ನ್ಯೂಯಾರ್ಕ್: ನೊಬೆಲ್ ಶಾಂತಿ ಬಹುಮಾನಕ್ಕಾಗಿ ತೀವ್ರವಾಗಿ ಪ್ರಯತ್ನಿಸುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತ್ತೀಚೆಗೆ ನೇರವಾಗಿ ಬೆದರಿಕೆ ಹಾಕುವ ಮಟ್ಟಕ್ಕೆ ತಲುಪಿದ್ದಾರೆ. ತಮಗೆ ಶಾಂತಿ ನೊಬೆಲ್ ನೀಡದಿದ್ದರೆ, ಅದು ಅಮೆರಿಕಕ್ಕೆ ಮಾಡಿದ ತೀವ್ರ ಅವಮಾನ ಎಂದು ಅವರು ಹೇಳಿಕೆ ನೀಡಿದ್ದಾರೆ. ಪ್ರಪಂಚದಾದ್ಯಂತ ಏಳು ಸಶಸ್ತ್ರ ಸಂಘರ್ಷಗಳನ್ನು ನಿಲ್ಲಿಸಿದ ತನಗೆ ನೊಬೆಲ್ ಬಹುಮಾನ ನೀಡಲೇಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಗಾಜಾ ಯುದ್ಧಕ್ಕೆ ಅಂತ್ಯ ಹಾಡಲು ತಾವು ಸೋಮವಾರ ಪ್ರಸ್ತಾಪಿಸಿದ ಯೋಜನೆಯ ಬಗ್ಗೆ ಮಂಗಳವಾರ ಕ್ವಾಂಟಿಕೋದಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ ಟ್ರಂಪ್ ಮಾತನಾಡಿದರು.
“ನಾವು ಅದನ್ನು ಸಾಧಿಸಿದ್ದೇವೆ. ಸಮಸ್ಯೆ ಬಗೆಹರಿದಿದೆ ಎಂದು ನಾನು ಭಾವಿಸುತ್ತೇನೆ… ನೋಡಬೇಕು. ಇದನ್ನು ಹಮಾಸ್ ಒಪ್ಪಿಕೊಳ್ಳಲೇಬೇಕು (ಶಾಂತಿ ಯೋಜನೆ). ಇಲ್ಲದಿದ್ದರೆ ಅವರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಅರಬ್ ದೇಶಗಳು ಮತ್ತು ಮುಸ್ಲಿಂ ದೇಶಗಳು ಈ ಯೋಜನೆಯನ್ನು ಒಪ್ಪಿಕೊಂಡಿವೆ. ಇಸ್ರೇಲ್ ಕೂಡ ಒಪ್ಪಿಕೊಂಡಿದೆ. ಇದು ಅದ್ಭುತವಾದ ವಿಷಯ. ಪರಿಸ್ಥಿತಿ ತಿಳಿಯಾಗಿದೆ. ಇದು ಬಹಳ ಉತ್ತಮ ಬೆಳವಣಿಗೆ. ಇಂತಹ ಕೆಲಸವನ್ನು ಇಲ್ಲಿಯವರೆಗೆ ಯಾರೂ ಮಾಡಿಲ್ಲ. ಆದರೂ, ನನಗೆ ನೊಬೆಲ್ ಬಹುಮಾನ ನೀಡುತ್ತಾರೆಯೇ? ಖಂಡಿತಾ ನೀಡುವುದಿಲ್ಲ. ಇಂತಹ ಯಾವುದೇ ಕೆಲಸ ಮಾಡದ ಇನ್ನೊಬ್ಬ ವ್ಯಕ್ತಿಗೆ ನೀಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಆಲೋಚನೆಗಳ ಬಗ್ಗೆ ಪುಸ್ತಕ ಬರೆದು, ಯುದ್ಧವನ್ನು ಹೇಗೆ ನಿಲ್ಲಿಸಬೇಕೆಂದು ವಿವರಿಸುವ ಯಾವುದೋ ಒಬ್ಬ ವ್ಯಕ್ತಿಗೆ ನೊಬೆಲ್ ಕೊಡುತ್ತಾರೆ. ಏನಾಗುತ್ತದೆ ಎಂದು ನೋಡೋಣ.
ಯಾವುದೋ ಒಬ್ಬ ಪುಸ್ತಕದ ಲೇಖಕರಿಗೆ ನೊಬೆಲ್ ಶಾಂತಿ ಬಹುಮಾನ ನೀಡಿದರೆ, ಅದು ಅಮೆರಿಕಕ್ಕೆ ತೀವ್ರ ಅವಮಾನವಾಗುತ್ತದೆ. ಇದನ್ನು ನಾನು ಖಚಿತವಾಗಿ ಹೇಳಬಲ್ಲೆ. ನನಗೆ ಆ ಪ್ರಶಸ್ತಿ (ನೊಬೆಲ್) ಅಗತ್ಯವಿಲ್ಲ. ಆದರೆ ನಮ್ಮ ದೇಶ ಅದನ್ನು (ನೊಬೆಲ್) ಸಾಧಿಸಬೇಕು ಎಂದು ನಾನು ಬಯಸುತ್ತೇನೆ. ಗಾಜಾ ಸಂಘರ್ಷಕ್ಕೆ ಅಂತ್ಯ ಹಾಡುವ ಯೋಜನೆ ಜಾರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಸುಲಭವಾಗಿ ಹೇಳುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಂತಹ ಡೀಲ್‌ಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ನನ್ನ ಇಡೀ ಜೀವನ ಇಂತಹವುಗಳಲ್ಲೇ ಕಳೆದಿದೆ. ಅದರಲ್ಲಿ ಈ ಎಂಟು (ಗಾಜಾ ಸಂಘರ್ಷ ಸೇರಿ ಟ್ರಂಪ್ ನಿಲ್ಲಿಸಿದ್ದೇನೆ ಎಂದು ಹೇಳುವ ಯುದ್ಧಗಳು) ಶ್ರೇಷ್ಠ ವಿಷಯಗಳು,” ಎಂದು ಟ್ರಂಪ್ ಹೇಳಿದರು.