ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಪ್ರತಿಷ್ಠಿತ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ (Jadavpur University) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರ ನಡುವೆ ಭೀಕರ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸ್ಟೂಡೆಂಟ್ಸ್ ಯೂನಿಯನ್ (FETSU) ವತಿಯಿಂದ ಸರ್ವಸದಸ್ಯರ ಸಭೆ ಆಯೋಜಿಸಲಾಗಿತ್ತು. ಈ ಸಭೆಯ ವೇಳೆ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (DSF), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸೇರಿದಂತೆ ಎಡಪಂಥೀಯ ಸಂಘಟನೆಗಳು ಹಾಗೂ ಎಬಿವಿಪಿ ವಿದ್ಯಾರ್ಥಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ನಂತರ ಅದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಸಭೆಯ ಹೊರಗೆ ಜಮಾಯಿಸಿದ ಕಿಡಿಗೇಡಿಗಳು ಕಲ್ಲು, ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿವೆ. ಅಲ್ಲದೆ, ಕ್ಯಾಂಪಸ್‌ನ ಅರಬಿಂದೋ ಭವನದ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಎಸ್‌ಎಫ್‌ಐ ಹಾಗೂ ಡಿಎಸ್‌ಎಫ್ ಧ್ವಜಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರಿಂದ, ರಕ್ಷಣೆಗಾಗಿ ವಿದ್ಯಾರ್ಥಿಗಳು ರಾತ್ರಿಯಿಡೀ ಮುಖ್ಯ ಗೇಟ್‌ಗಳನ್ನು ಮುಚ್ಚಿ ಒಳಗೇ ಉಳಿಯಬೇಕಾಯಿತು ಎಂದು ದೂರಿದ್ದಾರೆ. ಈ ಘಟನೆಯಲ್ಲಿ ಎರಡೂ ಕಡೆಯ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ಎಬಿವಿಪಿ ಬಲವಾಗಿ ತಳ್ಳಿಹಾಕಿದ್ದು, ಕ್ಯಾಂಪಸ್‌ನಲ್ಲಿ ನಡೆದ ಗಲಭೆಗೆ ಎಡಪಂಥೀಯ ವಿದ್ಯಾರ್ಥಿಗಳೇ ನೇರ ಹೊಣೆ ಎಂದು ಆರೋಪಿಸಿದೆ. ಅಲ್ಲದೆ, ಈ ಕೃತ್ಯವನ್ನು ಖಂಡಿಸಿ ಗುರುವಾರ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ಘೋಷಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಜಾದವ್‌ಪುರ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
