ಇಸ್ರೇಲ್-ಲೆಬನಾನ್ ನಡುವೆ ಕದನ ವಿರಾಮ; 10 ಯುದ್ಧಗಳನ್ನು ನಿಲ್ಲಿಸಿದ್ದೇನೆಂದು ಬೀಗಿದ ಟ್ರಂಪ್

ವಾಷಿಂಗ್ಟನ್: ಇಸ್ರೇಲ್ ಮತ್ತು ಲೆಬನಾನ್ ದೇಶಗಳು 10 ದಿನಗಳ ಕಾಲ ಕದನ ವಿರಾಮಕ್ಕೆ (Ceasefire) ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಉಭಯ ದೇಶಗಳ ಗಡಿಯಲ್ಲಿ ಉಂಟಾಗಿದ್ದ ತೀವ್ರ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಇದು ಪ್ರಮುಖ ರಾಜತಾಂತ್ರಿಕ ಯಶಸ್ಸು ಎಂದು ಅವರು ಬಣ್ಣಿಸಿದ್ದಾರೆ.

ಈ ಕುರಿತು ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಆನ್ ಅವರೊಂದಿಗೆ ಅದ್ಭುತ ಮಾತುಕತೆ ನಡೆದಿದೆ. ವಿಶ್ವದಾದ್ಯಂತ 9 ಯುದ್ಧಗಳನ್ನು ಬಗೆಹರಿಸಿದ ಗೌರವ ನನಗಿದೆ, ಇದು 10ನೇಯದ್ದು. ಇದನ್ನೂ ಯಶಸ್ವಿಗೊಳಿಸೋಣ,” ಎಂದು ಹೇಳಿಕೊಂಡಿದ್ದಾರೆ. ಈ ಶಾಂತಿ ಮಾತುಕತೆಯಲ್ಲಿ ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಕೂಡ ಭಾಗವಹಿಸಿದ್ದರು.

ಇರಾನ್‌ಗೆ ಅಮೆರಿಕ ಎಚ್ಚರಿಕೆ: ಇದೇ ವೇಳೆ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಇರಾನ್ ಒಂದು ವೇಳೆ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಅದರ ವಿದ್ಯುತ್ ಮೂಲಸೌಕರ್ಯ, ಇಂಧನ ಕ್ಷೇತ್ರಗಳ ಮೇಲೆ ಬಾಂಬ್ ದಾಳಿ ನಡೆಸಲು ಮತ್ತು ಹೋರ್ಮುಜ್ ಜಲಸಂಧಿಯನ್ನು ದಿಗ್ಬಂಧಿಸಲು ಅಮೆರಿಕ ಸಿದ್ಧವಿದೆ. ನಾವು ನಿಮ್ಮ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದೇವೆ,” ಎಂದು ಅವರು ಗುಡುಗಿದ್ದಾರೆ.

ರಷ್ಯಾ ಮತ್ತು ಇರಾನ್ ತೈಲ ರಫ್ತಿನ ಮೇಲೆ ಮತ್ತೆ ನಿರ್ಬಂಧ: ಇರಾನ್ ಮತ್ತು ರಷ್ಯಾ ದೇಶಗಳಿಗೆ ಆರ್ಥಿಕವಾಗಿ ಮತ್ತಷ್ಟು ಪೆಟ್ಟು ನೀಡಲು ಅಮೆರಿಕ ನಿರ್ಧರಿಸಿದೆ. ಮಾರ್ಚ್ ತಿಂಗಳಲ್ಲಿ ತೈಲ ರಫ್ತಿನ ಮೇಲೆ ನೀಡಲಾಗಿದ್ದ ತಾತ್ಕಾಲಿಕ ವಿನಾಯಿತಿಯನ್ನು ವಿಸ್ತರಿಸದಿರಲು ಅಮೆರಿಕ ತೀರ್ಮಾನಿಸಿದೆ. ಇದರಿಂದಾಗಿ ರಷ್ಯಾ ಮತ್ತು ಇರಾನ್‌ನಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿದ್ದ ಭಾರತದಂತಹ ದೇಶಗಳಿಗೆ ಮುಂದಿನ ದಿನಗಳಲ್ಲಿ ತೈಲ ಆಮದು ದುಬಾರಿಯಾಗುವ ಸಾಧ್ಯತೆಯಿದೆ.

ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸ್ಸೆಂಟ್ ಮಾತನಾಡಿ, ಈ ವಾರಕ್ಕೆ ರಷ್ಯಾ ಮತ್ತು ಇರಾನ್ ತೈಲ ಖರೀದಿಯ ಗಡುವು ಮುಗಿಯಲಿದ್ದು, ನಿರ್ಬಂಧಗಳು ಮತ್ತೆ ಜಾರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ತಂಭನಗೊಂಡಿರುವ 100 ಬಿಲಿಯನ್ ಡಾಲರ್ ಆಸ್ತಿ: ವಿದೇಶಿ ಬ್ಯಾಂಕುಗಳಲ್ಲಿ ಸ್ತಂಭನಗೊಂಡಿರುವ (Frozen) ತನ್ನ 100 ಬಿಲಿಯನ್ ಡಾಲರ್ (ಸುಮಾರು 9.3 ಲಕ್ಷ ಕೋಟಿ ರೂ.) ಆಸ್ತಿಯನ್ನು ಬಿಡುಗಡೆ ಮಾಡಬೇಕೆಂದು ಇರಾನ್ ಒತ್ತಾಯಿಸುತ್ತಿದೆ. ಅಮೆರಿಕದ ನಿರ್ಬಂಧಗಳಿಂದಾಗಿ ಚೀನಾದಲ್ಲಿ 20 ಬಿಲಿಯನ್, ಭಾರತದಲ್ಲಿ 7 ಬಿಲಿಯನ್ ಮತ್ತು ಇರಾಕ್‌ನಲ್ಲಿ 6 ಬಿಲಿಯನ್ ಡಾಲರ್ ಹಣ ಸಿಲುಕಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದು ಇರಾನ್‌ನ ಒಟ್ಟು ಜಿಡಿಪಿಯ ನಾಲ್ಕನೇ ಒಂದು ಭಾಗದಷ್ಟಿದ್ದು, ಈ ಹಣದ ಬಿಡುಗಡೆಯು ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಹಂತದ ಮಾತುಕತೆಯ ಮುಖ್ಯ ವಿಷಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು