ಅಮೆರಿಕ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ; ಬಹ್ರೇನ್, ಕುವೈತ್ ಮಿಲಿಟರಿ ಬೇಸ್‌ಗಳೇ ಟಾರ್ಗೆಟ್!

ಟೆಹ್ರಾನ್/ಮನಾಮಾ: ಅಮೆರಿಕ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗಳಿಗೆ ಪ್ರತೀಕಾರವಾಗಿ ತಾವು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ತೀವ್ರ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಪ್ರಕಟಿಸಿದೆ. ಗುರುವಾರ ಇರಾನ್ ಸರ್ಕಾರಿ ದೂರದರ್ಶನ IRIB ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಈ ವಿಷಯವನ್ನು ಖಚಿತಪಡಿಸಲಾಗಿದೆ.

ಇರಾನ್ ನೀಡಿರುವ ಮಾಹಿತಿಯ ಪ್ರಕಾರ, ಕುವೈತ್‌ನಲ್ಲಿರುವ ಅರಿಫ್ಜಾನ್, ಅಲಿ ಅಲ್ ಸಾಲೆಮ್ ಹಾಗೂ ಬಹ್ರೇನ್‌ನಲ್ಲಿರುವ ಜುಫೈರ್ ಮತ್ತು ಶೇಖ್ ಇಸಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ ಸೇನಾ ನೆಲೆಗಳ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಒಂದು ವೇಳೆ ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ದಾಳಿಗೆ ಮುಂದಾದರೆ, ಈ ವಲಯದಲ್ಲಿರುವ ಅಮೆರಿಕದ ಇತರ ಮಿಲಿಟರಿ ನೆಲೆಗಳಿಗೂ ತಮ್ಮ ಪ್ರತೀಕಾರದ ಕ್ರಮವನ್ನು ವಿಸ್ತರಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಅಮೆರಿಕ ದಾಳಿ

ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ, “ನಾವು ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಪಡೆಗಳು ಇರಾನ್‌ನ ಕರಾವಳಿ ನೆಲೆಗಳ ಮೇಲೆ ಭಾರಿ ವೈಮಾನಿಕ ದಾಳಿಗಳನ್ನು ಆರಂಭಿಸಿದ್ದವು. ಆದರೆ ಈ ಉದ್ರಿಕ್ತ ವಾತಾವರಣ ಶೀಘ್ರದಲ್ಲೇ ತಿಳಿಯಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದ ಟ್ರಂಪ್, ಮಾತುಕತೆಯ ಹಾದಿ ಮುಕ್ತವಾಗಿದೆ ಎಂದು ಹೇಳಿದ್ದರು. ಮತ್ತೊಂದೆಡೆ, ಬಹ್ರೇನ್ ರಾಜಧಾನಿ ಮನಾಮಾದಲ್ಲಿ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗಿದ ಬೆನ್ನಲ್ಲೇ ಹಲವೆಡೆ ಭಾರಿ ಸ್ಫೋಟದ ಸೌಂಡ್ ಕೇಳಿಬಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ಮತ್ತು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಚಿಮ್ಮಿದ ಕಚ್ಚಾ ತೈಲ ದರ

ಇರಾನ್ ಮತ್ತು ಅಮೆರಿಕ ನಡುವಿನ ಈ ತಾಜಾ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಗಗನಕ್ಕೇರಿದೆ. ಪ್ರಸ್ತುತ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಹೋರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿ ತೈಲ ಪೂರೈಕೆ ಸುಗಮಗೊಳ್ಳಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು