ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿರುವ ಅಲ್-ಶಿಫಾ ವೈದ್ಯಕೀಯ ಸಂಕೀರ್ಣದ ಸಮೀಪದ ಮಾಧ್ಯಮಗಳ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಸುದ್ದಿವಾಹಿನಿಯ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ. ಇವರಲ್ಲಿ ಪ್ರಮುಖ ವರದಿಗಾರ ಅನಾಸ್ ಅಲ್-ಶರೀಫ್ ಸೇರಿದ್ದಾರೆ.
ಆಗಸ್ಟ್ 10 ರಂದು ನಡೆದ ಈ ದಾಳಿಯಲ್ಲಿ ಅನಾಸ್ ಅಲ್-ಶರೀಫ್ ಅವರೊಂದಿಗೆ ವರದಿಗಾರ ಮೊಹಮ್ಮದ್ ಖ್ರೈಖ್ ಮತ್ತು ಕ್ಯಾಮರಾಮನ್ಗಳಾದ ಇಬ್ರಾಹಿಂ ಜಾಹೇರ್, ಮೊಹಮ್ಮದ್ ನೌಫಲ್ ಮತ್ತು ಮೋಮೆನ್ ಅಲಿವಾ ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ಸುದ್ದಿವಾಹಿನಿ ದೃಢಪಡಿಸಿದೆ. ಈ ದಾಳಿಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ “ಸ್ಪಷ್ಟ ಮತ್ತು ಪೂರ್ವಯೋಜಿತ ದಾಳಿ” ಎಂದು ಅಲ್ ಜಜೀರಾ ಖಂಡಿಸಿದೆ.
ಈ ದಾಳಿಯ ನಂತರ, ಇಸ್ರೇಲ್ ರಕ್ಷಣಾ ಪಡೆ (IDF) ಅನಾಸ್ ಅಲ್-ಶರೀಫ್ ಅವರನ್ನು ಹಮಾಸ್ ಉಗ್ರಗಾಮಿ ಎಂದು ಕರೆದಿದೆ ಮತ್ತು ಅವರು ಪತ್ರಕರ್ತನ ವೇಷದಲ್ಲಿ ಹಮಾಸ್ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಿದೆ. ಅವರು ಹಮಾಸ್ ತಂಡವೊಂದನ್ನು ಮುನ್ನಡೆಸುತ್ತಿದ್ದರು ಮತ್ತು ಇಸ್ರೇಲ್ ಮೇಲೆ ರಾಕೆಟ್ ದಾಳಿಗಳನ್ನು ಸಂಘಟಿಸುವಲ್ಲಿ ತೊಡಗಿದ್ದರು ಎಂದು ಐಡಿಎಫ್ ಹೇಳಿದೆ. ಈ ಆರೋಪಗಳನ್ನು ಅಲ್ ಜಜೀರಾ ಮತ್ತು ಪತ್ರಕರ್ತರ ಹಕ್ಕುಗಳ ಸಂಸ್ಥೆಗಳು ತಳ್ಳಿಹಾಕಿವೆ. ಇಸ್ರೇಲ್‌ನ ಈ ಹೇಳಿಕೆಗಳು ತಮ್ಮ ಪತ್ರಕರ್ತರ ಮೇಲೆ ದಾಳಿಯನ್ನು ಸಮರ್ಥಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವುದು ಎಂದು ಅಲ್ ಜಜೀರಾ ಹೇಳಿದೆ.
ಪತ್ರಕರ್ತರ ರಕ್ಷಣೆಗಾಗಿರುವ ಸಮಿತಿ (CPJ) ಈ ಘಟನೆಯನ್ನು ಖಂಡಿಸಿದೆ. ಯಾವುದೇ ಸಾಕ್ಷ್ಯ ನೀಡದೆ ಪತ್ರಕರ್ತರನ್ನು ಉಗ್ರಗಾಮಿಗಳು ಎಂದು ಬಣ್ಣಿಸುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಕ್ರಮ ಎಂದು ಸಿಪಿಜೆ ಹೇಳಿದೆ. ಯುದ್ಧ ಪ್ರಾರಂಭವಾದಾಗಿನಿಂದ ಇದುವರೆಗೆ 200ಕ್ಕೂ ಹೆಚ್ಚು ಪತ್ರಕರ್ತರು ಗಾಜಾದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ಹಕ್ಕುಗಳ ಪರ ಕೆಲಸ ಮಾಡುವ ಸಂಸ್ಥೆಗಳು ವರದಿ ಮಾಡಿವೆ. ಈ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಹಾಗೂ ಸಂಘರ್ಷ ವಲಯಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಈ ಸಂಸ್ಥೆಗಳು ಕರೆ ನೀಡಿವೆ.