Home ಬೆಂಗಳೂರು ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು

ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು

0

ಬೆಂಗಳೂರು: ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಲಂಚದ ವಿಷಯವಾಗಿ “ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ” ಎಂಬ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ ವಿವಾದವೀಗ ರಾಜ್ಯಪಾಲರ ಅಂಗಳ ತಲುಪಿದೆ.ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಸಚಿವ ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು, ಭ್ರಷ್ಟಾಚಾರಕ್ಕೆ ಉತ್ತೇಜನದ ಆರೋಪ ಹೊರಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಗವರ್ನರ್​​ಗೆ ಇಮೇಲ್​​ ಮೂಲಕ ದೂರು ಸಲ್ಲಿಸಿದ್ದಾರೆ. ಸಚಿವರ ಈ ಹೇಳಿಕೆಯು ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದೆ. ಸಂವಿಧಾನದ ಪರಿಚ್ಛೇದ 14 (ಸಮಾನತೆಯ ಹಕ್ಕು) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ (Prevention of Corruption Act) ಸೆಕ್ಷನ್ 7, 8 ಮತ್ತು 12ರ (ಲಂಚ ಸ್ವೀಕಾರ, ನೀಡಿಕೆ ಹಾಗೂ ಪ್ರಚೋದನೆ) ಅಡಿಯಲ್ಲಿ ಈ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಚಿವ ಸ್ಥಾನದಿಂದ ಶಿವಲಿಂಗೇಗೌಡರನ್ನು ವಜಾಗೊಳಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಶಿವಲಿಂಗೇಗೌಡ ಹೇಳಿದ್ದೇನು?

ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಸಿರುವ ಸಚಿವ ಶಿವಲಿಂಗೇಗೌಡ, ನಾನೇನು ನೇರವಾಗಿ ಹಣ ಕೋಡೋಕೆ ಹೇಳಿದ್ನಾ? ಕೆಲಸ ಮಾಡಿಕೊಟ್ಟ ಅಧಿಕಾರಿಗಳನ್ನು ಗೌರವ ಯುತವಾಗಿ ಕಾಣಬೇಕು ಎಂದಿದ್ದೇನೆ ಅಷ್ಟೇ. ಯಾಕೆ ಇದನ್ನ ದೊಡ್ಡ ವಿಚಾರ ಮಾಡುತ್ತಿದ್ದಾರೆ? ರೈತರ ಸಮಸ್ಯೆ ಬಗ್ಗೆ ಯಾರು ಬರೆಯಲ್ಲ, ರಾಜ್ಯಪಾಲರಿಗೆ ಈ ಬಗ್ಗೆ ಹೇಳ್ತಾರಾ? ಅಲ್ಲಿ‌ ಅಧಿಕಾರಿಗಳು ಮತ್ತು ರೈತರ ನಡುವೆ ಘರ್ಷಣೆ ನಡೀತಾ ಇತ್ತು. ನಮ್ಮ‌ಮೇಲೆ‌ ಗಲಾಟೆ ಮಾಡುತ್ತಾರೆ ಅಂತ ಅಧಿಕಾರಿ‌ ಹೇಳಿದ್ದರು. ಹೀಗಾಗಿ ನಿಮ್ಮ ಕೆಲಸ ಆದ್ಮೇಲೆ ಗೌರವ ಕೊಡುವುದು ಧರ್ಮ ಎಂದು ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಮಾತನಾಡಿದ್ದ ಶಿವಲಿಂಗೇಗೌಡ, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

You cannot copy content of this page

Exit mobile version