ಹೋರ್ಮುಜ್ ಸಮೀಪ ಇರಾನ್ ನೌಕೆ ವಶಕ್ಕೆ: ಅಮೇರಿಕಾ ವಿರುದ್ಧ ಪ್ರತಿಕಾರದ ಎಚ್ಚರಿಕೆ ನೀಡಿದ ಇರಾನ್

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ಗೆ ಸೇರಿದ ‘ಟೌಸ್ಕಾ’ (Touska) ಎಂಬ ಸರಕು ಸಾಗಣೆ ನೌಕೆಯನ್ನು ಅಮೆರಿಕದ ನೌಕಾಪಡೆ ಹೋರ್ಮುಜ್ ಸಮೀಪ ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಅಮೆರಿಕ ಹೇರಿದ್ದ ನೌಕಾ ತಡೆ (ಬ್ಲಾಕೇಡ್) ಉಲ್ಲಂಘಿಸಲು ಯತ್ನಿಸಿದ ಈ ನೌಕೆಯನ್ನು ತಡೆಯಲಾಗಿದೆ ಎಂದು ಹೇಳಿದ್ದಾರೆ. “ಟೌಸ್ಕಾ” ಎಂಬ ಇರಾನ್ ಧ್ವಜದ ನೌಕೆ ಅಮೆರಿಕದ ನೌಕಾ ತಡೆಯನ್ನು ಮೀರಿ ಸಾಗಲು ಪ್ರಯತ್ನಿಸಿತು. ಆದರೆ ಅದು ಯಶಸ್ವಿಯಾಗಲಿಲ್ಲ,” ಎಂದು ಅವರು ಹೇಳಿದ್ದಾರೆ.

ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್‌ನ ಖತಮ್ ಅಲ್ ಅನ್ಬಿಯಾ ಸೆಂಟ್ರಲ್ ಹೆಡ್‌ಕ್ವಾಟ್ರಸ್ ಅಮೆರಿಕದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಅಮೆರಿಕವು ಯುದ್ಧ ವಿರಾಮ ಉಲ್ಲಂಘಿಸಿ “ಸಮುದ್ರ ದರೋಡೆ” ನಡೆಸಿದೆ ಎಂದು ಆರೋಪಿಸಿದೆ.

ಇರಾನ್ ಸೇನೆಯ ಪ್ರಕಟಣೆಯ ಪ್ರಕಾರ, ‘ಸೀ ಆಫ್ ಓಮನ್’ ಜಲ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಇರಾನ್‌ನ ವಾಣಿಜ್ಯ ನೌಕೆಯ ಮೇಲೆ ದಾಳಿ ನಡೆಸಿ, ಗುಂಡಿನ ದಾಳಿ ಮಾಡಿ ನೌಕೆಯ ನಾವಿಗೇಶನ್ ವ್ಯವಸ್ಥೆಯನ್ನು ಹಾನಿಗೊಳಪಡಿಸಿದ್ದಲ್ಲದೆ, ಸೈನಿಕರನ್ನು ನೌಕೆಯ ಮೇಲ್ಭಾಗಕ್ಕೆ ಇಳಿಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದೆ.

“ಅಮೆರಿಕವು ದಾಳಿಯ ಮೂಲಕ ಅಕ್ರಮ ಕೃತ್ಯ ನಡೆಸಿದೆ. ಇದಕ್ಕೆ ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ,” ಎಂದು ಇರಾನ್ ಎಚ್ಚರಿಕೆ ನೀಡಿದೆ.

ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಈ ಘಟನೆ ನಡೆದಿರುವುದರಿಂದ, ಪ್ರದೇಶದ ಭದ್ರತೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಉದ್ವಿಗ್ನತೆ ಬಗ್ಗೆ ಆತಂಕ ಹೆಚ್ಚಾಗಿದೆ.

Related Articles

ಇತ್ತೀಚಿನ ಸುದ್ದಿಗಳು