ಭಾರತದಲ್ಲಿ ಫ್ಯಾಸಿಸಂ ಆಡಳಿತ ಆರಂಭವಾಗಿದೆಯೇ?: ಮೋದಿ ಸರ್ಕಾರದ ನಿಲುವುಗಳ ವಿರುದ್ಧ ಹಿರಿಯ ಪತ್ರಕರ್ತ ಆನಂದ್ ಕೆ. ಸಹಾಯ್ ಆಕ್ರೋಶ

ದೆಹಲಿ: ತೀವ್ರ ರಾಷ್ಟ್ರೀಯತಾವಾದ, ಅಧಿಕಾರದ ಅತಿಯಾದ ಕೇಂದ್ರೀಕರಣ, ವಿರೋಧ ಪಕ್ಷಗಳ ದಮನ, ಮಾಧ್ಯಮಗಳ ನಿಯಂತ್ರಣ ಹಾಗೂ ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳ ಬಳಕೆ—ಇವೆಲ್ಲವೂ ಭಾರತವು ಫ್ಯಾಸಿಸಂ ಕಡೆಗೆ ಹೆಜ್ಜೆ ಇಡುತ್ತಿದೆಯೇ ಎಂಬ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ಹಿರಿಯ ಪತ್ರಕರ್ತ ಆನಂದ್ ಕೆ. ಸಹಾಯ್ ‘ದಿ ವೈರ್’ ವೆಬ್‌ತಾಣದ ತಮ್ಮ ಲೇಖನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶ ಮತ್ತು ಅದನ್ನು ಹತ್ತಿಕ್ಕಲು ಸರ್ಕಾರ ಅನುಸರಿಸುತ್ತಿರುವ ನಿರಂಕುಶ ಮಾರ್ಗಗಳನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ಮಂಡಿಸಿದ್ದಾರೆ.

ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದ್ದ ಭಾರತ ಚುನಾವಣಾ ಆಯೋಗವು (ಇಸಿಐ) ಇಂದು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡು ಕಳಂಕಿತಗೊಂಡಿದೆ ಎಂದು ಅವರು ಟೀಕಿಸಿದ್ದಾರೆ. ದೇಶದಲ್ಲಿ ಪ್ರಭುತ್ವದ ಆಡಳಿತ ಬೇರೂರಲು ನೆರವಾಗುವ ಬೃಹತ್ ರಾಜಕೀಯ ಯಂತ್ರದಂತೆ ಆಯೋಗ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಮುಖ್ಯವಾಹಿನಿ ಮಾಧ್ಯಮಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಸರ್ಕಾರ, ಸತ್ಯವನ್ನು ಪ್ರಶ್ನಿಸುವ ಧ್ವನಿಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಹತ್ತಿಕ್ಕುತ್ತಿದೆ; ನೀಟ್ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ‘ಜೆನ್-ಝಿ’ ಯುವಜನತೆಯ ಹೋರಾಟದಿಂದ ಹಿಡಿದು ದೆಹಲಿ ಹಾಗೂ ಮುಂಬೈನಲ್ಲಿ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳವರೆಗೂ ಎಲ್ಲವನ್ನೂ ಬಲಪ್ರಯೋಗದ ಮೂಲಕ ನಿರ್ಬಂಧಿಸಲಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇತ್ತೀಚೆಗೆ ನಡೆದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆಯ ಬಗ್ಗೆಯೂ ಲೇಖನದಲ್ಲಿ ಕಟು ಪ್ರಶ್ನೆಗಳನ್ನು ಎತ್ತಲಾಗಿದೆ. ಕಳೆದ 20-30 ವರ್ಷಗಳಿಂದ ನಿರಂತರವಾಗಿ ಮತ ಚಲಾಯಿಸುತ್ತಾ ಬಂದಿರುವ ಅಸಂಖ್ಯಾತ ನಾಗರಿಕರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ಕೈಬಿಡಲಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಚುನಾವಣಾ ಆಯೋಗದಿಂದ ಸೂಕ್ತ ಉತ್ತರವಿಲ್ಲ.

ಅಕ್ರಮ ವಲಸಿಗರನ್ನು ತೆಗೆದುಹಾಕುವ ನೆಪವೊಡ್ಡಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದರೂ, ತೆಗೆದುಹಾಕಲಾದವರಲ್ಲಿ ನಕಲಿ ಅಥವಾ ಮೃತ ಮತದಾರರ ಪಾಲು ಕೇವಲ ಶೇ. 2 ರಿಂದ 5 ರಷ್ಟು ಮಾತ್ರ ಎಂದು ಅಂಕಿಅಂಶಗಳು ಹೇಳುತ್ತಿವೆ. ಹಾಗಾದರೆ ಉಳಿದ ಶೇ. 95 ರಷ್ಟು ಅರ್ಹ ನಾಗರಿಕರ ಮತದಾನದ ಹಕ್ಕನ್ನು ಅನ್ಯಾಯವಾಗಿ ಕಸಿದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಪ್ರಭುತ್ವ ಉತ್ತರಿಸಬೇಕಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು