ಮೈಸೂರು ದಸರಾ ಕಂಬಳ : ಜನಪದವೋ ಊಳಿಗಮಾನ್ಯದ ಮುಂದುವರಿಕೆಯೋ?

“..ಕರಾವಳಿಯ ಊಳಿಗಮಾನ್ಯ ಶಕ್ತಿಗಳು ಕಂಬಳವನ್ನು ಮೈಸೂರು ದಸರಾಕ್ಕೆ ಪರಿಚಯಿಸುವ ಮೂಲಕ ತಮ್ಮ ಜಾತಿ ಹೊಂದಿರುವ ಸಾಮಾಜಿಕ-ರಾಜಕೀಯ ಪ್ರಾಬಲ್ಯವನ್ನು ಪ್ರದರ್ಶನ ಮಾಡಲಿದ್ದಾರೆ.‌.” ನವೀನ್ ಸೂರಿಂಜೆಯವರ ಬರಹದಲ್ಲಿ

ಕರಾವಳಿಯ ಊಳಿಗಮಾನ್ಯ ಜಾತಿಗಳು ಈಗ ಕಂಬಳವನ್ನು ಮೈಸೂರು ದಸರಾಕ್ಕೂ ವಿಸ್ತರಿಸಿದ್ದು, ಇದು ಮೇಲ್ವರ್ಗಗಳು ತಮ್ಮ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸವನ್ನು ಜಗತ್ತಿಗೆ ತಿಳಿಸಲು ಮತ್ತು ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುವುದನ್ನು ಮುಂದುವರೆಸುವ ಪ್ರಯತ್ನವೇ ಹೊರತು ಸಂಸ್ಕೃತಿಯ ಪ್ರದರ್ಶನವಲ್ಲ.‌

ಕಂಬಳದ ಇತಿಹಾಸವನ್ನು ಗಮನಿಸಿದರೆ ಅದು ಎಂದಿಗೂ ಕರಾವಳಿಯ ಎಲ್ಲ ವರ್ಗಗಳನ್ನು ಪ್ರತಿನಿಧಿಸುತ್ತಿರಲಿಲ್ಲ. ಈಗಲೂ ಕೂಡಾ ಕಂಬಳ ಎನ್ನುವುದು ಎಲ್ಲರಿಗೂ ದಕ್ಕುವ ಕ್ರೀಡೆ/ಸಂಸ್ಕೃತಿಯಲ್ಲ. ಹಿಂದೆಯೂ, ಈಗಲೂ ಕಂಬಳವು ಮುಖ್ಯವಾಗಿ ಊಳಿಗಮಾನ್ಯ (ಫ್ಯೂಡಲ್) ಭೂಸ್ವಾಮ್ಯ ವ್ಯವಸ್ಥೆಗೆ ಸೇರಿದ ಪ್ರಬಲ ಜಾತಿಗಳ ಕ್ರೀಡೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಮೈಸೂರು ದಸರಾದಲ್ಲಿ ನಡೆಸಲು ಉದ್ದೇಶಿಸಿರುವ ಕಂಬಳವನ್ನು ಕೂಡಾ ಕರ್ನಾಟಕದ ಊಳಿಗಮಾನ್ಯ ಪರಂಪರೆಯ ವೈಭವೀಕರಣ ಮತ್ತು ಮುಂದುವರಿಕೆಯೆಂದೇ ಪರಿಗಣಿಸಬಹುದು.

ಹಿಂದೆ ಕಂಬಳದ ಅಂಗವಾಗಿ ‘ಅಜಲು’ ಪದ್ಧತಿ ಅಸ್ತಿತ್ವದಲ್ಲಿತ್ತು. 2000 ನೇ ಇಸವಿಯಲ್ಲಿ ಅದನ್ನು ನಿಷೇದಿಸಲಾಯಿತು. ಈ ಪದ್ಧತಿಯ ಪ್ರಕಾರ, ದಲಿತ ಸಮುದಾಯಕ್ಕೆ ಸೇರಿದ ಕೊರಗರನ್ನು ಕೋಣದ ಓಟ ನಡೆಯುವ ಗದ್ದೆಯಲ್ಲಿ ಮೊದಲು ಓಡಿಸಲಾಗುತ್ತಿತ್ತು. ಮೇಲ್ವರ್ಗಕ್ಕೆ ಸೇರಿದ ಬಂಟರ ಕೋಣಗಳು ಓಡುವ ಸಂದರ್ಭದಲ್ಲಿ ಗದ್ದೆಯಲ್ಲಿರುವ ಗಾಜು, ಕಲ್ಲುಗಳು ಕೋಣದ ಕಾಲಿಗೆ ಗಾಯಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಂಟರ ಕೋಣಗಳು ಓಡುವ ಮೊದಲು ದಲಿತರು ಓಡಿದರೆ ಅವರ ಕಾಲಿಗೆ ಗಾಜು, ಕಲ್ಲು ತಾಗಿದಾಗ ಗದ್ದೆಯನ್ನು ಕೋಣಗಳಿಗೆ ಓಡಿಸಲು ಪೂರಕವಾಗಿಸಬಹುದು ಎಂದು ಅಮಾನವೀಯ ಉದ್ದೇಶಕ್ಕಾಗಿ ಈ ಆಚರಣೆ ಕಂಬಳದಲ್ಲಿತ್ತು.

‘ಕಂಬಳದಲ್ಲಿ ‘ಪನಿ ಕುಲ್ಲುನು’ ಎಂಬ ಮತ್ತೊಂದು ಆಚರಣೆಯಿದೆ. ಈ ಆಚರಣೆಯಲ್ಲಿ ಕಂಬಳದ ಮುನ್ನ ದಿನವೇ ಕೋಣಗಳ ಜತೆ ಬೇರೆ ಬೇರೆ ಊರುಗಳಿಂದ ಬರುವ ಬಂಟರು, ಅವರ ಆಳುಗಳಿಗೆ ಮನರಂಜನೆ ನೀಡುವ ರೀತಿಯಲ್ಲಿ ಕೊರಗನ್ನು ಲೈಂಗಿಕವಾಗಿ ಅಭಿನಯಿಸುವಂತೆ ಒತ್ತಾಯಿಸಲಾಗುತ್ತಿತ್ತು. ಈ ಅಮಾನವೀಯ ಪದ್ದತಿಯನ್ನು ಪನಿ ಕುಲ್ಲುನು ಹೆಸರಿನಲ್ಲಿ ಸಂಪ್ರದಾಯವಾಗಿಸಲಾಗಿತ್ತು.

ಈ ಎರಡೂ ಅಮಾನವೀಯ ಸಂಪ್ರದಾಯಗಳು ಕಂಬಳದಲ್ಲಿ ಈಗ ಇಲ್ಲ. ಆದರೆ ಕಂಬಳ ಈಗಲೂ ಇದೆ. ಕಂಬಳ ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಈ ನಿಷೇದಿತ ಪದ್ದತಿಗಳು ಸ್ಪಷ್ಟಪಡಿಸುತ್ತದೆ.

ನಾವು ಈಗಲೂ ಕರಾವಳಿಯಲ್ಲಿ ನಡೆಯುತ್ತಿರುವ ಕಂಬಳದ ಆಹ್ವಾನ ಪತ್ರಿಕೆಯನ್ನು ಗಮನಿಸಿದರೆ, ಕಾರ್ಯಕ್ರಮದ ವಿವಿಧ ಸಮಿತಿಗಳಲ್ಲಿ ಬಹುತೇಕ ಪ್ರಬಲ ಜಾತಿಗಳಿಗೆ ಸೇರಿದ ಬಂಟರು ಮತ್ತು ಬ್ರಾಹ್ಮಣರೇ ಕಾಣಿಸುತ್ತಾರೆ. ಯಾವುದೇ ಉಪಸಮಿತಿಯ ಅಧ್ಯಕ್ಷರಾಗಿ ಒಬ್ಬ ದಲಿತ ಅಥವಾ ಕೊರಗ ನಾಯಕನನ್ನೂ ನೇಮಿಸಲಾಗಿಲ್ಲ. ಇದು ಇಂದಿಗೂ ಕಂಬಳದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಅಸಮಾನತೆಯ ಪ್ರತಿಬಿಂಬವಲ್ಲವೇ? ಇದು ಕಂಬಳದ ಊಳಿಗಮಾನ್ಯ ಸ್ವರೂಪಕ್ಕೆ ಸಾಕ್ಷಿಯಲ್ಲವೇ?

ಕಾಂಬಳವನ್ನು ಕೇವಲ ಕ್ರೀಡೆಯಾಗಿ ನೋಡಲಾಗುವುದಿಲ್ಲ. ಇಂದಿಗೂ ಕೇವಲ ಕೆಲವು ಸಾವಿರ ಜನಸಂಖ್ಯೆ ಹೊಂದಿರುವ ಕೊರಗ ಸಮುದಾಯ ಅಪೌಷ್ಟಿಕತೆ, ಶಿಶು ಸಾವು ಮತ್ತು ತೀವ್ರ ಸಾಮಾಜಿಕ-ಆರ್ಥಿಕ ಹಿಂದುಳಿದ ಸ್ಥಿತಿಯನ್ನು ಎದುರಿಸುತ್ತಿದೆ. ಐದು ಅಥವಾ ಹತ್ತು ವರ್ಷಗಳ ಹಿಂದಿನವರೆಗೂ ಕಂಬಳದೊಂದಿಗೆ ಸಂಬಂಧಿಸಿದ ಊಳಿಗಮಾನ್ಯ ಪದ್ಧತಿಗಳು ಈ ಸಮುದಾಯದ ಬದುಕಿನ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರಿದ್ದವು ಎಂಬುದನ್ನು ನಿರ್ಲಕ್ಷಿಸಲಾಗುವುದಿಲ್ಲ. ಕೊರಗರ ಅಪೌಷ್ಠಿಕತೆ, ಶಿಶುಮರಣ, ಆಯುಷ್ಯದ ಇಳಿಕೆಗೆ ಅಜಲು ಪದ್ದತಿಗಳೇ ಕಾರಣ ಎಂಬುದಕ್ಕೆ ಯಾವುದೇ ಅಧ್ಯಯನ ಬೇಕಾಗಿಲ್ಲ.

ಕರಾವಳಿಯ ಊಳಿಗಮಾನ್ಯ ಶಕ್ತಿಗಳು ಕಂಬಳವನ್ನು ಮೈಸೂರು ದಸರಾಕ್ಕೆ ಪರಿಚಯಿಸುವ ಮೂಲಕ ತಮ್ಮ ಜಾತಿ ಹೊಂದಿರುವ ಸಾಮಾಜಿಕ-ರಾಜಕೀಯ ಪ್ರಾಬಲ್ಯವನ್ನು ಪ್ರದರ್ಶನ ಮಾಡಲಿದ್ದಾರೆ.‌ ಕರಾವಳಿಯ ಒಂದೊಂದು ಕಂಬಳವನ್ನು ಗಮನಿಸಿ. ಪ್ರತೀ ಕಂಬಳದ ದಿನ ಜಿಲ್ಲೆಯಾದ್ಯಂತ ಹಾಕುವ ಬ್ಯಾನರ್, ಫ್ಲೆಕ್ಸ್ ಗಳಲ್ಲಿ ಬಂಟ ಸಮುದಾಯದವರ ಹೆಸರುಗಳು ಮತ್ತು ಮುಂಡಾಸುದಾರಿ ಬಂಟರ ಫೋಟೋಗಳು ಕಾಣಿಸುತ್ತದೆ. ಇದು ಕರಾವಳಿಯನ್ನು ಮತ್ತೆ ಶತಮಾನಗಳ ಹಿಂದೆ ಕೊಂಡೊಯ್ದು ‘ಬಂಟರ ಗುತ್ತಿನ ಗತ್ತು’ ತೋರಿಸುವ, ಜಾತಿಗೆ ಪ್ರಾಧಾನ್ಯತೆ ಕೊಡುವ ಹಿಡನ್ ಅಜೆಂಡಾ ಅಲ್ಲದೇ ಇನ್ನೇನೂ ಅಲ್ಲ. ಹಾಗಾಗಿ ಕರಾವಳಿಯ ಜನಪದ ಕ್ರೀಡೆ ಎಂದು ನಂಬಿಸಿರುವ ಕಂಬಳವನ್ನು ಮೈಸೂರು ದಸರಾದಲ್ಲಿ ಏರ್ಪಡಿಸುವುದು ಸರಿಯಾದ ಕ್ರಮವಲ್ಲ. ಸರ್ಕಾರವೇ ಊಳಿಗಮಾನ್ಯ ಆಚರಣೆಯೊಂದಕ್ಕೆ ವ್ಯಾಪ್ತಿ ಮೀರಿ ಬೆಂಬಲಿಸುವುದು ಅಸಂವಿಧಾನಿಕ ಮತ್ತು ಅನಗತ್ಯ ಕ್ರಮವಾಗಿದೆ.

Related Articles

ಇತ್ತೀಚಿನ ಸುದ್ದಿಗಳು