ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆಯ ನಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಘಪರಿವಾರದ ಸದಸ್ಯರು ಮುಸ್ಲಿಮರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ಧರು. ಇದೇ ಸಂಧರ್ಭದಲ್ಲಿ ಬಂಟ್ವಾಳ ಸಜಿಪದ ಟೆಂಪೋ ಚಾಲಕ ಉಮ್ಮರ್ ಫಾರೂಕ್ ರವರ ಮೇಲೂ ತಲ್ವಾರು ದಾಳಿಯ ಯತ್ನ ನಡೆದಿತ್ತು. ಈ ಘಟನೆಯ ನಂತರ ಉಮ್ಮರ್ ಫಾರೂಕ್ ಬಂಟ್ವಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧರು. ಈಗ ದೂರುದಾರನನ್ನೇ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಬಂಟ್ವಾಳದ ಮುಸ್ಲಿಂ ಸಮುದಾಯದ ಖಂಡನೆ ವ್ಯಕ್ತಪಡಿಸಿದೆ.
ಕೇಸಿನ ಸಂಬಂಧ ಪದೇ ಪದೇ ಪೋಲಿಸ್ ಠಾಣೆಗೆ ಬರುವಂತೆ ಪೋಲಿಸರಿಂದ ಕರೆ ಬರುತ್ತಿದ್ದು ಫಾರೂಕ್ ರವರು ಪೋಲಿಸರ ಎಲ್ಲಾ ತನಿಖೆಗೆ ಪೂರಕವಾಗಿಯೇ ಸ್ಪಂಧಿಸಿದ್ಧರು. ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸಲು ವಿಫಲರಾದಾಗ ಬಿ ರಿಪೋರ್ಟ್ ಹಾಕಿ ಈ ಕೇಸನ್ನು ಇಲ್ಲಿಗೆ ಮುಗಿಸಿದರೆ ದೂರುದಾರರಾದ ನಿಮಗೂ, ಪೋಲಿಸರಿಗೂ ನೆಮ್ಮದಿ ಸಿಗುತ್ತದೆ ಎಂದು ಫಾರೂಕ್ ರವರನ್ನು ಪೋಲಿಸರು ಕೇಸು ಹಿಂಪಡೆಯುವಂತೆ ಮನವೊಲಿಸಿದ್ಧರು. ಈ ದೂರಿನಿಂದ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿ ಹೋಗಿದ್ದ ಫಾರೂಕ್ ರವರು ಪೋಲಿಸರು ಹೇಳಿಕೊಟ್ಟಂತೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು.
ಇವೆಲ್ಲವೂ ಮುಗಿದ ಬಳಿಕ ಉಮ್ಮರ್ ಫಾರೂಕ್ ರವರಿಗೆ ಕರೆ ಮಾಡಿದ ಪೋಲಿಸರು ಸ್ವಲ್ಪ ಮಾತನಾಡಲಿದೆ ಎಂದು ಠಾಣೆಗೆ ಕರೆಸಿ ಸುಳ್ಳು ಕೇಸು ಹಾಕಿ ಬಂಧಿಸಿದ್ಧಾರೆ.
ಪೋಲಿಸರೊಂದಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ದೂರುದಾರರ ವಿರುದ್ದವೇ ಸುಳ್ಳು ಕೇಸು ದಾಖಲಿಸಿ ಬಂಧಿಸಿರುವ ಬಂಟ್ವಾಳ ಪೋಲಿಸರ ಈ ಅಮಾನವೀಯ ನಡೆಯನ್ನು ಮುಸ್ಲಿಂ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳಿಂದ ಜನಸಾಮಾನ್ಯರಿಗೆ ಪೋಲಿಸ್ ಇಲಾಖೆಯ ಮೇಲಿನ ನಂಬಿಕೆ ಕಡಿಮೆಯಾಗಿ ಮುಂದೆ ಅಹಿತಕರ ಘಟನೆ ನಡೆದಾಗ ದೂರು ನೀಡಲು ಯಾರೂ ಮುಂದೆ ಬರದಂತಹ ಪರಿಸ್ಥಿತಿ ಉದ್ಭವಿಸಿದೆ.
ಆದ್ದರಿಂದ ಉಮ್ಮರ್ ಫಾರೂಕ್ ರವರ ವಿರುದ್ಧ ಸುಳ್ಳು ಕೇಸು ದಾಖಲಿಸಿರುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು. ಅಮಾಯಕರಾದ ಉಮ್ಮರ್ ಫಾರೂಕ್ ರವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ತಲ್ವಾರು ದಾಳಿಯ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಮುಸ್ಲಿಂ ಸಮಾಜ ಬಂಟ್ವಾಳ ಆಗ್ರಹಿಸಿದೆ.