ಇಸ್ರೇಲಿ ಸೇನೆಯು ನಿವಾಸಿಗಳಿಗೆ ಲೆಬನಾನ್‌ನ ರಾಜಧಾನಿಯ ಒಂದು ಭಾಗವನ್ನು ತೊರೆಯುವಂತೆ ಆದೇಶಿಸಿದೆ. ಆ ಆದೇಶದ ಒಂದು ಗಂಟೆಯೊಳಗೆ, ಇಸ್ರೇಲಿ ಸೇನೆಯು ದಕ್ಷಿಣ ಬೈರುತ್ ಮೇಲೆ ದಾಳಿ ನಡೆಸಿತು.
Israel Air strikes| ಹಿಜ್ಬುಲ್ಲಾವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕಳೆದ ಕೆಲವು ದಿನಗಳಿಂದ ಇಸ್ರೇಲ್ ನಡೆಸಿದ ಈ ದಾಳಿಗಳಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು ದಕ್ಷಿಣ ಲೆಬನಾನ್ ನಲ್ಲಿ ಮುನ್ಸಿಪಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಮೇಯರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಇಸ್ರೇಲಿ ಮಿಲಿಟರಿ ವಕ್ತಾರ ಅವಿಚಾರು ಆಡ್ರೇಯ ಅವರು ದಕ್ಷಿಣ ಉಪನಗರವಾದ ಹರೆಟ್ ಹ್ರೀಕ್‌ನಲ್ಲಿರುವ ನಿವಾಸಿಗಳಿಗೆ ಪ್ರದೇಶವನ್ನು ಸ್ಥಳಾಂತರಿಸುವಂತೆ ಆದೇಶಿಸಿದರು. ಬಳಿಕ ಇಸ್ರೇಲ್ ಸೇನೆ ಅಲ್ಲಿನ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಆ ಕಟ್ಟಡಗಳನ್ನು ಕಪ್ಪು ಹೊಗೆ ಆವರಿಸಿದೆ. ಈ ಘಟನೆಯ ಕೆಲವೇ ಕ್ಷಣಗಳಲ್ಲಿ, ಇಸ್ರೇಲ್ ದಕ್ಷಿಣ ಬೈರುತ್‌ನಲ್ಲಿ ಎರಡನೇ ದಾಳಿಯನ್ನು ಪ್ರಾರಂಭಿಸಿತು.
ದಾಳಿಗಳನ್ನು ನಡೆಸುವ ಮೊದಲು, ‘ನೀವು ಹಿಜ್ಬುಲ್ಲಾ ಗುಂಪು ಮತ್ತು ಅವರ ಸೌಲಭ್ಯಗಳಿಗೆ ಹತ್ತಿರವಾಗಿದ್ದೀರಿ. ಇಸ್ರೇಲ್‌ನ ಸೇನೆಯು ಹಿಜ್ಬುಲ್ಲಾದ ಕಾರ್ಯ ವಿಧಾನವನ್ನು ವಿರೋಧಿಸುತ್ತದೆ. ಅದಕ್ಕಾಗಿಯೇ ನಾವು ನಿಮ್ಮ ಮೇಲೆ ದಾಳಿ ಮಾಡುತ್ತಿದ್ದೇವೆ (ಹರೆತ್ ಹ್ರೀಕ್ ನಿವಾಸಿಗಳು)’ ಎಂದು ಇಸ್ರೇಲ್ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲಿ ಸೇನೆಯು ಕಳೆದ ಕೆಲವು ವಾರಗಳಿಂದ ದಕ್ಷಿಣ ಬೈರುತ್ ಮತ್ತು ಲೆಬನಾನ್‌ನಾದ್ಯಂತ ಬಾಂಬ್ ದಾಳಿ ನಡೆಸುತ್ತಿದೆ.
ಲೆಬನಾನಿನ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ತಿಂಗಳು ಇಸ್ರೇಲಿ ಸೇನೆಯು ದಾಳಿಯನ್ನು ತೀವ್ರಗೊಳಿಸಿದ ನಂತರ ಲೆಬನಾನ್‌ನಲ್ಲಿ ಕನಿಷ್ಠ 1,356 ಜನರು ಸಾವನ್ನಪ್ಪಿದ್ದಾರೆ. ಆದರೆ ಅನಧಿಕೃತ ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು.