ಪಶ್ಚಿಮ ಏಷಿಯಾದಲ್ಲಿನ ಸಂಘರ್ಷವು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ನಿನ್ನೆ ಯುಎಇ, ಕುವೈತ್, ಬಹ್ರೇನ್, ಖತಾರ್, ಸೌದಿ ಅರೇಬಿಯಾ ಮತ್ತು ಜೋರ್ಡಾನ್‌ನಂತಹ ಗಲ್ಫ್ ರಾಷ್ಟ್ರಗಳಿಗೆ ಹರಡಿದ್ದ ಯುದ್ಧವು, ಈಗ ಏಷ್ಯಾ-ಯುರೋಪ್ ಗಡಿಯಲ್ಲಿರುವ ಅಜರ್ಬೈಜಾನ್ ದೇಶಕ್ಕೂ ವ್ಯಾಪಿಸಿದೆ. ಅಜರ್ಬೈಜಾನ್‌ನ ನಖಿಚೆವಾನ್ ವಿಮಾನ ನಿಲ್ದಾಣ ಮತ್ತು ಶಾಲಾ ಆವರಣದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ದಾಳಿಯನ್ನು ಅಜರ್ಬೈಜಾನ್ ತೀವ್ರವಾಗಿ ಖಂಡಿಸಿದ್ದು, ತನ್ನ ಸಾರ್ವಭೌಮತ್ವದ ರಕ್ಷಣೆಗಾಗಿ ಇರಾನ್‌ಗೆ ಶೀಘ್ರದಲ್ಲೇ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ. ಮತ್ತೊಂದೆಡೆ, ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ.
ಇರಾನ್‌ನ ಪ್ರತೀಕಾರದ ಜ್ವಾಲೆ
ತನ್ನ ಯುದ್ಧನೌಕೆ ‘ಐರಿಸ್ ದೇನಾ’ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಕಟುವಾಗಿ ಖಂಡಿಸಿದ್ದಾರೆ. ಈ ಹೇಳಿಕೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಪರ್ಷಿಯನ್ ಗಲ್ಫ್‌ನಲ್ಲಿದ್ದ ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದ್ದು, ನೌಕೆಯಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಕುವೈತ್ ಸಮೀಪ ಚಲಿಸುತ್ತಿದ್ದ ಮತ್ತೊಂದು ತೈಲ ಟ್ಯಾಂಕರ್ ಮೇಲೆಯೂ ಇರಾನ್ ದಾಳಿ ನಡೆಸಿದ್ದು, ಇಂಧನ ಸಮುದ್ರಕ್ಕೆ ಸೋರಿಕೆಯಾಗಿದೆ. ಇದಲ್ಲದೆ, ದೋಹಾದ ಹಲವು ಭಾಗಗಳ ಮೇಲೆ ಇರಾನ್ ಡ್ರೋನ್ ದಾಳಿ ಮಾಡಿದೆ ಎಂಬ ಮಾಹಿತಿಯಿದೆ. ಶ್ರೀಲಂಕಾ ಸಚಿವ ನಲಿಂದ ಜಯತಿಸ್ಸಾ ಪ್ರಕಾರ, ಇರಾನ್‌ನ ಮತ್ತೊಂದು ನೌಕೆಯು ಶ್ರೀಲಂಕಾ ಜಲಗಡಿಯತ್ತ ಬರುತ್ತಿದ್ದು, ಅದರ ಮೇಲೆ ಅಮೆರಿಕ ದಾಳಿ ಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಆರು ದಿನಗಳಲ್ಲಿ 1,230 ಸಾವು
ಅಮೆರಿಕವು ‘ಆಪರೇಷನ್ ಎಪಿಕ್ ಫ್ಯೂರಿ’ ಭಾಗವಾಗಿ ಕಳೆದ 100 ಗಂಟೆಗಳಲ್ಲಿ ಇರಾನ್ ಮೇಲೆ 2,000 ದಾಳಿಗಳನ್ನು ಮಾಡಿದ್ದು, 20 ನೌಕೆಗಳನ್ನು ಮುಳುಗಿಸಿದೆ ಎಂದು ಘೋಷಿಸಿದೆ. ಉದ್ವಿಗ್ನತೆ ಆರಂಭವಾದಾಗಿನಿಂದ ಅಮೆರಿಕ-ಇಸ್ರೇಲ್ ದಾಳಿಯಿಂದ ಇರಾನ್‌ನಲ್ಲಿ 1,260 ನಾಗರಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಏಜೆನ್ಸಿ ತಿಳಿಸಿದೆ. ಇಸ್ರೇಲ್ ಮಿಲಿಟರಿ ವರದಿಯ ಪ್ರಕಾರ, ಬುಧವಾರದವರೆಗೆ ಇರಾನ್ ಮೇಲೆ 5,000 ಕ್ಕೂ ಹೆಚ್ಚು ಬಾಂಬ್‌ಗಳನ್ನು ಹಾಕಲಾಗಿದ್ದು, ಸಾವಿರಾರು ಇರಾನ್ ಸೈನಿಕರು ಸಾವನ್ನಪ್ಪಿದ್ದಾರೆ. ಉತ್ತರ ಇರಾಕ್‌ನ ಕುರ್ದಿಶ್ ಗುಂಪು ಅಮೆರಿಕದ ಬೆಂಬಲದೊಂದಿಗೆ ಇರಾನ್ ವಿರುದ್ಧ ಯುದ್ಧಕ್ಕೆ ಸಿದ್ಧವಾಗಿದೆ.
ಅಣ್ವಸ್ತ್ರ ಕಾರ್ಯಕ್ರಮ ಸ್ಥಗಿತದ ಬಗ್ಗೆ ಸ್ಪಷ್ಟನೆ
ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎಂಬ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಇದು ಹಳೆಯ ವೀಡಿಯೊ ಎಂದು ಇರಾನ್‌ನ ಅಧಿಕೃತ ಸುದ್ಧಿ ಸಂಸ್ಥೆ ಐಆರ್‌ಎನ್‌ಎ (IRNA) ಸ್ಪಷ್ಟಪಡಿಸಿದೆ. ಅಮೆರಿಕದ ಸೆನೆಟ್‌ನಲ್ಲಿ ಟ್ರಂಪ್ ಅವರ ಮಿಲಿಟರಿ ಕ್ರಮಕ್ಕೆ ಬೆಂಬಲ ದೊರೆತಿದ್ದು, 53 ಸದಸ್ಯರು ಪರವಾಗಿ ಮತ ಚಲಾಯಿಸಿದ್ದಾರೆ. ಇದೇ ವೇಳೆ ಅಮೆರಿಕವು ‘ಮಿನಿಟ್‌ಮ್ಯಾನ್-3’ ಎಂಬ ಶಕ್ತಿಶಾಲಿ ಅಣ್ವಸ್ತ್ರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಇಸ್ರೇಲ್ ಯತ್ನಿಸಿದರೆ, ಅಲ್ಲಿನ ‘ಡಿಮೋನಾ’ ಅಣು ಸ್ಥಾವರವನ್ನು ಸ್ಫೋಟಿಸುವುದಾಗಿ ಇರಾನ್ ಎಚ್ಚರಿಸಿದೆ.
ಭಾರತದ ಸಂತಾಪ ಮತ್ತು ತೈಲ ಆತಂಕ
ಖಮೇನಿ ನಿಧನಕ್ಕೆ ಸಂತಾಪ ಸೂಚಿಸಲು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದೆಹಲಿಯ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಯುದ್ಧಕ್ಕೆ ಅಂತ್ಯ ಹಾಡಲು ಕರೆ ನೀಡಿದ್ದಾರೆ. ಇರಾನ್ ಮೇಲೆ ದಾಳಿ ಮಾಡಲು ಅಮೆರಿಕವು ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ಭಾರತ ಸರ್ಕಾರವು “ಸಂಪೂರ್ಣ ಸುಳ್ಳು ಮತ್ತು ನಕಲಿ” ಎಂದು ತಳ್ಳಿಹಾಕಿದೆ.
ಇನ್ನು ತೈಲ ಪೂರೈಕೆಯ ವಿಷಯದಲ್ಲಿ ಭಾರತಕ್ಕೆ ತುಸು ಸಮಾಧಾನಕರ ಸುದ್ದಿ ಸಿಕ್ಕಿದೆ. ಹೋರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಘೋಷಿಸಿದ್ದರೂ, ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ದೇಶಗಳ ನೌಕೆಗಳಿಗೆ ಮಾತ್ರ ನಿರ್ಬಂಧವಿರುತ್ತದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಭಾರತದಲ್ಲಿ ಪ್ರಸ್ತುತ 50 ದಿನಗಳಿಗೆ ಸಾಕಾಗುವಷ್ಟು ತೈಲ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಆದರೂ, ಜಲಸಂಧಿಯಲ್ಲಿ ಭಾರತದ ಧ್ವಜವಿರುವ 37 ನೌಕೆಗಳು ಸಿಲುಕಿಕೊಂಡಿವೆ.
