ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಕೈ ಮೀರುವ ಹಂತ ತಲುಪಿದೆ. ಹಮಾಸ್ ಬಂಡುಕೋರರನ್ನು ಮಟ್ಟ ಹಾಕುವುದಾಗಿ ಯುದ್ಧ ಘೋಷಿಸಿದ್ದ ಇಸ್ರೇಲ್ ಈಗ ಪ್ಯಾಲೆಸ್ತೇನ್ ಮೇಲೆ ಹಗೆ ಸಾಧಿಸುವ ಮಟ್ಟಕ್ಕೆ ತನ್ನ ಯುದ್ಧದ ಸ್ವರೂಪ ಬದಲಿಸಿದೆ. ಅದಕ್ಕೆ ಸರಿಯಾಗಿ ಗಾಜಾದಲ್ಲಿ ನಿರಾಶ್ರಿತರ ಶಿಬಿರ, ಆಸ್ಪತ್ರೆ, ಆಂಬುಲೆನ್ಸ್ ಗಳನ್ನೂ ಬಿಡದೇ ಇಸ್ರೇಲ್ ದಾಳಿ ನಡೆಸಿದೆ.
ಹಮಾಸನ್ನು ನಿರ್ಮೂಲನೆ ಮಾಡಲು ಇಸ್ರೇಲ್ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ ಎಂಬುದಕ್ಕೆ ಈ ದಾಳಿ ಸಾಕ್ಷೀಕರಿಸುತ್ತಿದೆ. ಅದರಂತೆ ಇಸ್ರೇಲ್ ಸೇನೆ ಗಾಜಾದಲ್ಲಿ ಇರುವ ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳ ಮೇಲೆ ರಾಕೆಟ್ಗಳನ್ನು ಹಾರಿಸಿ ತನ್ನ ಕೆಲಸ ಮುಂದುವರೆಸಿದೆ.
ಗಾಝಾ ಆಸ್ಪತ್ರೆಯ ಬಳಿ ಶುಕ್ರವಾರ ಆಂಬ್ಯುಲೆನ್ಸ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇದು ಉಗ್ರರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಯುದ್ಧ ವಲಯದಲ್ಲಿ ಹಮಾಸ್ ಉಗ್ರರು ಬಳಸುತ್ತಿದ್ದ ಆಂಬ್ಯುಲೆನ್ಸ್ ಅನ್ನು ಗುರುತಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
‘ಈ ದಾಳಿಯಲ್ಲಿ ಹಮಾಸ್ ನ ಅನೇಕ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ’ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ ಹಮಾಸ್ ಅಧಿಕಾರಿ ಇಜ್ಜತ್ ಅಲ್-ರೇಶಿಕ್ ಅವರು ತಮ್ಮ ಹೋರಾಟಗಾರರು ಇನ್ನೂ ಇದ್ದಾರೆ, ದಾಳಿಯಲ್ಲಿ ಹಮಾಸ್ ಹೋರಾಟಗಾರರು ಸತ್ತಿದ್ದಾರೆ ಎಂಬ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಹಾಗಿದ್ದಾಗ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತರಾದವರು ಅಮಾಯಕ ಪ್ರಜೆಗಳು ಎಂದು ಹಮಾಸ್ ಹೇಳಿಕೆ ನೀಡಿದೆ.
ಒತ್ತೆಯಾಳುಗಳಾಗಿರುವವರನ್ನು ಹಮಾಸ್ ಬಿಡುಗಡೆ ಮಾಡುವವರೆಗೂ ಹೋರಾಟವನ್ನು ನಿಲ್ಲಿಸುವಂತೆ ವಾಷಿಂಗ್ಟನ್ ನ ಉನ್ನತ ರಾಜತಾಂತ್ರಿಕರು ನೀಡಿದ ಕರೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಅದೇ ಸಮಯದಲ್ಲಿ, ಒತ್ತೆಯಾಳುಗಳನ್ನು ಮೊದಲು ಬಿಡುಗಡೆ ಮಾಡಲಾಗುವುದು ಮತ್ತು ನಂತರ ಯುದ್ಧ ನಿಲ್ಲುತ್ತದೆ ಎಂದು ನೆತನ್ಯಾಹು ಹೇಳುತ್ತಾರೆ.