Home ಬೆಂಗಳೂರು ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ ? ಕಾನೂನು ಬದ್ದವಾಗಿ ಚರ್ಚೆ ನಡೆಸಲಾಗುತ್ತಿದೆ – ಸಿಎಂ ಡಿಕೆ ಶಿವಕುಮಾರ್ 

ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ ? ಕಾನೂನು ಬದ್ದವಾಗಿ ಚರ್ಚೆ ನಡೆಸಲಾಗುತ್ತಿದೆ – ಸಿಎಂ ಡಿಕೆ ಶಿವಕುಮಾರ್ 

0

ಬೆಂಗಳೂರು: ಕೆಪಿಎಸ್‌ಸಿ (Kpsc) ನೇಮಕಾತಿ ಅಕ್ರಮಗಳ ತನಿಖೆಗೆ ಹೈಕೋರ್ಟ್‌ ವಿಶೇಷ ತನಿಖಾ ತಂಡ (SIT) ರಚಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (Cm Dk Shivakumar) ನೀಡಿರುವ ಹೇಳಿಕೆ ಇದೀಗ ಗಮನ ಸೆಳೆದಿದೆ. “ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ?” ಎಂಬ ಬಗ್ಗೆಯೂ ಕಾನೂನುಬದ್ಧವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕೆಪಿಎಸ್‌ಸಿ ವಿಚಾರವಾಗಿ ಹೈಕೋರ್ಟ್‌ SIT ರಚಿಸಿರುವುದಕ್ಕೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ರಾಜ್ಯದ ಪೊಲೀಸ್‌ ತನಿಖಾ ಸಂಸ್ಥೆಗಳು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದು, ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಜಾರಿ ನಿರ್ದೇಶನಾಲಯವೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ತನಿಖೆ ನಡೆಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್‌ ತನಿಖೆಯನ್ನು ಮಾನಿಟರ್ ಮಾಡಬಹುದು, ತನಿಖೆಯ ವರದಿಯನ್ನು ತರಿಸಿಕೊಳ್ಳಬಹುದು. ಆದರೆ ತನಿಖಾ ತಂಡದಲ್ಲಿ ಯಾರನ್ನು ನೇಮಿಸಬೇಕು, ಯಾರನ್ನು ಸೇರಿಸಬೇಕು ಎಂಬುದನ್ನು ಸರ್ಕಾರಕ್ಕೆ ಬಿಡಬೇಕೇ ಎಂಬ ವಿಚಾರ ಈಗ ಚರ್ಚೆಯಲ್ಲಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮಾತನಾಡಿದ ಅವರು, “ದೊಡ್ಡ ಕದೀಮರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಸಾಕಷ್ಟು ದಾಖಲೆಗಳು ಸಿಗುತ್ತಿವೆ” ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ವ್ಯವಸ್ಥೆಯನ್ನೇ ಮುಂದುವರಿಸಬೇಕೇ ಅಥವಾ ಬೇರೊಂದು ವ್ಯವಸ್ಥೆ ರೂಪಿಸಬೇಕೇ ಎಂಬ ಬಗ್ಗೆ ಕಾನೂನುಬದ್ಧವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಮಕ್ಕಳ ಭವಿಷ್ಯ ಮುಖ್ಯ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ನಾವು ನಂಬಿಕೆ ಇಟ್ಟು ಜವಾಬ್ದಾರಿ ನೀಡಿದವರು ಈ ರೀತಿಯ ಅಕ್ರಮಗಳಲ್ಲಿ ಭಾಗಿಯಾದರೆ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕಾಗುತ್ತದೆ” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ತಮ್ಮ ಹಿಂದಿನ ಅನುಭವವನ್ನೂ ಪ್ರಸ್ತಾಪಿಸಿದ ಅವರು, ತಾವು ಪವರ್‌ ಮಿನಿಸ್ಟರ್‌ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ನೀಡುವ ಪ್ರಕ್ರಿಯೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಕೆಪಿಎಸ್‌ಸಿ ನೇಮಕಾತಿ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಮರಳಿ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ನಡುವೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಸೇರಿದಂತೆ ಸಂಬಂಧಿತ ಪ್ರಕರಣಗಳ ತನಿಖೆಯನ್ನು ಈ ತಂಡ ನಡೆಸಲಿದ್ದು, 100 ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಗಡುವು ನೀಡಿದೆ. ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿರುವ ಸಂದರ್ಭದಲ್ಲೇ, ಸಂಸ್ಥೆಯ ಭವಿಷ್ಯದ ಬಗ್ಗೆಯೂ ಕಾನೂನುಬದ್ಧವಾಗಿ ಚರ್ಚೆ ನಡೆಸಲಾಗುತ್ತಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version