ಬೆಂಗಳೂರು: ಓಡಲು ದಾರಿ ಹುಡುಕುವ ಇಟೆಲಿಯ ಅಕ್ಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವ್ಯಂಗ್ಯದ ಹೇಳಿಕೆಗೆ ಕೆಪಿಸಿಸಿ ಸಂಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡುವುದರ ಜೊತೆಗೆ ಇದು ಭಾರತ್ ಐಕ್ಯತಾ ಯಾತ್ರೆ ಅಲ್ಲ ಇದು ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಿದ್ದರು.
ಈ ಹಿನ್ನಲೆ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ಬ್ರಿಟಿಷರಿಗೆ ಹೆದರಿ ಕ್ಷಮೆ ಕೇಳಿ ಓಡಿದ್ದು ನಿಮ್ಮವರು, ಚೀನಾ ಅತಿಕ್ರಮಣ ಮಾಡಿದಾಗ ‘ಚೀನಾ’ ಎಂಬ ಹೆಸರನ್ನೂ ಹೇಳದೆ ಓಡಿದವರು ನರೇಂದ್ರ ಮೋದಿ, 8 ವರ್ಷದಿಂದ ಮಾಧ್ಯಮಗಳ ಮೈಕ್ ಮುಂದೆ ಬಾರದೇ ಓಡಿದವರು ಮೋದಿ, ಸುಳ್ಯದಲ್ಲಿ ಅಲ್ಲಾಡುವ ಕಾರ್ ಬಿಟ್ಟು ಓಡಿದ್ದು ನೀವು ನಳಿನ್ ಕುಮಾರ್ ಕಾಟೀಲ್ ಅವರೇ, ಓಡಿಹೋಗುವ ಜಾಯಮಾನ ನಿಮ್ಮದೇ ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಟೀಕಿಸಿದರು.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕವು ಟ್ವೀಟ್ ಮಾಡಿದ್ದು, ಸುಳ್ಯದಲ್ಲಿ ಕಾರು ಅಲ್ಲಾಡಿದಾಗ ಕಾರ್ ಬಿಟ್ಟು ತಪ್ಪಿಸಿಕೊಳ್ಳುವ ದಾರಿ ಹುಡುಕುತ್ತ ಓಡಿದ ನಳಿನ್ ಕುಮಾರ್ ಕಟೀಲ್ ಅವರೇ, ಮಹಿಳೆಯರನ್ನು ಗೌರವಿಸದ ನಿಮ್ಮ ಮಾತು ಮಹಾಭಾರತದ ದುಶ್ಯಾಸನನ ನೆನಪಿಸುತ್ತದೆ. ಹೀಗಾಗಿ ಭಾರತ ಐಕ್ಯತಾ ಯಾತ್ರೆ ಬಿಜೆಪಿಯ ಅಂತ್ಯಕ್ಕೆ ಕಾರಣವಾಗಲಿದೆ ಎಂದು ವ್ಯಂಗ್ಯವಾಡಿದೆ.