಿದ್ದು, ಮೇ 17ರಿಂದ ಪಂದ್ಯಾಟ ಆರಂಭವಾಗಲಿದೆ.

ಇನ್ನು ನಾಳೆ ಆರ್ ಸಿಬಿಯು ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಹಾದಿ ಇನ್ನಷ್ಟು ಸುಗಮವಾಗಲಿದೆ.ಇನ್ನು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡುತ್ತಿದ್ದು, ಅದರಂತೆ ಮೇ.17 ಹಾಗೂ 23 ರಂದು ನಗರದಲ್ಲಿ ಐಪಿಎಲ್ ಪಂದ್ಯಾಟ ನಡೆಯುವ ಹಿನ್ನಲೆ ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 01.35 ರ ವರೆಗೆ ವಿಸ್ತರಿಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಸದರಿ ದಿನಗಳಲ್ಲಿ ನಮ್ಮ ಮೆಟ್ರೋ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿ 01.00ರ ವರೆಗೆ ವಿಸ್ತರಿಸಿದೆ.ಅಲ್ಲದೇ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ನಾಲ್ಕು ಕಡೆಯೂ ಕೊನೆಯ ರೈಲು ಮಧ್ಯರಾತ್ರಿ 01.35 ಕ್ಕೆ ಹೊರಡಲಿದೆ. ಈ ಹಿನ್ನಲೆ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್ ಸಿಎಲ್ ತಿಳಿಸಿದೆ.