Sunday, June 30, 2024

ಸತ್ಯ | ನ್ಯಾಯ |ಧರ್ಮ

ಡೆವಿಲ್‌ ಪರ ನಿಂತ ಚಿತ್ರರಂಗ | ಮಾಧ್ಯಮಗಳ ಒನ್‌ ಸೈಡೆಡ್‌ ವಿಚಾರಣೆಯೇ ದರ್ಶನ್‌ ಪಾಲಿಗೆ ವರವಾಯಿತೇ?

ತನ್ನ ಗೆಳತಿಗೆ ಅಸಭ್ಯ ಮೆಸೇಜ್‌ ಕಳುಹಿಸಿದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಡಿ ನಟ ದರ್ಶನ್‌ ಜೈಲಿಗೆ ತೆರಳಿ ತಿಂಗಳಾಗುತ್ತಾ ಬಂದಿದೆ. ಮೊದಮೊದಲು ಈ ಪ್ರಕರಣದಿಂದಾಗಿ ದರ್ಶನ್‌ ದೊಡ್ಡ ಕ್ರೂರಿಯಾಗಿ ಬಿಂಬಿಸಲ್ಪಟ್ಟಿದ್ದರು. ದರ್ಶನ್‌ ಮಾಡಿರುವ ಕೃತ್ಯಕ್ಕೆ ಕ್ಷಮೆಯೇ ಇಲ್ಲ, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಮಾತುಗಳು ಒಕ್ಕೊರಲಿನಿಂದ ಕೇಳಿಬರುತ್ತಿದ್ದವು.

ಇನ್ನು ಕನ್ನಡ ಮಾಧ್ಯಮಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ವ್ಯಾಖ್ಯಾನಗಳನ್ನು ಬಳಸುತ್ತಾ ತೀರ್ಪುಗಳನ್ನು ಬರೆಯುತ್ತಿದ್ದವು. ಕೆಲವು ಪತ್ರಕರ್ತರು ದರ್ಶನ್‌ ವಿರೋಧಿಗಳ ಕಣ್ಣಲ್ಲಿ ಹೀರೋಗಳಾಗಿ ಕಾಣಿಸಿದ್ದರೆ, ದರ್ಶನ್‌ ಅಭಿಮಾನಿಗಳ ಕಣ್ಣಿನಲ್ಲಿ ಹಳೆಯ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್‌ ನಿರ್ವಹಿಸುತ್ತಿದ್ದ ಪಾತ್ರಗಳಂತೆ ಕಾಣತೊಡಗಿದ್ದರು.

ಈಗ ದರ್ಶನ್‌ ವಿಚಾರಣೆ, ನಂತರದ ಜೈಲುವಾಸಗಳ ನಂತರ ಈಗ ಸನ್ನಿವೇಶ ಬದಲಾಗುತ್ತಿರುವಂತೆ ತೋರುತ್ತಿದೆ. ಚಿತ್ರರಂಗದ ಒಬ್ಬೊಬ್ಬರೇ ದರ್ಶನ್‌ ಮಾಡಿದ್ದಾರೆನ್ನಲಾಗುತ್ತಿರುವ ಕೃತ್ಯವನ್ನು ವಿರೋಧಿಸುತ್ತಲೇ ಅವರ ಸಹಾನುಭೂತಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಮೊದಲಿಗೆ ಜಗ್ಗೇಶ್‌ ಹಾಗೂ ರಮ್ಯ ದರ್ಶನ್‌ ವಿರುದ್ಧವಾಗಿ ಹೇಳಿಕೆ ಕೊಟ್ಟಿದ್ದರು. ದರ್ಶನ್‌ ಅವರ ವರ್ತನೆಯನ್ನು ಖಂಡಿಸಿದ್ದರು. ಒಂದು ಹೆಜ್ಜೆ ಮುಂದೆ ಹೋದ ರಮ್ಯ ದರ್ಶನ್‌ ಅವರಿಗೆ ಇರುವ ಜನಪ್ರಿಯತೆ ಸೃಷ್ಟಿಸಲ್ಪಟ್ಟದ್ದು ಅದು ನಿಜವಾದ ಜನಪ್ರಿಯತೆಯಲ್ಲ ಎಂದೂ ಹೇಳಿದ್ದರು.

ಆದರೆ ಕಳೆದ ವಾರ ನಟಿ ಭಾವನಾ ರಾಮಣ್ಣ ದರ್ಶನ್‌ ಅವರ ವಿಷಯವಾಗಿ ಮಾತನಾಡುತ್ತಾ ತಾನು ಅವರು ಮಾಡಿರಬಹುದಾದ ಕೃತ್ಯವನ್ನು ವಿರೋಧಿಸುತ್ತಲೇ ಅವರನ್ನು ಯಾವುದೇ ಪರಿಸ್ಥಿತಿಯಲ್ಲೂ ಬೆಂಬಲಿಸುತ್ತೇನೆ ಎಂದಿದ್ದರು.

ದರ್ಶನ್‌ ಅವರೊಂದಿಗೆ ಚಿಂಗಾರಿ ಚಿತ್ರದಲ್ಲಿ ಅಭಿನಯಿಸಿದ್ದ ಭಾವನಾ ದರ್ಶನ್‌ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ “ಯಾವ ಮನೆಯ ಹೆಣ್ಣು ಮಗಳೇ ಆಗಿರಲಿ ಎಲ್ಲರಿಗೂ ಮಾನ ಮರ್ಯಾದೆ, ಅವರಿಗೂ ಒಂದು ಮನಸ್ಸು ಇರುತ್ತದೆ. ಯಾವುದೋ ಒಂದು ಅಪ್ರಾಪ್ತ ಯುವತಿಗೆ, 19 ವರ್ಷದ ಹುಡುಗಿಗೆ ಈ ರೀತಿ ಮೆಸೇಜ್ ಬಂದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾರದ್ದೋ ಮನೆ ಹೆಣ್ಣುಮಕ್ಕಳಿಗೆ ನೀವ್ಯಾಕೆ ಮೆಸೇಜ್ ಮಾಡ್ತೀರಾ.. ? ಯಾವ ತರದ ಮೆಸೆಜ್ ಬಂದಿದೆ ..? ಕೆಲವು ಸೋಷಿಯಲ್ ಮಿಡಿಯಾ ಮೆಸೇಜ್‌ಗಳನ್ನು ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ” ಎಂದು ರೇಣುಕಾಸ್ವಾಮಿ ಮಾಡಿದ ಕೃತ್ಯದ ಕುರಿತು ಪ್ರಶ್ನಿಸಿದ್ದರು.

ಮುಂದುವರೆದು ಮಾತನಾಡಿದ್ದ ಅವರು “ಇದು ಸರಿ, ತಪ್ಪು ಅಂತ ನಾನು ಹೇಳ್ತಿಲ್ಲ. ಇನ್ನೊಂದು ಸೈಡ್‌ ಸ್ಟೋರಿಯನ್ನೂ ನೀವು ತೋರಿಸಬೇಕು. ಹೇಗೆ ಆಗಬಹುದಿತ್ತು, ಏನು ಮಾಡಬಹುದಿತ್ತು ಅನ್ನೋದನ್ನು ನಾನು ಹೇಳಲ್ಲ. ಸೈಕಿಯಾರ್ಟಿಸ್ಟ್ ಕೂಡ ಮನುಷ್ಯನ ಇವತ್ತಿನ ಘೋರವಾದ ಕೃತ್ಯಗಳನ್ನು ಘಟನೆ ಆದ ಮೇಲೆ ಅನಾಲಿಸಿಸ್ ಮಾಡುತ್ತಾರೆ. ಹಾಗೆ ಆಗದೆ ಇರುವ ತರ ಹೇಗೆ ಇರಬೇಕಿತ್ತು, ಯಾಕೆ ಹಾಗೆ ಆಗಿದೆ ಎಂದು ಇವತ್ತಿನವರೆಗೂ ಎಲ್ಲೂ ಜಾಸ್ತಿ ನಿದರ್ಶನಗಳು ಸಿಕ್ಕಿಲ್ಲ. ಯಾಕಂದ್ರೆ ಅದು ಮನುಷ್ಯನ ಎಮೋಷನ್‌ಗಳು. ನಾವು ತಲೆಯಿಂದ ಮಾತ್ರ ಯೋಚನೆ ಮಾಡಲ್ಲ ಮನಸ್ಸಿನಿಂದ ಕೂಡ, ಹೀಗಾಗಿ ಅ ಸಂದರ್ಭಲ್ಲಿ ಯಾಕೆ ಏನು ಮಾಡಿದ್ದಾರೆ ಅನ್ನೋದು ನಾನು ಹೇಳೋಕೆ ಆಗಲ್ಲ. ಅದನ್ನ ಸಮರ್ಥನೆ ಕೂಡ ಮಾಡಲ್ಲ” ಎಂದು ಹೇಳುವ ಮೂಲಕ ಅವರು ಮಾಧ್ಯಮಗಳ ಏಕಮುಖಿ ವರದಿಗಾರಿಕೆಯನ್ನು ಪ್ರಶ್ನಿಸಿದ್ದರು.

“ನಾವು ಕಲಾವಿದರು ಕುಟುಂಬದಂತೆ. ಕಷ್ಟದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಿಟ್ಟುಕೊಡಲಾಗದು. ನಾನು ಯಾವತ್ತಿದ್ದರೂ ದರ್ಶನ್‌ ಪರ. ಅವರನ್ನು ಬಿಟ್ಟುಕೊಡಲಾರೆ ಐ ಸ್ಟ್ಯಾಂಡ್‌ ವಿತ್‌ ಹಿಮ್‌” ಎಂದು ಭಾವನಾ ಗಟ್ಟಿಯಾಗಿ ಹೇಳಿದ್ದರು.

ಇದಲ್ಲದೆ ಸಾಮಾಜಿಕ ಮಾಧ್ಯಮದಲ್ಲೂ ದರ್ಶನ್‌ ಅಭಿಮಾನಿಗಳಲ್ಲದ ಆದರೆ ಇಂತಹ ವಿಕೃತ ಮೆಸೇಜ್‌ ಕಳುಹಿಸಿ ಆನಂದಿಸುವವರನ್ನು ವಿರೋಧಿಸುವ ಜನಸಾಮಾನ್ಯರು ಸಹ ರೇಣುಕಾಸ್ವಾಮಿಯನ್ನು ಪಾಪದ ಸಂತ್ರಸ್ತನಂತೆ ತೋರಿಸಿ, ಅವನ ಹೀನ ಕೃತ್ಯದ ಬಗ್ಗೆ ಮಾತನಾಡದಿರುವುದನ್ನು ಪ್ರಶ್ನಿಸುತ್ತಿದ್ದಾರೆ.

ಅಲ್ಲದೆ ನಟಿ, ಬಿಗ್‌ ಬಾಸ್‌ ಸ್ಪರ್ಧಿ ಚಿತ್ರಾಲ್‌ ರಂಗಸ್ವಾಮಿಯವರು ಸಹ ಇದೇ ರೇಣುಕಾಸ್ವಾಮಿ ತನ್ನ ನಕಲಿ ಖಾತೆಯಿಂದ ಅಶ್ಲೀಲ ಮೆಸೇಜುಗಳನ್ನು ಕಳುಹಿಸಿದ್ದ, ನಾನು ಅವನನ್ನು ಬ್ಲಾಕ್‌ ಮಾಡಿದ್ದೆ ಎಂದು ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ರೇಣುಕಾಸ್ವಾಮಿಗೆ ಇದೊಂದು ಗೀಳಾಗಿತ್ತೆ ಎನ್ನುವ ಅನುಮಾನವೂ ಮೂಡದಿರದು.

ರೇಣುಕಾಸ್ವಾಮಿಗೆ ಈ ದುರಭ್ಯಾಸವಿರದೇ ಹೋಗಿದ್ದರೆ ಮೊನ್ನೆ ಆತ ತನ್ನ ಪತ್ನಿಯೊಂದಿಗೆ ಮದುವೆಯ ಮೊದಲ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದ.

ಈ ನಡುವೆ ನಟ ಧ್ರುವಸರ್ಜಾ ಹಾಗೂ ಇನ್ನೂ ಕೆಲವರು ರೇಣುಕಾಸ್ವಾಮಿಯ ಮನೆಗೆ ಹೋಗಿ ಆತನ ಕುಟುಂಬಕ್ಕೆ ಸಾಂತ್ವನ ಹೇಳಿ ಒಂದಷ್ಟು ಧನಸಹಾಯವನ್ನೂ ಮಾಡಿದ್ದರು.

ರೇಣುಕಾಸ್ವಾಮಿಯ ಪೋಷಕರು ಮಗಳಿಗೆ ಸರ್ಕಾರಿ ನೌಕರಿ ನೀಡುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು ಎನ್ನುವುದು ಗಮನಾರ್ಹ. ಈ ವಿರೋಧಕ್ಕೆ ಮುಖ್ಯ ಕಾರಣ ರೇಣುಕಾಸ್ವಾಮಿ ಯಾವ ಕಾರಣಕ್ಕಾಗಿ ಸತ್ತುಹೋದ ಎನ್ನುವುದು. ಆತನನ್ನು ಹುತಾತ್ಮನಂತೆ ಬಿಂಬಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎನ್ನುವುದು ಹೀಗೆ ವಿರೋಧಿಸುವವರ ಅಭಿಪ್ರಾಯ.

ಇದೆಲ್ಲದರ ನಡುವೆ ಇಂದು ನಟಿ ರಕ್ಷಿತಾ ಮತ್ತು ಅವರ ಪತಿ ಪ್ರೇಮ್‌ ಕೂಡಾ ಜೈಲಿನಲ್ಲಿ ದರ್ಶನ್‌ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅವರನ್ನು ಬೇಟಿಯಾದ ನಂತರ ರಕ್ಷಿತಾ ಅವರು ನಮ್ಮವರು ನೋವಿನಲ್ಲಿರುವಾಗ ನಾವು ಸಂತೋಷದಲ್ಲಿರುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಹಾಗಿದ್ದರೆ ಈಗ ದರ್ಶನ್‌ ಪರ ಮೂಡುತ್ತಿರುವ ಸಹಾನುಭೂತಿಗೆ ಕಾರಣವೇನಿರಬಹುದು? ಬಹುತೇಕ ಮಾಧ್ಯಮಗಳ ಏಕಮುಖಿ ವರದಿಗಾರಿಕೆ ಮತ್ತು ದರ್ಶನ್‌ ಮೇಲಿನ ಅವರ ದ್ವೇ಼ಷವೇ ಎನ್ನುಬಹುದು. ದರ್ಶನ್‌ ಮತ್ತು ಕನ್ನಡ ಮಾಧ್ಯಮಗಳ ನಡುವಿನ ದ್ವೇ಼ಷ ಬಹಳ ಹಳೆಯದು. ಅದು ಇತ್ತೀಚೆಗಷ್ಟೇ ರಾಜಿಯಾಗಿತ್ತು. ಅವರನ್ನು ಮಾಧ್ಯಮದವರು ಬ್ಯಾನ್‌ ಕೂಡಾ ಮಾಡಿದ್ದರು. ಈಗ ದರ್ಶನ್‌ ಒಂದು ಕೊಲೆ ಪ್ರಕರಣದಲ್ಲಿ ಸಿಲುಕುತ್ತಿದ್ದಂತೆ ಅವರು ಅದನ್ನು ʼಸರಿಯಾಗಿʼ ಬಳಸಿಕೊಳ್ಳಲು ತೀರ್ಮಾನಿಸಿದಂತಿದೆ.

ಆದರೆ ಈ ಬಗೆಯ ಒನ್‌ ಸೈಡೆಡ್‌ ವಿಚಾರಣಾ ಮಾದರಿಯೇ ಈಗ ದರ್ಶನ್‌ ಪಾಲಿಗೆ ವರವಾಗಿ ಒದಗಿ ಬಂದ ಹಾಗಿದೆ. ಈಗ ಕೊಲೆಯ ತೀಕ್ಷ್ಣತೆಯ ಚರ್ಚೆಗಳೆಲ್ಲವೂ ಮುಗಿದಿರುವ ಹೊತ್ತಿನಲ್ಲಿ ಮಾಧ್ಯಮಗಳ ಆಚೆಗೆ ಕೊಲೆಯ ಕಾರಣದ ಕುರಿತು ಚರ್ಚೆಯಾಗುತ್ತಿದೆ. ಅದೇ ವೇಳೆ ನಟ ನಟಿಯರು ಸಹ ದರ್ಶನ್‌ ಕುರಿತು ಸಹಾನುಭೂತಿಯಿಂದ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸೇರಿ ಜನರಲ್ಲಿ ದರ್ಶನ್‌ ಕುರಿತು ಒಂದು ಸಾಫ್ಟ್‌ ಕಾರ್ನರ್‌ ಕ್ರಿಯೇಟ್‌ ಆಗುತ್ತಿರುವುದಂತೂ ನಿಜ.

ʼಟು ದಿ ಡೆವಿಲ್‌ ಗಿವ್‌ ಇಟ್ಸ್‌ ಕ್ರೆಡಿಟ್‌ʼ ಎನ್ನುವುದು ಒಂದು ನಾಣ್ನುಡಿ. ಎಂದರೆ ದೆವ್ವವನ್ನು ಶಿಕ್ಷಿಸುವಾಗಲೂ ಅದು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿಗೆ ತಂದುಕೊಳ್ಳಬೇಕು. ಈಗ ಮಾಧ್ಯಮ ʼಡೆವಿಲ್‌ʼಗೆ ಶಿಕ್ಷೆ ನೀಡುತ್ತಿದೆ. ಅತ್ತ ಚಿತ್ರರಂಗ ಅದೇ ʼಡೆವಿಲ್‌ʼನ ಒಳ್ಳೆಯ ಕೆಲಸಗಳನ್ನು ಹೇಳುತ್ತಾ ಮಾಧ್ಯಮವನ್ನು ಪ್ರಶ್ನಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು