ಕೋಲ್ಕತಾ: ಬಂಗಾಳದಲ್ಲಿ ಬಿಜೆಪಿ ಸರ್ಕಾರವು ಇಸ್ಕಾನ್ ವಿಷಯದಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ, ಇಸ್ಕಾನ್ ತನ್ನ ಉಪಾಧ್ಯಕ್ಷರಾದ ರಾಧಾರಮಣ್ ದಾಸ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.
ಕೋಲ್ಕತಾ ಮುನ್ಸಿಪಲ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಸರ್ಕಾರವು ಇಸ್ಕಾನ್‌ಗೆ ವಹಿಸಿತ್ತು. ಆಧ್ಯಾತ್ಮಿಕ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಇಸ್ಕಾನ್, ಮಧ್ಯಾಹ್ನದ ಬಿಸಿಯೂಟದ ಮೆನುವಿನಿಂದ ಮೊಟ್ಟೆಯನ್ನು ಕೈಬಿಟ್ಟಿತ್ತು.
ಉಪಾಧ್ಯಕ್ಷ ರಾಧಾರಮಣ್ ದಾಸ್ ಈ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದರು. ಇದು ವಿರೋಧ ಪಕ್ಷಗಳು ಮತ್ತು ನೆಟ್ಟಿಗರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಲು ಕಾರಣವಾಗಿತ್ತು. ದೇಶಾದ್ಯಂತ ಈ ವಿಷಯದ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.
