ಬಾಗಲೂರು ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್ ಸ್ಫೋಟ – ಪಾದಚಾರಿಗೆ ಗಾಯ

ಬೆಂಗಳೂರು: ಈಶಾನ್ಯ ಬೆಂಗಳೂರಿನ ಬಾಗಲೂರು ಕ್ರಾಸ್ ಸಮೀಪದ ಅಮೆಜಾನ್ ಕಚೇರಿಯ ಹೊರಭಾಗದ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ವೊಂದು ಬುಧವಾರ ಬೆಳಗ್ಗೆ 9.49ರ ಸುಮಾರಿಗೆ ಸ್ಫೋಟಗೊಂಡಿದ್ದು, ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರು ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ನೆಲಕ್ಕೆ ಬಿದ್ದ ಪರಿಣಾಮ, ಓರ್ವ ಪಾದಚಾರಿಗೆ ಗಾಯಗಳಾಗಿವೆ. ಅವರ ಕೈಗಳಿಗೆ ತೀವ್ರ ಸುಟ್ಟ ಗಾಯಗಳಾದರೆ, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ. ಅಮೆಜಾನ್ ಕಚೇರಿ ಆವರಣದ ಗೇಟ್ ನಂ. 3ರ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.

ಗಾಯಗೊಂಡವರನ್ನು ಮೊಹಮ್ಮದ್ ಅಫ್ರೋಜ್ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಸತೇಡ್, ಇದು ಅಮೆಜಾನ್ ಕಚೇರಿಯ ಗೇಟ್ ನಂ. 3ರ ಬಳಿ ನಡೆದಿದೆ. ಬಾಗಲೂರು ಕ್ರಾಸ್ ಸಮೀಪ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಅಫ್ರೋಜ್ ಗಾಯಗೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹಠಾತ್ ಸಂಭವಿಸಿದ ಸ್ಫೋಟದ ದೃಶ್ಯವು ಘಟನೆಯನ್ನು ಕಣ್ಣಾರೆ ಕಂಡ ಅರುಣ್ ಜಿ ಅವರ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ನನ್ನ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆ ಸೆರೆಯಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನಾನು ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ನನ್ನ ಮಕ್ಕಳು ಕಾರಿನೊಳಗಿದ್ದರು ಎಂದು ಅರುಣ್ ಜಿ ತಿಳಿಸಿದ್ದಾರೆ. ವಿದ್ಯುತ್ ದೋಷಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು