ಮೈಸೂರು ಚಲೋ: ಹೊರಟಿದ್ದು ಸರ್ಕಾರ ಬೀಳಿಸಲು, ಮಾಡಿದ್ದು ನಿಖಿಲ್‌ ಕುಮಾರಸ್ವಾಮಿ ಲಾಂಚ್‌

ಅಂತೂ ಇಂತೂ ಏಳುತ್ತಾ, ಬೀಳುತ್ತಾ, ತೆವಳುತ್ತಾ ಮೈಸೂರು ಚಲೋ ಮುಗಿದಿದೆ. ಆರ್‌ ಅಶೋಕ್‌ ಸರ್ಕಾರವನ್ನು ಬೀಳಿಸಿಯೇ ಸಿದ್ಧ ಎಂದು ಹೊರಟಿದ್ದರು. ತಮ್ಮ ಯಾತ್ರೆ ಮುಗಿಯುವ ಹೊತ್ತಿಗೆ ಸಿದ್ಧರಾಮಯ್ಯ ನಿವೃತ್ತಿ ಹೊಂದಿ ಮನೆಯಲ್ಲಿ ಕಾಫಿ ಕುಡಿಯುತ್ತಾ ಕುಳಿತಿರುತ್ತಾರೆ ಎನ್ನುವ ರೇಂಜಿಗೆ ಬಿಲ್ಡಪ್‌ ಕೊಟ್ಟಿದ್ದರು.

ಆದರೆ ಇಡೀ ಯಾತ್ರೆಯ ಉದ್ದಕ್ಕೂ ನಡೆದಿದ್ದೇ ಬೇರೆ. ಮೊದಲು ಪ್ರೀತಂ ಗೌಡ ಇರುವ ಯಾತ್ರೆಗೆ ತಾನು ಬರುವುದಿಲ್ಲ ಎಂದಿದ್ದ ಕುಮಾರಸ್ವಾಮಿ ನಂತರ ಯಾತ್ರೆಗೆ ಬರಲು ಒಪ್ಪಿದ್ದರು. ಕೊನೆಗೂ ಈಗ ಈ ಯಾತ್ರೆಯಿಂದ ಯಾರಿಗೆ ಬೆನಿಫಿಟ್‌ ಆಯಿತು ಎಂದು ನೋಡಿದರೆ ಯಾರಿಗೂ ಇಲ್ಲ ಎಂದೇ ಹೇಳಬೇಕಾಗುತ್ತದೆ.

ಮಂಡ್ಯದಲ್ಲಿ ಪ್ರೀತಮ್‌ ಗೌಡ ವರ್ಸಸ್‌ ಕುಮಾರಸ್ವಾಮಿ

ಬೆಂಗಳೂರಿನಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಟಿದ್ದ ದೋಸ್ತಿಗಳು ಮಂಡ್ಯ ತಲುಪುವ ಹೊತ್ತಿಗಾಗಲೇ ಪರಸ್ಪರ ಕೈ ಮಿಲಾಯಿಸತೊಡಗಿದ್ದರು. ʼಗೌಡರ ಕುಟುಂಬಕ್ಕೆ ವಿಷವಿಕ್ಕಿದ ಖ್ಯಾತಿಯʼ ಪ್ರೀತಮ್‌ ಮಂಡ್ಯಕ್ಕೆ ಕಾಲಿಡುತ್ತಲೇ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಹಾವು ಮುಂಗುಸಿಯಂತೆ ಕಿತ್ತಾಡತೊಡಗಿದರು.

ಒಂದು ಗುಂಪು ಗೌಡರ ಗೌಡ ಪ್ರೀತಂ ಗೌಡ ಎಂದು ಕೂಗಿದರೆ ಇನ್ನೊಂದು ಗುಂಪು ಗೌಡರ ಗೌಡ ದೇವೇಗೌಡ ಎಂದು ಅರಚಿತು. ಕೊನೆಗೂ ಗೌಡರ ಗೌಡ ಯಾರು ಎನ್ನುವುದು ತೀರ್ಮಾನ ಆಗದೆಯೇ ಜಗಳ ಅರ್ಧದಲ್ಲೇ ನಿಂತಿತು.

ಮರುದಿನವೂ ನಿಖಿಲ್‌ ಕುಮಾರಸ್ವಾಮಿ ನೇತ್ರತ್ವದಲ್ಲಿ ಒಂದು ತಂಡ ಮೈಸೂರಿನತ್ತ ಹೊರಟರೆ ಇನ್ನೊಂದು ತಂಡ ಬಿ ವೈ ವಿಜಯೇಂದ್ರ ಅವರ ನೇತ್ರತ್ವದಲ್ಲಿ ಹೊರಟಿತ್ತು. ಸರ್ಕಾರದ ವಿರುದ್ಧ ಘೋಷಣೆ ಕೂಗಬೇಕಿದ್ದ ಇತ್ತಂಡಗಳು ತಮ್ಮ ನಾಯಕನ ಪರ ಘೋಷಣೆ ಕೂಗುತ್ತಾ ಮೇಲಾಟ ನಡೆಸಿದರು.

ಅಶೋಕ್‌ ಎನ್ನುವ ಅಸಹಾಯಕ ನಾಯಕ

ಈ ಯಾತ್ರೆಗೆ ಆರಂಭಕ್ಕೂ ಮೊದಲೇ ಜಾರಕಿಹೊಳಿ, ಲಿಂಬಾವಳಿ ಮತ್ತು ಬಿಜೆಪಿಯೊಳಗಿನ ವಿರೋಧಪಕ್ಷದ ನಾಯಕ ಯತ್ನಾಳ್‌ ಇಂತಹದ್ದೊಂದು ಯಾತ್ರೆ ಆಗತ್ಯವೇ ಇಲ್ಲ. ಇವರ ಯಾತ್ರೆಯಲ್ಲಿ ನಾವು ಭಾಗವಹಿಸುವುದಿಲ್ಲ. ನಮ್ಮದೇ ಬೇರೆ ಯಾತ್ರೆ ಮಾಡುತ್ತೇವೆ ಎಂದು ಘೋಷಿಸಿದ್ದರು.

ವಿಜಯೇಂದ್ರ ಅಧ್ಯಕ್ಷರಾದ ದಿನದಿಂದಲೂ ಭಿನ್ನರಾಗ ಹಾಡುತ್ತಿರುವ ಒಂದಷ್ಟು ಬಿಜೆಪಿ ನಾಯಕರು ಈ ಯಾತ್ರೆ ಸಕ್ಸಸ್‌ ಆಗದಿರಲಿ ಎಂದೇ ಹಾರೈಸಿದ್ದರು ಮತ್ತು ಬಹುತೇಕ ಅವರ ಆಸೆ ಈಡೇರಿದೆ.

ಯಾತ್ರೆಯುದ್ದಕ್ಕೂ ಅಶೋಕ್‌ ಅವರ ಭಾಷಣಗಳಲ್ಲಿ ಸರ್ಕಾರದ ವಿರುದ್ಧದ ದಿಟ್ಟತನಕ್ಕಿಂತಲೂ ಹತಾಶೆಯೇ ಎದ್ದು ಕಾಣುತ್ತಿತ್ತು, ಅವರು ಸರ್ಕಾರವನ್ನು ಗುರಿ ಮಾಡುವಲ್ಲಿ ಪದೇಪದೇ ಸೋಲುತ್ತಿದ್ದರು.

ಬಿಜಪಿ-ಜೆಡಿಎಸ್‌ ಯಾತ್ರೆ ಯಾರಿಗೆ ಅನುಕೂಲ ಮಾಡಿಕೊಟ್ಟಿತು?

ಈ ಯಾತ್ರೆ ಆರಂಭಗೊಂಡಿದ್ದು ಸಿದ್ಧರಾಮಯ್ಯ ಅವರನ್ನು ವಿರೋಧಿಸಿ. ಆದರೆ ಈ ಯಾತ್ರೆಯುದ್ದಕ್ಕೂ ಹೆಚ್ಚು ದಾಳಿಗೆ ಒಳಗಾಗಿದ್ದು ಡಿಕೆ ಶಿವಕುಮಾರ್.‌ ಒಕ್ಕಲಿಗ ಪ್ರಾಬಲ್ಯದ ಪ್ರಾಂತ್ಯದಲ್ಲಿ ಕುಮಾರಸ್ವಾಮಿ ತನ್ನನ್ನು ತಾನು ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಳ್ಳಲು ಯಾತ್ರೆಯ ಉದ್ದೇಶವಾಗಿದ್ದ ಮುಡಾ ಸೈಟು ವಿವಾದವನ್ನು ಒಂದೆರಡು ದಿನದಲ್ಲೇ ಮರೆತು ಪೂರ್ತಿಯಾಗಿ ತಮ್ಮ ಮಾತಿನ ಬಾಣಗಳನ್ನು ಡಿಕೆಯವರ ಕಡೆಗೆ ಎಸೆಯತೊಡಗಿದರು. ಇದು ಒಂದು ಹಂತದಲ್ಲಿ ಏಕವಚನ ಪ್ರಯೋಗಕ್ಕೂ ಇಳಿಯಿತು.

ಈ ನಡುವೆ ಜೆಡಿಎಸ್‌ ಕಾರ್ಯಕರ್ತರು ಸಿನೆಮಾ ಹಾಗೂ ರಾಜಕೀಯ ಎರಡರಲ್ಲೂ ಆರಕ್ಕೇರದ ಮೂರಕ್ಕಿಳಿಯದ ತಮ್ಮ ನಾಯಕ ನಿಖಿಲ್‌ ಕುಮಾರಸ್ವಾಮಿಯವರನ್ನು ಎಸ್ಟಾಬ್ಲಿಷ್‌ ಮಾಡುವ ಪ್ರಯತ್ನವನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಮೈಸೂರು ಚಲೋ ಕ್ರೆಡಿಟ್ಟನ್ನು ನಿಖಿಲ್‌ಗೆ ಪೂರ್ತಿಯಾಗಿ ಕೊಡಿಸಲು ಅವರು ತಮ್ಮಿಂದ ಸಾಧ್ಯವಿರುವುದನ್ನೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ.

ಬಹುಶಃ ರೇವಣ್ಣನ ಇಡೀ ಕುಟುಂಬ ಜೈಲಿನಲ್ಲಿರುವುದರಿಂದ ಇದೇ ಸರಿಯಾದ ಸಮಯ ಎಂದು ಅವರಿಗೂ ಎನ್ನಿಸಿರಬಹುದು. ನಿಖಿಲ್‌ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇದೆಯಾದರೂ ಅಲ್ಲಿ ಸಿಪಿ ಯೋಗೇಶ್ವರ್‌ ದೋಸ್ತಿ ಪಕ್ಷಗಳನ್ನು ಮಗ್ಗಲ ಮುಳ್ಳಿನಂತೆ ಕಾಡುತ್ತಿದ್ದಾರೆ.

ಕಾಂಗ್ರೆಸ್‌ ಜನಾಂದೋಲನ ಯಾತ್ರೆ

ಈ ಯಾತ್ರೆಯ ಗ್ಯಾಪಿನಲ್ಲಿ ಕಾಂಗ್ರೆಸ್‌ ತನ್ನ ಜನಾಂದೋಲನ ಯಾತ್ರೆ ಮಾಡಿ ತನ್ನ ಶಕ್ತಿ ಪ್ರದರ್ಶಿಸಿತು. ಆರಂಭದಲ್ಲಿ ಯತ್ನಾಳ್‌ ಮೈಸೂರು ಚಲೋ ಮಾಡಿಸುತ್ತಿರುವುದೇ ಡಿಕೆ ಎಂದು ಘೋಷಿಸಿದ್ದರು. ಆದರೆ ಮೈಸೂರಿನಲ್ಲಿ ಡಿಕೆ ಶಿವಕುಮಾರ್‌ ಸಿದ್ಧರಾಮಯ್ಯನವರ ಬೆಂಬಲಕ್ಕೆ ನಿಂತು ಮಾತನಾಡಿದ್ದು ನೋಡಿದರೆ ಬಿಜೆಪಿಯವರ ಸ್ಟ್ರಾಟಜಿ ಪೂರ್ತಿ ವಿಫಲವಾದಂತಿದೆ. ಅವರು ಕಾಂಗ್ರೆಸ್‌ ಒಳಗೆ ಭಿನ್ನಮತವಿದೆ ಎಂದು ತೋರಿಸಲು ಹೊರಟಿದ್ದರು ಆದರೆ ಇಡೀ ಯಾತ್ರೆ ಕಾಂಗ್ರೆಸ್‌ನ ಒಗ್ಗಟ್ಟು ಪ್ರದರ್ಶಿಸಿದರೆ ದೋಸ್ತಿಯೊಳಗಿನ ಬೂದಿ ಮುಚ್ಚಿದ ಕೆಂಡದಂತಹ ಭಿನ್ನಮತಕ್ಕೆ ಒಂದಷ್ಟು ಗಾಳಿ ಹಾಯಿಸಿ ಕಿಡಿ ಎಬ್ಬಿಸಿದಂತಿದೆ. ಮುಂದೆ ಈ ಕಿಡಿ ಬೆಂಕಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ.

Related Articles

ಇತ್ತೀಚಿನ ಸುದ್ದಿಗಳು