ನವದೆಹಲಿ: ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಈಗ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಮೇನಕಾ ಗಾಂಧಿಯವರು ಇಸ್ಕಾನ್ ವಿರುದ್ಧ ಕಟುಕರಿಗೆ ದನಗಳನ್ನು ಮಾರುತ್ತಿರುವ ಆರೋಪವನ್ನು ಹೊರಿಸಿದ ವಿಡಿಯೋ ಒಂದು ಮುನ್ನೆಲೆಗೆ ಬಂದು ಚರ್ಚೆಗೀಡಾಗುತ್ತಿದೆ.
ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮೇನಕಾ ಗಾಂಧಿ, “ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಯಾರಾದರೂ ಇದ್ದರೆ ಅದು ಇಸ್ಕಾನ್. ಇವರಿಗೆ ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ.
https://x.com/manishbpl1/status/1706719779149824472?s=20
ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದೇ ಇದರ ಸಾರಾಂಶ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.
ಆದರೆ, ಇಸ್ಕಾನ್ ಸಂಸ್ಥೆಯವರು ಕಟುಕರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವೇ ಇಲ್ಲವೇನೋ?! ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು?” ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಮೇನಕಾ ಗಾಂಧಿ ಯಾವ ಸಂದರ್ಭದಲ್ಲಿ ಈ ಮಾತುಗಳನ್ನಾಡಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರು ಇಸ್ಕಾನ್, ಆರೋಪವು ಪೂರ್ತಿಯಾಗಿ ನಿರಾಧಾರವಾಗಿದ್ದು, ಇದರಲ್ಲಿ ಯಾವುದೇ ಸತ್ಯವಿಲ್ಲವೆಂದು ಹೇಳಿಕೊಂಡಿದೆ.