Tuesday, April 15, 2025

ಸತ್ಯ | ನ್ಯಾಯ |ಧರ್ಮ

ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ, ಆಗ ವರದಿ ಒಪ್ಪಿ ಈಗ ವಿರೋಧಿಸುವುದು ಸರಿಯಲ್ಲ: ಜಯಪ್ರಕಾಶ್ ಹೆಗ್ಡೆ

“ಜಾತಿಗಣತಿ ವರದಿಯನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡ ಲಾಗಿದೆ. ಕಾಂತರಾಜ್‌ ಅವರು ಅಧ್ಯಕ್ಷರಾಗಿದ್ದಾಗ ಸಮೀಕ್ಷೆ ಮಾಡಿದ್ದು, ನಾವು ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಿದ್ದೇವೆ. ರಾಜಕೀಯ ಉದ್ದೇಶಕ್ಕಾಗಿ ಇದನ್ನು ವಿರೋಧಿಸುವುದು ಸರಿಯಲ್ಲ” ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ವರದಿ ಬಗ್ಗೆ ಸ್ಪಷ್ಟನೆ ಕೊಟ್ಟ ಅವರು ಇದು ಜಾತಿ ಗಣತಿ ಅಲ್ಲವೇ ಅಲ್ಲ. ಜಾತಿ ಎಂಬುದು ಈ ವರದಿಯ ಒಂದು ಅಂಶವಷ್ಟೇ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಒಟ್ಟು 54 ಪ್ರಶ್ನಾವಳಿಗಳಿಗೆ ಇದರಲ್ಲಿ ಉತ್ತರ ಪಡೆಯಲಾಗಿದೆ. ಸಮಾಜದ ಪ್ರತಿ ಜಾತಿಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಸಮೀಕ್ಷೆ ಆಗಿದೆ ಅಷ್ಟೇ. ಅದರ ಸಂಪೂರ್ಣ ವರದಿಯೇ ಇದು ಹೊರತು ಇದು ಜಾತಿ ಗಣತಿ ಅಲ್ಲ ಎಂದು ತಿಳಿಸಿದ್ದಾರೆ.

ಈಗ ಬಹಿರಂಗಗೊಂಡಿರುವ ಜಾತಿ ಲೆಕ್ಕಾಚಾರ ಸತ್ಯವೋ ಸುಳ್ಳೋ ನಾನು ಹೇಳಲಾರೆ. ಆದರೆ ವರದಿ ಸರಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ನೀಡಿ ವರದಿ ಮಾಡಲಾಗಿದೆ. ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ತರಬೇತಿ ಪಡೆದು ಸಮೀಕ್ಷೆ ಮಾಡಿದ್ದಾರೆ. ಈ ವರದಿ ಸಂಪೂರ್ಣ ವೈಜ್ಞಾನಿಕವಾಗಿದೆ” ಎಂದು ಪುನರುಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಿಲ್ಲ. ವರದಿಯನ್ನು ಮೊದಲು ನೋಡಿ, ಸಚಿವ ಸಂಪುಟದಲ್ಲಿ ಚರ್ಚೆಯಾಗಲಿ. ವರದಿ ಸಾರ್ವಜನಿಕಗೊಂಡ ಅನಂತರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಬಿಟ್ಟುಹೋದ ವಿಷಯಗಳನ್ನು ಸೇರಿಸಲೂ ಬಹುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ನನ್ನನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷನಾಗಿ ನೇಮಿಸಿದ್ದು ಬಿಜೆಪಿ ಸರಕಾರ. ಸಮಿತಿಯ ಎಲ್ಲ ಸದಸ್ಯರನ್ನು ನೇಮಿಸಿದ್ದು ಅದೇ ಸರಕಾರ. ಅದರ ಅವಧಿಯಲ್ಲೇ ಮಧ್ಯಂತರ ವರದಿ ಕೊಟ್ಟಿದ್ದೆವು. ಆಗ ಒಪ್ಪಿ ಈಗ ವಿರೋಧಿಸುವುದು ಸರಿಯಲ್ಲ. ದೊಡ್ಡ ಜಾತಿಗಳಿಗೆ ಆತಂಕ ಕಾಡಲು ಕಾರಣ ಇದೆ. ತಮ್ಮ ಜಾತಿಗಳ ಸಂಖ್ಯೆ ಜಾಸ್ತಿ ಇದೆ ಎಂದು ಎಲ್ಲರ ಅಭಿಪ್ರಾಯ ಇತ್ತು. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿದ ಬಳಿಕ ಸತ್ಯಾಂಶ ಬಯಲಾಗಲಿದೆ. ವಿರೋಧ ಪಕ್ಷಗಳು ವಿರೋಧಿಸಬಹುದು. ಆದರೆ ಜನರು ಈ ವರದಿಯನ್ನು ಒಪ್ಪುತ್ತಾರೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page