Home ರಾಜಕೀಯ 12 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆ ಧ್ವಂಸ: ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಪಿಎಂ ಮೋದಿ ವಿರುದ್ಧ...

12 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆ ಧ್ವಂಸ: ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಪಿಎಂ ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

0

ದೆಹಲಿ: ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಇದರಿಂದಾಗಿ ದೇಶದ ಒಂದು ಇಡೀ ತಲೆಮಾರಿನ ಯುವಕರು ಭಾರಿ ಬೆಲೆ ತೆರಬೇಕಾಗಿ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಟ್-ಯುಜಿ (NEET-UG) ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿಯಿಂದ ಮನನೊಂದು ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಆಕಾಂಕ್ಷಾ ಚತುರ್ವೇದಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಆಕಾಂಕ್ಷಾ ಸಾವಿನ ಕುರಿತು ಎಕ್ಸ್ (X) ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ಡಾಕ್ಟರ್ ಆಗಿ ದೇಶದ ಸೇವೆ ಮಾಡುವ ಕನಸು ಕಂಡಿದ್ದ ಆಕಾಂಕ್ಷಾಳ ತಂದೆ ಒಬ್ಬ ಬಡ ರೈತ. ಮಗಳ ಕೋಚಿಂಗ್‌ಗಾಗಿ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ₹3 ಲಕ್ಷ ಸಾಲ ಮಾಡಿದ್ದರು. ಅಷ್ಟೇ ಅಲ್ಲದೇ, ಮಗಳ ವಿದ್ಯಾಭ್ಯಾಸಕ್ಕಾಗಿ ನಾಗ್ಪುರದಲ್ಲಿ ಸ್ವತಃ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದರು. ಒಬ್ಬ ತಂದೆ ತನ್ನ ಮಗಳಿಗಾಗಿ ಸಾಧ್ಯವಿರುವುದೆಲ್ಲವನ್ನೂ ಮಾಡಿದ್ದರು. ಆದರೆ ನೀಟ್ ಪೇಪರ್ ಲೀಕ್ ಆಗಿ ಪರೀಕ್ಷೆ ರದ್ದಾದ ಕಾರಣ ತೀವ್ರ ನಿರಾಸೆಗೊಂಡ ಆಕಾಂಕ್ಷಾ ನಮ್ಮನ್ನು ಶಾಶ್ವತವಾಗಿ ಅಗಲಿದ್ದಾಳೆ. ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ಮತ್ತು ಮುರಿದುಬಿದ್ದ ವ್ಯವಸ್ಥೆಯ ಕೊಲೆ” ಎಂದು ರಾಹುಲ್ ಗಾಂಧಿ ದೂರಿದ್ದಾರೆ.

ಇದೇ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧವೂ ಕಿಡಿಕಾರಿದ ಅವರು, “ಇಷ್ಟೆಲ್ಲಾ ಆದರೂ ಧರ್ಮೇಂದ್ರ ಪ್ರಧಾನ್ ಇನ್ನೂ ಶಿಕ್ಷಣ ಸಚಿವರಾಗಿ ಮುಂದುವರಿದಿದ್ದಾರೆ. ಅದೇ ಹಳೆಯ ಸಮಿತಿಗಳು, ಅದೇ ವರ್ಗಾವಣೆಗಳು ಮತ್ತು ಅದೇ ಹಳೆಯ ತನಿಖೆಗಳು ನಡೆಯುತ್ತಿವೆಯೇ ಹೊರತು ಯಾವುದೇ ಸುಧಾರಣೆ ಅಥವಾ ನ್ಯಾಯ ಸಿಗುತ್ತಿಲ್ಲ” ಎಂದು ಟೀಕಿಸಿದ್ದಾರೆ. “ಅಧಿಕಾರ ಎಂಬುದು ಶಾಶ್ವತವಲ್ಲ, ಅದು ಬರುತ್ತದೆ ಮತ್ತು ಹೋಗುತ್ತದೆ. ಆದರೆ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಯುವ ಪೀಳಿಗೆಯ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮೇ 3 ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಸದ್ಯ ಸಿಬಿಐ (CBI) ಈ ಬಗ್ಗೆ ತನಿಖೆ ನಡೆಸುತ್ತಿದೆ. ಜೂನ್ 21 ರಂದು ಮರುಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಘೋಷಿಸಿದೆ.

You cannot copy content of this page

Exit mobile version