ಇಸ್ರೇಲ್ ಮತ್ತು ಹಮಾಸ್ ನಡುವಿನ ಸುದೀರ್ಘ ಯುದ್ಧವು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಇದೀಗ ಎರಡು ಬಣಗಳ ನಡುವೆ ಕದನ ವಿರಾಮದ ಮಾತುಕತೆಗೆ ಹೆಜ್ಜೆ ಇಡಲಾಗುತ್ತಿದೆ.
ಇಸ್ರೇಲ್ ತನ್ನ ಬೇಹುಗಾರಿಕಾ ಮುಖ್ಯಸ್ಥ ಗಾಜಾದಲ್ಲಿ ಕದನ ವಿರಾಮ ಮಾತುಕತೆಯಲ್ಲಿ ಭಾಗವಹಿಸುತ್ತಿರುವುದಾಗಿ ಈಗಾಗಲೇ ಘೋಷಿಸಿದೆ. ಮತ್ತೊಂದೆಡೆ, ಹಮಾಸ್ ಮೂಲಗಳು ಸಹ ಒಪ್ಪಂದಕ್ಕೆ ಬಂದರೆ, ಹೋರಾಟ ನಿಲ್ಲುತ್ತದೆ ಎಂದು ಹೇಳಿವೆ.
ಗಾಜಾ ಕದನ ವಿರಾಮಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಕುರಿತು ದೋಹಾ ಮೂಲದ ಅಧಿಕೃತ ನಿಯೋಗವು ಕೈರೋದಲ್ಲಿ ಈಜಿಪ್ಟ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹಮಾಸ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಹಮಾಸ್ ಹೋರಾಟವನ್ನು ನಿಲ್ಲಿಸಲು ಸಿದ್ಧವಾಗಿದೆ, ಆದರೆ ಇಸ್ರೇಲ್ ಕದನ ವಿರಾಮಕ್ಕೆ ಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಯುದ್ಧದ ಕಾರಣದಿಂದ ಗಾಜಾ ತೊರೆದವರಿಗೆ ಮರಳಿ ಬರಲು ಅವಕಾಶ ನೀಡಬೇಕು. ಖೈದಿಗಳ ವಿನಿಮಯ ಒಪ್ಪಂದಕ್ಕೆ ಒಪ್ಪಿಗೆ ನೀಡುವುದರ ಜೊತೆಗೆ, ಗಾಜಾಕ್ಕೆ ಮಾನವೀಯ ನೆರವನ್ನು ನೀಡುವಲ್ಲಿ ವಿಧಿಸಿರುವ ಅಡ್ಡಿಗಳನ್ನು ತೆಗೆದುಹಾಕಬೇಕು ಎಂದು ಹಿರಿಯ ಹಮಾಸ್ ನಾಯಕ ಹೇಳಿದ್ದಾರೆ.
ಏತನ್ಮಧ್ಯೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕೈರೋ ಸಭೆಯ ನಂತರ, ಪ್ರಮುಖ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಕತಾರ್‌ಗೆ ಪ್ರಯಾಣಿಸಲು ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಿಗೆ ಆದೇಶ ನೀಡಿರುವುದಾಗಿ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ಇತ್ತೀಚೆಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿನ್ವಾರ್ ಸಾವು ಒಪ್ಪಂದಕ್ಕೆ ದಾರಿ ತೆರೆಯಲಿದೆ ಎಂದು ಅಮೆರಿಕ ಹೇಳಿತ್ತು.