ರಾಮನಗರದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಅಕ್ರಮ – ನಿಖಿಲ್ ಕುಮಾರಸ್ವಾಮಿ

ರಾಮನಗರ: ರಾಮನಗರದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಕುಳಿತು ಮತದಾರರ ಅಕ್ರಮ (ವೋಟ್ ಚೋರಿ) ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಅವರದೇ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಬಂದು ನೋಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು. ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲಿ ಪ್ರೆಸ್‌ಮೀಟ್ ಮಾಡುವುದಾಗಿ ಸವಾಲು ಹಾಕಿದರು. ರಾಮನಗರದ ಕೆಲ ವಾರ್ಡ್‌ಗಳಲ್ಲಿ SIR ಪ್ರಕ್ರಿಯೆ ನಿಯಮಬಾಹಿರವಾಗಿ ನಡೆಯುತ್ತಿದೆ ಎಂಬ ಆರೋಪ ಮಾಡಿರುವ ನಿಖಿಲ್, ಸ್ಥಳೀಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ. ಬಿಎಲ್‌ಒಗಳು ಮನೆಮನೆಗೆ ಮೂರು ಬಾರಿ ಭೇಟಿ ನೀಡಬೇಕು ಹಾಗೂ ಮೂರು ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪ್ರಕ್ರಿಯೆ ನಡೆಯಬೇಕು ಎಂಬ ನಿಯಮವನ್ನು ಪಾಲಿಸಲಾಗಿಲ್ಲ ಎಂದು ಆರೋಪಿಸಿದರು.

ತಹಶೀಲ್ದಾರ್ ಹಾಗೂ ಜಿಲ್ಲಾಡಳಿತದ ವಿರುದ್ಧವೂ ಆರೋಪ ಮಾಡಿದ ಅವರು, ಕೆಲವು ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ ಮತ್ತು ಕಾರ್ಯಕರ್ತರು ವಿಡಿಯೋ ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಹೇಳಿದರು. ಕುಣಿಗಲ್ ಹಾಗೂ ಇತರ ಪ್ರದೇಶಗಳಲ್ಲಿಯೂ SIR ಅಕ್ರಮ ನಡೆಯುತ್ತಿದೆ ಎಂಬ ಆರೋಪವನ್ನು ಮಾಡಿರುವ ಅವರು, ಜನಪ್ರತಿನಿಧಿಗಳು ಅಧಿಕಾರ ದುರುಪಯೋಗಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ದೆಹಲಿಯ ಗಾಂಧಿ ಕುಟುಂಬ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ನಿಖಿಲ್, ರಾಜ್ಯ ಸರ್ಕಾರದ ಯೋಜನೆಗಳ ಹಣಕಾಸು ನಿರ್ವಹಣೆಯ ಕುರಿತು ಪ್ರಶ್ನೆ ಎತ್ತಿದರು. ಕೊನೆಗೆ, ಕಲ್ಯಾಣ ಮಂಟಪದಲ್ಲಿ ನಡೆದ SIR ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕು, ನಿಯಮ ಉಲ್ಲಂಘಿಸಿದ ಬಿಎಲ್‌ಒಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಎಲ್ಲಾ ದಾಖಲೆಗಳು ಮತ್ತು ವಿಡಿಯೋ ಸಾಕ್ಷ್ಯಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು