ಗಾಜಾ ಸಿಟಿ: ಗಾಜಾ ನಗರದ ವಿವಿಧ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಗುರುವಾರ ಮುಂಜಾನೆ ನಡೆಸಿದ ನಾಲ್ಕು ಪ್ರತ್ಯೇಕ ದಾಳಿಗಳಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ಹಾಗೂ ಶಿಫಾ ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ಗಾಜಾದ ಅಲ್-ಮುಖಬರತ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಒಂದೇ ಕುಟುಂಬದ ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಾಜಾ ನಗರದ ಪಶ್ಚಿಮದಲ್ಲಿರುವ ಟೆಲ್ ಅಲ್-ಹವಾ ಎಂಬಲ್ಲಿ ನಡೆದ ದಾಳಿಗೆ ಅಬು ಮರಾಕ್ ಕುಟುಂಬದ ದಂಪತಿಗಳು ಬಲಿಯಾಗಿದ್ದಾರೆ. ಅದೇ ರೀತಿ ಉತ್ತರ ಗಾಜಾದ ಶೇಕ್ ರದ್ವಾನ್ ಪ್ರದೇಶದ ವಸತಿ ಸಂಕೀರ್ಣದ ಮೇಲೆ ನಡೆದ ದಾಳಿಯಲ್ಲಿ ಮತ್ತೊಂದು ದಂಪತಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಭಾಗದಲ್ಲಿರುವ ಅಲ್-ಷಾಟಿ ನಿರಾಶ್ರಿತರ ಶಿಬಿರದ (Refugee Camp) ಮೇಲೆ ನಡೆದ ನಾಲ್ಕನೇ ದಾಳಿಯಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದು, ಹಲವರು ಗಾಯಗೊಂಡಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ದಾಳಿಗಳಿಂದಾಗಿ ಗಾಜಾದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಭಾರಿ ಹಾನಿಯಾಗಿದ್ದು, ಸ್ಥಳೀಯರಲ್ಲಿ ಭೀತಿ ಮತ್ತಷ್ಟು ಹೆಚ್ಚಾಗಿದೆ.
