Home ಅಂಕಣ ಕರ್ನಾಟ ಬಲ: ದೇವರು, ಧರ್ಮ ಅಪಾಯದಲ್ಲಿದೆಯೋ ಅಥವಾ ಹೆಣ್ಣುಕುಲ ಅಪಾಯದಲ್ಲಿದೆಯೋ?

ಕರ್ನಾಟ ಬಲ: ದೇವರು, ಧರ್ಮ ಅಪಾಯದಲ್ಲಿದೆಯೋ ಅಥವಾ ಹೆಣ್ಣುಕುಲ ಅಪಾಯದಲ್ಲಿದೆಯೋ?

0

“..ಮಂತ್ರಪಠಣಗಳಲ್ಲಿ ದೇವರನ್ನು ಕಾಪಾಡಲು ಶಪಥ ಮಾಡುವವರೇ ನಿಜ ಜೀವನದಲ್ಲಿ ಹೆಣ್ಣಿನ ಗೌರವವನ್ನು ಕಾಪಾಡಲು ಮುಂದೆ ಬರದಿರುವುದು ಎಂತಹ ವೈಪರಿತ್ಯ!..” ಲಿಖಿತ್ ಹೊನ್ನಾಪುರ ಅವರ ಬರಹದಲ್ಲಿ

“ದೇವರು ಅಪಾಯದಲ್ಲಿದೆ, ಧರ್ಮ ಅಪಾಯದಲ್ಲಿದೆ” ಎಂದು ಅರೆದುಕೊಳ್ಳುವ ನಾಲಿಗೆಗಳು ಇಂದಿನ ಸಮಾಜದಲ್ಲಿ ದಿನವೂ ಕೇಳಿಸುತ್ತವೆ. ಆದರೆ ಆ ನಾಲಿಗೆಗಳಿಗೆ ಹೆಣ್ಣುಕುಲದ ಅಪಾಯ, ಅವಳ ಬದುಕಿನ ನರಕ, ಅವಳ ಅಳಿವು, ಅವಳ ಕಿರುಚಾಟಗಳು, ಅವಳ ಮೌನ ಕಣ್ಣೀರು – ಯಾವತ್ತೂ ಕಾಣಿಸುವುದಿಲ್ಲ. ಇದು ನಮ್ಮ ನಿಜವಾದ ದುರಂತ, ಧರ್ಮದ ಹೆಸರಿನಲ್ಲಿ ನಡೆಯುವ ಅನೇಕರ ಹೋರಾಟಗಳಿಗೆ ಜನಸಾಗರ ಸೇರುತ್ತದೆ. ದೇವಸ್ಥಾನಗಳ ಸುತ್ತಲೂ ಸಾವಿರಾರು ಜನರ ಗುಂಪು, ಜಾತ್ರೆ-ಪರಂಪರೆಯಲ್ಲಿನ ಹೊಗಳಾಟ, ಸಾಮಾಜಿಕ ಜಾಲತಾಣಗಳಲ್ಲಿ ದೇವರನ್ನು ಉಳಿಸೋಣ, ಧರ್ಮವನ್ನು ಉಳಿಸೋಣ ಎಂಬ ಘೋಷಣೆಗಳ ಜೋರಾದ ಕಿರುಚಾಟ – ಎಲ್ಲವೂ ನಮ್ಮ ಕಿವಿಗೆ ಬೀಳುತ್ತವೆ. ಆದರೆ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ, ಕೊಲೆ, ಕಿರುಕುಳಗಳ ವಿಚಾರ ಬಂದಾಗ ಜನರ ನಾಲಿಗೆ ಮೌನವಾಗುತ್ತದೆ. ಕಿವಿಗಳು ಕುರುಡಾಗುತ್ತವೆ. ಕಣ್ಣುಗಳು ಮುಚ್ಚಿಕೊಳ್ಳುತ್ತವೆ. ಇಂತಹ ಕ್ರೂರ ಘಟನೆಯಲ್ಲೊಂದು ನಮ್ಮ ನೆನಪಿಗೆ ಬರುವ ಹೆಸರು ಸೌಜನ್ಯ. ವಿದ್ಯಾರ್ಥಿನಿ, ಕನಸುಗಳ ತುಂಬಿದ ಕಣ್ಣು, ಬದುಕಿನ ಹಾದಿಯಲ್ಲಿ ಬೆಳಕಿನತ್ತ ಓಡುತ್ತಿದ್ದ ಮುದ್ದು ಹಕ್ಕಿ, ಆದರೆ ದುಷ್ಟರು ಆಕೆಯ ಕನಸುಗಳನ್ನು ನಸುಕಿನಲ್ಲೇ ತುಳಿದು ಹಾಕಿದರು, ಅವಳ ಬದುಕಿನ ಬೆಳಕು ನಂದಿತು.

ಹೆಣ್ಣುಮಕ್ಕಳ ಕಣ್ಣೀರು ಗಂಗೆಯಂತೆ ಹರಿಯುತ್ತಿದ್ದರೂ, ಸಮಾಜದ ಕಿವಿಗೆ ಆ ಸದ್ದು ತಲುಪುವುದಿಲ್ಲ. ದೇವಾಲಯಗಳಲ್ಲಿ ಮೊಳಗುವ ಘಂಟೆಗಳ ಶಬ್ದವನ್ನು ನಾವು ಕೇಳುತ್ತೇವೆ. ಆದರೆ ಅತ್ತಿರುವ ಹೆಣ್ಣಿನ ಹೃದಯದ ರೋದನವನ್ನು ಕೇಳುವುದಿಲ್ಲ. ಮಂತ್ರಪಠಣಗಳಲ್ಲಿ ದೇವರನ್ನು ಕಾಪಾಡಲು ಶಪಥ ಮಾಡುವವರೇ ನಿಜ ಜೀವನದಲ್ಲಿ ಹೆಣ್ಣಿನ ಗೌರವವನ್ನು ಕಾಪಾಡಲು ಮುಂದೆ ಬರದಿರುವುದು ಎಂತಹ ವೈಪರಿತ್ಯ! ಇದು ಕೇವಲ ಕಾನೂನು ಸಮಸ್ಯೆಯಲ್ಲ. ಇದು ಮಾನವೀಯತೆಯ ಸಂಕಷ್ಟ.

ಪ್ರತಿ ಅತ್ಯಾಚಾರ ಪ್ರಕರಣವು ಕೇವಲ ಒಬ್ಬ ಹೆಣ್ಣಿನ ಬದುಕನ್ನೇ ನಾಶ ಮಾಡುವುದಿಲ್ಲ; ಅದು ಆಕೆಯ ಕುಟುಂಬದ ಕನಸುಗಳನ್ನು, ಸಮಾಜದ ಗೌರವವನ್ನು, ನಮ್ಮ ಸಂಸ್ಕೃತಿಯ ಪ್ರತಿಬಿಂಬವನ್ನೇ ಕಿತ್ತುಹಾಕುತ್ತದೆ. ಒಂದು ತಾಯಿಯ ಅಳಲು, ಒಂದು ತಂದೆಯ ಬಿದ್ದುಹೋದ ಕನಸು, ಒಂದು ಸಹೋದರಿಯ ಬಿಗಿದ ಕಿರುಚು – ಇವೆಲ್ಲವೂ ನಮ್ಮ ಕಿವಿಗಳಿಗೆ ತಲುಪದೆ ಹೋಗುವುದು ನಮ್ಮ ನಿರ್ಲಕ್ಷ್ಯದ ದುರಂತ.

ಸೌಜನ್ಯ ಎಂಬ ಹೆಸರೇ ಇಂದು ಪ್ರತಿಯೊಂದು ಹೆಣ್ಣಿನ ಬದುಕಿನ ಸಂಕೇತವಾಗಿದೆ. ಅವಳ ನೋವಿಗೆ ನ್ಯಾಯ ಸಿಕ್ಕಿಲ್ಲದಿರುವುದು ಕೇವಲ ಒಂದು ಪ್ರಕರಣದ ಸೋಲಲ್ಲ. ಅದು ಕರ್ನಾಟಕದ ಮಾನವೀಯತೆಯ ಸೋಲು. #JusticeForSowjanya ಎಂಬ ಘೋಷಣೆ ಪ್ರತಿಯೊಂದು ಹೃದಯವನ್ನೂ ನಡುಗಿಸಬೇಕು. ಇದು ಕೇವಲ ಸಾಮಾಜಿಕ ಮಾಧ್ಯಮದ ಹ್ಯಾಷ್‌ಟ್ಯಾಗ್ ಅಲ್ಲ, ಇದು ತಾಯಿ ಮಡಿಲಲ್ಲಿ ನಿದ್ರೆಹೋದ ಹೆಣ್ಣಿನ ಜೀವವನ್ನು ಉಳಿಸಲು ಸಮಾಜ ತೊಡಬೇಕಾದ ಶಪಥ.

ನಾವೆಲ್ಲರೂ ಒಮ್ಮೆ ಯೋಚಿಸಬೇಕಾಗಿದೆ – ದೇವರನ್ನು ಆರಾಧಿಸುವುದೇ ಮುಖ್ಯವೇ.? ದೇವಿಯ ರೂಪದಲ್ಲಿ ಜೀವಂತವಾಗಿರುವ ಹೆಣ್ಣನ್ನು ಕಾಪಾಡುವುದೇ ಮುಖ್ಯವೇ? ದೇವಾಲಯದಲ್ಲಿ ಲಕ್ಷಾಂತರ ಹೂವುಗಳನ್ನು ಅರ್ಪಿಸಿದರೂ, ಒಬ್ಬ ಹೆಣ್ಣಿನ ಕಣ್ಣೀರು ಒರೆಸದೆ ಹೋದರೆ ಆ ಭಕ್ತಿ ಏನೂ ಅಲ್ಲ. ದೇವರಿಗಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿದ್ದರೆ, ಹೆಣ್ಣಿನ ಗೌರವಕ್ಕಾಗಿ ಏಕೆ ನಾವೆಲ್ಲರೂ ನಿಲ್ಲಬಾರದು?

ಭಕ್ತಿಯೂ ಧರ್ಮವೂ ಹೆಣ್ಣಿನ ಗೌರವ ಕಾಪಾಡಿದಾಗಲೇ ಪವಿತ್ರವಾಗುತ್ತವೆ. ನಮ್ಮ ಮನೆಗಳಲ್ಲಿ, ನಮ್ಮ ಬೀದಿಗಳಲ್ಲಿ, ನಮ್ಮ ಶಾಲೆಗಳಲ್ಲೇ ಪ್ರಾರಂಭವಾಗಬೇಕು ಈ ಬದಲಾವಣೆ. ಪ್ರತಿಯೊಬ್ಬ ಹುಡುಗನ ಮನಸ್ಸಿನಲ್ಲಿ “ಹೆಣ್ಣು ದೇವಿ” ಎಂಬ ಭಾವನೆ ಬೆಳೆಯಬೇಕು. ಪ್ರತಿಯೊಬ್ಬ ತಂದೆ, ತಾಯಿ ತಮ್ಮ ಮಕ್ಕಳಿಗೆ ಗೌರವದ ಪಾಠ ಕಲಿಸಬೇಕು. ಕೇವಲ ಕಾನೂನು, ಕೋರ್ಟ್, ಜೈಲುಗಳಿಗೇ ಈ ಹೊಣೆಗಾರಿಕೆಯನ್ನು ಹಾಕುವುದು ಸಾಲದು. ಸಮಾಜವೇ ತನ್ನ ಹೃದಯ ಬದಲಿಸಬೇಕು.

ವರ್ತಮಾನದಲ್ಲಿ ನಾವು ಮೌನವಾಗಿದ್ದರೆ, ಭವಿಷ್ಯದಲ್ಲಿ ಇತಿಹಾಸವಾಗುವ ನಮಗೆ ಕ್ಷಮೆ ಇಲ್ಲ. ಹೆಣ್ಣು ಸುರಕ್ಷಿತವಾಗಿರುವ ಸಮಾಜವೇ ನಿಜವಾದ ಧಾರ್ಮಿಕ ಸಮಾಜ. ಧರ್ಮದ ಘಂಟೆಗಳು ಮೊಳಗುವುದಕ್ಕಿಂತ ಮುಂಚೆ, ಹೆಣ್ಣಿನ ನಗು ಮೊಳಗಬೇಕು. ದೇವರ ಪ್ರತಿಮೆ ಬೆಳಗುವುದಕ್ಕಿಂತ ಮುಂಚೆ, ಹೆಣ್ಣಿನ ಜೀವನ ಬೆಳಗಬೇಕು. ಇದೇ ನಮ್ಮ ನಿಜವಾದ ಕರ್ತವ್ಯ, ಇದೇ ನಮ್ಮ ನಿಜವಾದ ಭಕ್ತಿ.

ನಮ್ಮೆಲ್ಲರ ಕಣ್ಣುಗಳ ಮುಂದೆ ನ್ಯಾಯದ ಹೆಸರಿನಲ್ಲಿ ನಾಟಕ ನಡೆಯಿತು, ಸಮಾಜದ ಶಕ್ತಿ ತಕ್ಷಣವೇ ಏಕೆ ಬೀಳಲಿಲ್ಲ, ಧರ್ಮ-ದೇವರ ಹೆಸರಿನಲ್ಲಿ ನಾವು ಏಕಾಗ್ರತೆಯಿಂದ ಕೂಗುವಂತೆ ಏಕೆ ಸೌಜನ್ಯರಂತಹ ಅಸಂಖ್ಯಾತ ಹೆಣ್ಣುಮಕ್ಕಳಿಗಾಗಿ ಅದೇ ಶಕ್ತಿ ಹೊರಹೊಮ್ಮಲಿಲ್ಲ. ನಿಜವಾಗಿಯೂ ನಮ್ಮ ಸಮಾಜದ ನಾಲಿಗೆ ತುಂಬಾ ಚತುರ. ದೇವರ ಹೆಸರಿನಲ್ಲಿ ಕೂಗುವುದು ಸುಲಭ. ಧರ್ಮ ಅಪಾಯದಲ್ಲಿದೆ ಎಂದು ಅರೆವುದೂ ಸುಲಭ. ಏಕೆಂದರೆ ದೇವರು ಪ್ರಶ್ನೆ ಮಾಡುವುದಿಲ್ಲ. ಧರ್ಮ ಪ್ರಶ್ನೆ ಮಾಡುವುದಿಲ್ಲ. ಆದರೆ ಹೆಣ್ಣುಮಕ್ಕಳ ವಿಷಯ ಬಂದರೆ ಅವರ ಜೀವ ಹರಣದ ಬಗ್ಗೆ ಮಾತಾಡಿದರೆ ತಕ್ಷಣವೇ ಹೊಣೆಗಾರಿಕೆ ಸಮಾಜದ ಮೇಲೆ ಬಂದು ಬೀಳುತ್ತದೆ. ಆಗ ಮೌನವೇ ಉಳಿದ ಏಕೈಕ ಆಯುಧ. ಹೆಣ್ಣು ಇಂದಿನ ಸಮಾಜದಲ್ಲಿ ಹೆಜ್ಜೆ ಹಾಕುವುದು ಒಂದು ಧೈರ್ಯದ ಸಾಹಸ. ಮನೆ ಹೊರಗೆ ಹೆಜ್ಜೆ ಇಡುವಾಗ ತಾಯಿ-ತಂದೆಯ ಕಣ್ಣಲ್ಲಿ ಹುಟ್ಟುವ ಚಿಂತೆ, ಶಾಲೆ-ಕಾಲೇಜುಗಳಲ್ಲಿ ಬರುವ ತೊಂದರೆಗಳು, ಬಸ್-ರಸ್ತೆಗಳಲ್ಲಿ ಎದುರಾಗುವ ನೋಟಗಳು – ಇವು ಹೆಣ್ಣಿನ ಹಾದಿಯ ಪ್ರತಿಯೊಂದು ಹೆಜ್ಜೆಯನ್ನು ಕಂಟಕಮಯವಾಗಿಸುತ್ತವೆ. ಒಂದು ಬದಿಯಲ್ಲಿ ತಾಯಿಯಾಗಿ, ಮಗಳಾಗಿ, ಅಕ್ಕ-ತಂಗಿಯಾಗಿ ಸಮಾಜಕ್ಕೆ ಬಾಳನ್ನು ಕೊಡುವವಳೇ, ಇನ್ನೊಂದು ಬದಿಯಲ್ಲಿ ಅವಳ ಜೀವವೇ ಸುರಕ್ಷಿತವಲ್ಲದ ಸ್ಥಿತಿ, ನಮ್ಮ ಮೌನವೇ ಅಪರಾಧಿಗಳ ಶಕ್ತಿ. ನಾವು ಪ್ರತಿಕ್ರಿಯಿಸದಷ್ಟು, ನಾವು ಮಾತಾಡದಷ್ಟು, ನಾವು ಮೆರವಣಿಗೆ ನಡೆಸದಷ್ಟು ಅವರು ಇನ್ನಷ್ಟು ಧೈರ್ಯ ಪಡೆಯುತ್ತಾರೆ. ಹೆಣ್ಣಿನ ಕಿರುಚಾಟಗಳು ಗೋಡೆಗಳಲ್ಲಿ ಸಿಲುಕಿಕೊಳ್ಳುತ್ತವೆ. ನ್ಯಾಯಾಲಯಗಳ ದಾರಿ ದಶಕಗಳವರೆಗೆ ಸಾಗುತ್ತದೆ. ಕೊನೆಯಲ್ಲಿ ಸಮಾಜ ಮರೆತುಬಿಡುತ್ತದೆ. ಆದರೆ ಅಪರಾಧಿಯ ದ್ವಾರಕ್ಕೆ ಮರೆವು ತಲುಪುವುದಿಲ್ಲ. ಧರ್ಮವನ್ನು ಉಳಿಸುವ ಮುನ್ನ ಹೆಣ್ಣಿನ ಗೌರವವನ್ನು ಉಳಿಸುವುದೇ ನಿಜವಾದ ಧರ್ಮ. ದೇವರ ಮೂರ್ತಿಯನ್ನು ರಕ್ಷಿಸುವ ಮುನ್ನ ಹೆಣ್ಣಿನ ಜೀವವನ್ನು ರಕ್ಷಿಸುವುದು ನಿಜವಾದ ಭಕ್ತಿ. ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಕೂಗುತ್ತಿರುವ ಧ್ವನಿಯಾಗಿದೆ. ಅದು ಕೇವಲ ಒಬ್ಬ ಹೆಣ್ಣುಮಗುವಿನ ಬದುಕಿನ ವಿಷಯವಲ್ಲ, ಅದು ಪ್ರತಿಯೊಬ್ಬ ಹೆಣ್ಣುಮಕ್ಕಳ ಸುರಕ್ಷತೆ, ಗೌರವ, ಬದುಕಿನ ಹಕ್ಕಿನ ವಿಷಯ. ಹೊಸ ಪೀಳಿಗೆ ಈ ನೈಜ ಪ್ರಶ್ನೆಯನ್ನು ಒಪ್ಪಿಕೊಳ್ಳಬೇಕು. ಧರ್ಮದ ಮೆರವಣಿಗೆಯಲ್ಲಿ ಮಾತ್ರ ಭಾಗವಹಿಸುವ ಬದಲು ಸೌಜನ್ಯರಂತಹ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಒಗ್ಗಟ್ಟಾಗಿ ನಿಂತರೆ ಆಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬದಲಿಸುವುದು, ಹ್ಯಾಷ್‌ಟ್ಯಾಗ್ ಹಾಕುವುದು ಮಾತ್ರ ಸಾಲದು. ಬೀದಿಗೆ ಇಳಿಯಬೇಕು, ಧ್ವನಿ ಎತ್ತಬೇಕು, ಕಾನೂನು ಬಲವಾಗಿಸಬೇಕು, ಹೆಣ್ಣುಮಕ್ಕಳು ಮೌನವಾಗಬಾರದು. ತಮ್ಮ ಕಷ್ಟವನ್ನು, ತಮ್ಮ ನೋವನ್ನು, ತಮ್ಮ ಅನುಭವವನ್ನು ಸಮಾಜಕ್ಕೆ ಹೇಳಬೇಕು, ಏಕೆಂದರೆ ಮೌನವೇ ಅಪರಾಧಿಯನ್ನು ಜೀವಂತವಾಗಿಡುತ್ತದೆ. ಧೈರ್ಯದಿಂದ ಮಾತಾಡುವ ಒಂದು ಧ್ವನಿಯೇ ಇನ್ನೂರು ಧ್ವನಿಗಳಿಗೆ ದಾರಿ ತೋರಿಸಬಹುದು. ನಾವು ದೇವರ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಬಹುದು. ಮೂರ್ತಿ ರಕ್ಷಣೆಗೆ ಕಾನೂನು ತರುತ್ತೇವೆ. ಆದರೆ ಹೆಣ್ಣಿನ ಗೌರವ ಕಾಪಾಡಲು, ಅವಳಿಗೆ ಸುರಕ್ಷತೆಯನ್ನು ನೀಡಲು, ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ನಾವು ಏನು ಮಾಡುತ್ತಿದ್ದೇವೆ. ಇಂದಿನ ತಲೆಮಾರಿನ ನಿಜವಾದ ಹೋರಾಟ ಹೆಣ್ಣಿನ ಬದುಕನ್ನು ಸುರಕ್ಷಿತಗೊಳಿಸುವುದು. ಒಂದು ಸೌಜನ್ಯ ಘಟನೆ ಕೇವಲ ಸುದ್ದಿ ಆಗಿ ಬಾರದಂತೆ ಅದು ಪ್ರತಿಯೊಬ್ಬರ ಹೃದಯದಲ್ಲಿ ಹೊತ್ತಿ ಉರಿಯುವ ಅಗ್ನಿಯಾಗಬೇಕಾಗಿದೆ. ಪ್ರತಿಯೊಬ್ಬ ಪೋಷಕನು ತನ್ನ ಮಗಳ ಬದುಕನ್ನು ಕಾಪಾಡುವ ಹೋರಾಟಕ್ಕೆ ತೊಡಗಿಕೊಳ್ಳಬೇಕು. ಪ್ರತಿಯೊಬ್ಬ ಯುವಕನು ಹೆಣ್ಣಿನ ಗೌರವವನ್ನು ತನ್ನ ಸಹೋದರಿಯಂತೆ ನೋಡಬೇಕು. ಪ್ರತಿಯೊಬ್ಬ ಶಿಕ್ಷಕನು, ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಪ್ರತಿಯೊಬ್ಬ ರಾಜಕೀಯ ನಾಯಕನು – ತಮಗೆ ಹೊಣೆಗಾರಿಕೆ ಇದೆ ಎಂದು ಅರಿತುಕೊಳ್ಳಬೇಕು. ದೇವರು, ಧರ್ಮ ಅಪಾಯದಲ್ಲಿದೆ ಎಂದು ಕೂಗುವ ಮುನ್ನ ಹೆಣ್ಣುಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಧೈರ್ಯ ನಮ್ಮಲ್ಲಿರಬೇಕು. ಸೌಜನ್ಯ ನ್ಯಾಯ ಕೇವಲ ಒಬ್ಬಳಿಗಾಗಿ ಅಲ್ಲ..

ಅದು ನಮ್ಮೆಲ್ಲರ ಮಾನವೀಯತೆಗಾಗಿ, ದೇವರನ್ನು ರಕ್ಷಿಸುವ ಧ್ವನಿಗಿಂತ ಹೆಣ್ಣಿನ ಜೀವವನ್ನು ರಕ್ಷಿಸುವ ಧ್ವನಿಯೇ ಇಂದಿನ ಕಾಲಕ್ಕೆ ಅಗತ್ಯ, ನಮ್ಮ ನಾಲಿಗೆ ದೇವರಿಗಾಗಿ ಮಾತ್ರವಲ್ಲ, ಹೆಣ್ಣಿಗಾಗಿ ಸಹ ಕೂಗಲಿ, ಆಗ ಮಾತ್ರ ನಿಜವಾದ ಧರ್ಮ, ನಿಜವಾದ ದೇವರು, ನಿಜವಾದ ಮಾನವೀಯತೆ..

You cannot copy content of this page

Exit mobile version