ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ ಸಿ ಬಿ ಸತತ ಏಳು ಸೋಲುಗಳಿಂದ ಜರ್ಝರಿತಗೊಂಡು ಕಪ್ ಆಸೆಯನ್ನು ಸಂಪೂರ್ಣ ಕೈಚೆಲ್ಲಿದೆ. ಆದರೆ ಆರ್ ಸಿ ಬಿ ಯ ಈ ಸೋಲುಗಳು ನ್ಯಾಯಯುತವಾಗಿದ್ದವೇ? ಆರ್ ಸಿ ಬಿ ಅಷ್ಟು ಕಳಪೆ ತಂಡವೇ? ಅಂಪೈರಿಂಗ್ ನಲ್ಲಿ ಆರ್ ಸಿ ಬಿ ತಂಡಕ್ಕಾದ ಪದೇಪದೇ ಅನ್ಯಾಯಗಳು ಕೇವಲ ಕಾಕತಾಳೀಯವೇ ಅಥವಾ ವ್ಯವಸ್ಥಿತ ಹುನ್ನಾರದ ಭಾಗವೇ? ಐ ಪಿ ಎಲ್ ಎಂಬ ಕ್ರೀಡೆಯ ಹಿಂದೆಯೂ ರಾಜಕಾರಣ ಬೆಸೆದುಕೊಂಡಿದೆಯೇ? ಈ ಅನುಮಾನಗಳು ಆರ್ ಸಿ ಬಿ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಿವೆ.
ಹೌದು, ಐಪಿಎಲ್ ಇನ್ನರ್ ಸರ್ಕಲ್ ನಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಆರ್ ಸಿ ಬಿ ಯನ್ನು ಹೀಗೆ ಸತತವಾಗಿ ವಂಚಿಸಿ ಹೀನಾಯವಾಗಿ ಸೋಲಿಸಿ, ಪಂದ್ಯಾವಳಿಯಿಂದ ಹೊರಗಟ್ಟಬೇಕೆಂಬುದು ಬಿಸಿಸಿಐನ ಸೆಕ್ರೆಟರಿಯಾಗಿರುವ ಜಯ್ ಶಾ ನೀಡಿರುವ ಖಾಸಗಿ ಆದೇಶವಂತೆ. ಅದಕ್ಕಾಗಿಯೇ ಅಂಪೈರ್ ಗಳು, ಥರ್ಡ್ ಅಂಪೈರ್ ಗಳು, ಮ್ಯಾಚ್ ರೆಫರಿಗಳು ಆರ್ ಸಿ ಬಿ ವಿಚಾರದಲ್ಲಿ ಪ್ರಮಾದಕರ ತೀರ್ಪು ನೀಡುತ್ತಲೇ ಬಂದಿದ್ದಾರೆ. ಆರ್ ಸಿ ಬಿ ಗೆಲ್ಲಬಹುದಾಗಿದ್ದ ಮ್ಯಾಚಿನಲ್ಲೂ ಈ ತೀರ್ಪುಗಳ ಅದನ್ನು ಸೋಲಿಸಿ ಹೊರಗಟ್ಟಿವೆ. ಜಯ್ ಶಾ, ಅದೆಷ್ಟು ಕಟ್ಟುನಿಟ್ಟಾಗಿ ಈ ಫರ್ಮಾನು ಹೊರಡಿಸಿದ್ದಾನೆಂದರೆ, ಕೊನೆಗೆ ಟಾಸ್ ಆಯ್ಕೆಯಲ್ಲೂ ಲಕ್ಷಾಂತರ ಅಭಿಮಾನಿಗಳೆದುರಿಗೇ ಆರ್ ಸಿ ಬಿ ಗೆ ಮೋಸ ನಡೆಯುತ್ತದೆ!
ಜಯ್ ಶಾನ ಇಂಥಾ ಒಳರಾಜಕಾರಣಕ್ಕೆ ಬೇಸತ್ತೇ ಅವತ್ತು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಮೈದಾನದಲ್ಲೇ ಕಾಲುಕೆರೆದು ಜಗಳಕ್ಕೆ ಹೋದದ್ದು. ನೀವೇ ಯೋಚಿಸಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್ ತಿರುಚಲಾಯ್ತು, ಸ್ಪಷ್ಟ ನೋ ಬಾಲ್ ಇದ್ದರೂ ನೀಡಲಾಗಲಿಲ್ಲ. ಹೈದ್ರಾಬಾದ್ ವಿರುದ್ಧದ ಮ್ಯಾಚ್ ನಲ್ಲೂ ಇಂತದ್ದೇ ಮೋಸ. ಕೆಕೆಆರ್ ಮ್ಯಾಚಿನಲ್ಲಂತೂ ಇದು ವಿಪರೀತಕ್ಕೆ ಹೋಯ್ತು ಎನ್ನಬಹುದು. ಯಾಕೆಂದರೆ, ಆ ಪಂದ್ಯದಲ್ಲಿ ಗೆದ್ದಿದ್ದರೆ ಆರ್ ಸಿ ಬಿ ಮುಂದಿನ ಹಂತದ ಆಸೆ ಜೀವಂತವಾಗಿ ಉಳಿಯುತ್ತಿತ್ತು. ಯಾವ ಕಾರಣಕ್ಕೂ ಆರ್ ಸಿ ಬಿಗೆ ಅಂತಹ ಸಣ್ಣ ಅವಕಾಶವೂ ಸಿಗಬಾರದೆಂದು ನಿರ್ಧರಿಸಿದ್ದ ಜೈ ಶಾ ಹಠದಿಂದಾಗಿಯೇ ಇಡೀ ಮ್ಯಾಚಿನ ತುಂಬಾ ಅನ್ಯಾಯದ ತೀರ್ಪುಗಳು ಹೊರಬಂದವು.
ಕೊಹ್ಲಿ ಔಟ್ ಆದದ್ದು ಸ್ಪಷ್ಟ ನೋ ಬಾಲ್ ಆಗಿದ್ದರೂ ಅದನ್ನು ನೋಬಾಲ್ ಕೊಡಲಿಲ್ಲ. ಸೊಂಟದಿಂದ ಮೇಲ್ಮಟ್ಟಕ್ಕೆ ಬಾಲ್ ಇದ್ದದ್ದು ರಿಪ್ಲೇಯಲ್ಲಿ ಎದ್ದು ತೋರುತ್ತಿತ್ತು. ಕೊಹ್ಲಿಯ ಬ್ಯಾಕ್ ಫೂಟ್ ಸಹಾ ಸ್ಕ್ರೀಜ್ ನ ಗೆರೆಗೆ ಸನಿಹದಲ್ಲೇ ಇತ್ತು. ಅಷ್ಟಾದರು ಅದನ್ನು ಲೀಗಲ್ ಡೆಲಿವರಿ ಎಂದು ತೀರ್ಮಾನಿಸಿದ ಅಂಪೈರ್ ಗಳು ಕೊಹ್ಲಿಯನ್ನು ಔಟ್ ಮಾಡಿಸಿದರು. ಇನ್ನು ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಆರ್ ಸಿ ಬಿ ತಂಡದ ಆಟಗಾರ ಪ್ರಭುದೇಸಾಯ್ ಸ್ವೀಪ್ ಶಾಟ್ ನಲ್ಲಿ ದಂಡಿಸಿದಾಗ ಬಾಲ್ ಸೀದಾ, ಬೌಂಡರಿ ಲೈನ್ ನ ಗೆರೆಗೆ ಹೋಗಿ ತಾಕಿತು. ಇದನ್ನು ನಿಯಮಗಳ ಪ್ರಕಾರ ಸಿಕ್ಸರ್ ಎಂದು ಪರಿಗಣಿಸಬೇಕಾಗುತ್ತದೆ. ಆದರೆ ಅಂಪೈರ್ ರಿಪ್ಲೇಯ ಮೊರೆ ಹೋಗದೆ ಫೋರ್ ಎಂದು ಘೋಷಿಸಿದರು. ತಂಡಕ್ಕೆ ಎರಡು ರನ್ ಗಳು ಕಡಿಮೆಯಾದವು. ಕೊನೆಗೆ ವೀರಾವೇಷದ ಆಟದ ಹೊರತಾಗಿಯು ಆರ್ ಸಿ ಬಿ ಸೋತದ್ದು ಕೇವಲ ಒಂದು ರನ್ ನಿಂದ. ಅಕಸ್ಮಾತ್ ಅಂಪೈರ್ ಅದನ್ನು ಸಿಕ್ಸ್ ಎಂದು ಘೋಷಿಸಿದ್ದರೆ, ಆರ್ ಸಿ ಬಿ ಆ ಪಂದ್ಯ ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ಅಷ್ಟೆ ಏಕೆ, ವಿರಾಟ್ ಕೊಹ್ಲಿಯವರ ಅನ್ಯಾಯದ ಔಟ್ ತೀರ್ಪನ್ನು ಅಂಪೈರ್ ನೀಡದೆ ಹೋಗಿದ್ದರೆ ಮ್ಯಾಚ್ ನ ಗತಿಯೇ ಬದಲಾಗುವ ಸಾಧ್ಯತೆ ಇತ್ತು. ಆದರೆ ಇದ್ಯಾವುದಕ್ಕೂ ಅವಕಾಶವನ್ನೇ ಕೊಡಲಿಲ್ಲ.
ಇದೆಲ್ಲ ಕೇವಲ ಕಾಕತಾಳೀಯ ಎಂದು ನಂಬಲು ಸಾಧ್ಯವೇ? ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಚೇಸಿಂಗ್ ರನ್ ಕಲೆಹಾಕಿದ ದಾಖಲೆ ಸೃಷ್ಟಿಸಿದ ತಂಡವೊಂದು ಇಷ್ಟು ಹೀನಾಯವಾಗಿ ಟೂರ್ನಿಯಿಂದ ಹೊರಬೀಳುತ್ತದೆಂದರೆ, ಕಳಪೆ ಆಟ ಎನ್ನಲು ಕಾರಣವುಂಟೆ. ಇದೆಲ್ಲಾ ಅಮಿತ್ ಶಾನ ಮಗ ಜೈ ಶಾನ ಕರಾಮತ್ತು ಎಂಬ ಮಾತಿಗೆ ಪುಷ್ಠಿ ನೀಡುತ್ತವೆ.
ಜಯ್ ಶಾ ಗೆ ಆರ್ ಸಿ ಬಿ ಮೇಲೆ ಯಾಕಿಷ್ಟು ಜಿದ್ದು! ಇದಕ್ಕೆ ಎರಡು ಕಾರಣಗಳಿವೆ ಎನ್ನುತ್ತವೆ ಮೂಲಗಳು. ಮೊದಲನೆಯದ್ದು, ಜೈ ಶಾಗೆ ಕೊಹ್ಲಿ ಮೇಲೆ ಇರುವ ವೈಯಕ್ತಿಕ ದುಷ್ಮನಿ. ಎರಡನೆಯದ್ದು ಜೈ ಶಾ ತಂದೆ ಅಮಿತ್ ಶಾಗೆ ಕನ್ನಡಿಗರ ಮೇಲಿರುವ ಸೇಡು!
ಹೌದು, ನಂಬಲು ಸಂಕೀರ್ಣ ಎನಿಸಿದರೂ ಇದು ಸತ್ಯ! ಜೈ ಶಾಗೆ ಕ್ರಿಕೆಟ್ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗುವುದಿರಲಿ, ಸದಸ್ಯನಾಗುವುದಕ್ಕೂ ಅರ್ಹತೆಯಿಲ್ಲ. ಅಂತಹ ಯಾವ ಕ್ರಿಕೆಟ್ ಕೌಶಲ್ಯವಾಗಲಿ, ಸಾಧನೆಯಾಗಲಿ ಅಥವಾ ನೈಪುಣ್ಯತೆಯಾಗಲಿ ಆತನಿಗೆ ಇಲ್ಲ. ಕೇವಲ ತನ್ನ ತಂದೆಯ ಹೆಸರಿನ ಅಧಿಕಾರ ಪ್ರಭಾವ ಬಳಸಿ ಬಿಸಿಸಿಐ ಹೊಕ್ಕಿದ್ದಾನೆ. ಇದು ವಿರಾಟ್ ಕೊಹ್ಲಿಯೂ ಸೇರಿದಂತೆ ಅನೇಕ ಹಾಲಿ ಮತ್ತು ಮಾಜಿ ಕ್ರಿಕೆಟ್ ದಿಗ್ಗಜರ ಅಸಹನೆಗೆ ಕಾರಣವಾಗಿತ್ತು. ದಾದಾ ಎಂದೇ ಗುರುತಿಸಲ್ಪಡುವ ಸೌರವ್ ಗಂಗೂಲಿಗೆ ಎರಡನೇ ಸಲ ಬಿಸಿಸಿಐ ಅಧ್ಯಕ್ಷನಾಗುವ ಅವಕಾಶವಿದ್ದರೂ, ಈ ಜಯ್ ಶಾ ನ ಉಪಟಳ ತಾಳದೆ ಆಡಳಿತ ಮಂಡಳಿಯಿಂದಲೇ ನಿರ್ಗಮಿಸಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಐಸಿಸಿ ವರ್ಲ್ಡ್ ಕಪ್ ಭಾರತದಲ್ಲಿ ನಡೆದಾಗ, ಅದರ ಉದ್ಘಾಟನೆ ಪಂದ್ಯಕ್ಕಾಗಲಿ ಅಥವಾ ಫೈನಲ್ ಗಾಗಲಿ, 1983ರ ವರ್ಲ್ಡ್ ಕಪ್ ವಿಜೇತ ತಂಡದ ಕಫ್ತಾನ ಕಪಿಲ್ ದೇವ್ ಅವರನ್ನು ಜೈ ಶಾ ಉದ್ದೇಶಪೂರ್ವಕವಾಗಿ ಆಹ್ವಾನಿಸಿರಲಿಲ್ಲ. ಈ ಕುರಿತು ಆ ಮಾಜಿ ಆಟಗಾರ ನೋವಿನಿಂದ ತಮ್ಮ ಬೇಸರ ಹಂಚಿಕೊಂಡಿದ್ದುಂಟು. ಅರ್ಹತೆ ಇಲ್ಲದಿದ್ದರೂ ಬಿಸಿಸಿಐ ಹೊಕ್ಕು ಮೆರೆಯುತ್ತಿರುವ ಮತ್ತು ಹಿರಿಯ ಆಟಗಾರರನ್ನು ಅವಮಾನಿಸುವ ಜಯ್ ಶಾ ಬಗ್ಗೆ ಬಹಳಷ್ಟು ಕ್ರಿಕೆಟ್ ದಿಗ್ಗಜರಿಗೆ ಅಸಮಾಧಾನ ಇದೆ. ಆದರೆ ಅಮಿತ್ ಶಾ ಎಂಬ ದರ್ಪಿಷ್ಟ ರಾಜಕಾರಣಿಯ ಕಾರಣಕ್ಕೆ ಯಾರೂ ನೇರವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೆ. ಆದರೆ ಬಿಸಿರಕ್ತದ ಕೊಹ್ಲಿ ಇದಕ್ಕೆ ಹೊರತಾದವರು.
ಕ್ರಿಕೆಟ್ ನಲ್ಲಿ ತನ್ನ ತಂದೆಯ ರಾಜಕಾರಣದ ಐಡಿಯಾಲಜಿ ತಂದು ತುರುಕುವ ಜೈ ಶಾನ ಯತ್ನಗಳನ್ನು ಆಗಿಂದಾಗ್ಗೆ ಕೊಹ್ಲಿ ವಿರೋಧಿಸುತ್ತಲೇ ಬಂದಿದ್ದಾರೆ. ಕ್ರೀಡೆಗೆ ಧರ್ಮವಿಲ್ಲ. ಭಾರತದ ಮಟ್ಟಿಗೆ ಕ್ರಿಕೆಟ್ ಎನ್ನುವುದೇ ಒಂದು ಸ್ವತಂತ್ರ ಧರ್ಮದಂತಾಗಿದೆ. ಇಲ್ಲಿ ಇಡೀ ಭಾರತೀಯರು ಜಾತಿ, ಧರ್ಮಗಳ ಹಂಗು ಮರೆತು ಬೆರೆತು ಸಂಭ್ರಮಿಸುತ್ತಾರೆ. ಆದರೆ ಜೈ ಶಾ ಬಿಸಿಸಿಐ ಹೊಕ್ಕ ನಂತರ ತನ್ನ ತಂದೆಯ ಕೋಮುವಾದಿ ರಾಜಕಾರಣವನ್ನು ಇಲ್ಲಿಗೂ ಎಳೆತರುವ ಪ್ರಯತ್ನ ಮಾಡಿದ. ಆ ಕಾರಣಕ್ಕೇ ಮುಸ್ಲಿಂ ಆಟಗಾರರ ಮೇಲೆ ನಿಂದನೆ ದಾಳಿಗಳನ್ನು ಸಂಘಟಿಸಲಾಯ್ತು. 2021ರ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಸೋತಾಗ, ಅದನ್ನೇ ನೆಪ ಮಾಡಿಕೊಂಡ ಜಯ್ ಶಾನ ಸೋಷಿಯಲ್ ಮೀಡಿಯಾದ ಸೋಲ್ಜರ್ ಗಳು ಮಹಮದ್ ಶಮಿಯ ಧರ್ಮವನ್ನು ಆ ಸೋಲಿಗೆ ಥಳುಕು ಹಾಕಿ ಆತನ ಮೇಲೆ ಹೀನಾಯ ದಾಳಿ ಮಾಡಿದ್ದರು. ಇದು ಜಯ್ ಶಾ ಕುತಂತ್ರ ಎಂಬುದು ತಿಳಿಯುತ್ತಿದ್ದಂತೆಯೇ ಕೊಹ್ಲಿ, ಶಮಿ ಬೆಂಬಲಕ್ಕೆ ನಿಂತು “ನಾವು ಕ್ರಿಕೆಟಿಗರು, ಅಪ್ಪಟ ಭಾರತೀಯರು. ನಮಗೆ ಧರ್ಮ ಮುಖ್ಯವಲ್ಲ. ದೇಶ ಮುಖ್ಯ, ಕ್ರೀಡಾಮನೋಭಾವ ಮುಖ್ಯ. ಶಮಿಯ ಧರ್ಮವನ್ನು ಹಂಗಿಸುತ್ತಿರುವವರು ಬೆನ್ನುಮೂಳೆಯಿಲ್ಲದವರು” ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.
ಜೈಶಾಗೆ ಕೊಹ್ಲಿ ತಿರುಗೇಟು ನೀಡುತ್ತಾ ಬಂದ ಇಂತಹ ಹಲವು ನಿದರ್ಶನಗಳಿವೆ. ಅದೇ ಕಾರಣಕ್ಕೆ ಜೈಶಾಗೆ ಕೊಹ್ಲಿ ಮೇಲೆ ಸಿಟ್ಟು. ಕೊಹ್ಲಿಯನ್ನು ವೈಯಕ್ತಿಕವಾಗಿ ಮಟ್ಟಹಾಕಬೇಕೆಂದು ಆತ ಪ್ರಯತ್ನಪಟ್ಟಷ್ಟು ಕೊಹ್ಲಿ ತನ್ನ ಆಟದ ಸಾಮರ್ಥ್ಯದಿಂದ ಅದಕ್ಕೆ ಉತ್ತರ ನೀಡುತ್ತಾ ಬಂದಿದ್ದಾರೆ. ಈಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯನ್ನು ಆರಾಧಿಸುವ, ಅಭಿಮಾನಿಸುವ ಮತ್ತು ಅವರ ಅಸ್ಮಿತೆಯೊಂದಿಗೆ ಬೆಸೆದುಕೊಂಡ ಆರ್ ಸಿ ಬಿ ತಂಡವನ್ನು ಹೀನಾಯಗೊಳಿಸಿ, ಕೊಹ್ಲಿ ಮೇಲಿನ ತನ್ನ ಸಿಟ್ಟು ತೀರಿಸಿಕೊಳ್ಳಬೇಕೆಂಬುದು ಜೈ ಶಾ ಉದ್ದೇಶ. ಅದಕ್ಕೇ ಆರ್ ಸಿ ಬಿ ವಿರುದ್ಧ ಇಂತಹ ಅನ್ಯಾಯದ ತೀರ್ಪುಗಳು, ಮೋಸದಾಟಗಳು ನಡೆಯುತ್ತಿವೆ.
ಆರ್ ಸಿ ಬಿ ತಂಡವನ್ನು ಅವಮಾನಿಸಬೇಕೆಂಬುದು ಕೇವಲ ಜೈ ಶಾನ ತಿಕ್ಕುಲತನವಷ್ಟೇ ಆಗಿದ್ದರೆ, ಈ ಪರಿ ಹಗಲುವಂಚನೆ ಮಾಡಲು ಅಂಪೈರ್ ಗಳಿಗೆ, ಆಡಳಿತ ಮಂಡಳಿಗೆ ಧೈರ್ಯ ಬರುತ್ತಿರಲಿಲ್ಲವೇನೊ, ಆದರೆ ಇದರ ಹಿಂದೆ ಜೈ ಶಾನ ತಂದೆ ಅಮಿತ್ ಶಾನ ಹುಕುಂ ಕೂಡಾ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದ ಜನ ಅಮಿತ್ ಶಾನ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದು. ಆಗಿನಿಂದಲೂ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಎಲ್ಲಾ ಹಕ್ಕುಗಳಿಗೆ ಅಡ್ಡಿಗಾಲು ಹಾಕುತ್ತಲೇ ಬಂದಿರುವ ಮೋದಿ-ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ, ಆ ಚುನಾವಣಾ ಸೋಲಿಗೆ ಸೇಡು ತೀರಿಸಿಕೊಳ್ಳುವಂತೆ ವರ್ತಿಸುತ್ತಿದೆ. ಅನ್ನಬಾಗ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದ್ದು, ತೆರಿಗೆ ಹಂಚಿಕೆಯಲ್ಲಿ ವಂಚನೆ ಮಾಡಿದ್ದು, ಕರ್ನಾಟಕಕ್ಕೆ ಮಂಜೂರಾಗಿದ್ದ ಹಲವು ಯೋಜನೆಗಳನ್ನು ವಾಪಾಸ್ ತೆಗೆದುಕೊಂಡಿದ್ದು, ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯದ ಪರವಾಗಿ ನಿಲ್ಲದಿದ್ದು, ಬರ ಪರಿಹಾರದ ಮನವಿಗೆ ಪುರಸ್ಕಾರ ನೀಡದೇ ಇದ್ದದ್ದು, ಮಹಾದಾಯಿ ಯೋಜನೆಗೆ ಅಡ್ಡಗಾಲು ಹಾಕಿದ್ದು…. ಅಷ್ಟೇ ಏಕೆ? ತಮ್ಮದೇ ಪಕ್ಷದ ಕರ್ನಾಟಕ ಘಟಕಕ್ಕೆ ನೂತನ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವುದಕ್ಕೂ ಸತಾಯಿಸುತ್ತಲೇ ಬಂದರು.
ಈ ಸಲದ ಐಪಿಎಲ್ ಪಂದ್ಯಾವಳಿಯಲ್ಲಿ ಅಕಸ್ಮಾತ್ ಆರ್ ಸಿ ಬಿ ಗೆದ್ದರೆ ಅದು ಸಮಸ್ತ ಕನ್ನಡಿಗ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗುತ್ತದೆ. ಅಸೆಂಬ್ಲಿ ಸೋಲಿನ ಕಾರಣಕ್ಕೆ ಕನ್ನಡಿಗರನ್ನು ದ್ವೇಷಿಸುತ್ತಿರುವ ಅಮಿತ್ ಶಾಗೆ ಕನ್ನಡಿಗರ ಸಂಭ್ರಮವನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ. ಹೇಗಾದರೂ ಮಾಡಿ, ಆರ್ ಸಿ ಬಿ ಹೀನಾಯವಾಗಿ ಸೋಲುವಂತೆ ಮಾಡಿ, ಕರ್ನಾಟಕದ ಅಭಿಮಾನಿಗಳು ಪರಿತಪಿಸುವಂತೆ ಮಾಡಿ ಸೇಡು ತೀರಿಸಿಕೊಳ್ಳುವ ಅಮಿತ್ ಶಾ ಯೋಚನೆಯೂ ಜೈ ಶಾನ ಜಿದ್ದಿಗೆ ಸಾಥ್ ನೀಡಿರುವುದರಿಂದಲೇ ಆರ್ ಸಿ ಬಿ.ಗೆ ಇಡೀ ಪಂದ್ಯಾವಳಿಯಲ್ಲಿ ಹೀಗೆ ಸಾಲುಸಾಲು ಅನ್ಯಾಯವಾಗಲು ಕಾರಣ. ಚಿನ್ನಸ್ವಾಮಿ ಅಂಗಳದ ಆಡಳಿತ ಮಂಡಳಿಯ ಆವಳರಣದೊಳಗೆ ಕಾಲಿಟ್ಟರೆ ಇದೇ ಚರ್ಚೆಗಳು ಕಿವಿಗಪ್ಪಳಿಸುತ್ತವೆ.
ಕ್ರಿಕೆಟ್ ಎಂದರೆ ಅನ್ನನೀರು ಬಿಟ್ಟು ಅಭಿಮಾನಿಸುವ ಕಾಲವೊಂದಿತ್ತು. ಕಪಿಲ್, ಸಚಿನ್, ಅಝರುದ್ದೀನ್, ಗವಾಸ್ಕರ್ ಥರದವರನ್ನು ದೇವರೆಂದು ಪೂಜಿಸುವ ಅಭಿಮಾನಿಗಳೂ ಇದ್ದರು. ಈಗಲೂ ಇದ್ದಾರೆ. ಕೊಹ್ಲಿ, ಧೋನಿ ತರಹದ ಸ್ಟಾರ್ ಆಟಗಾರರ ಬೆನ್ನಿಗೆ ನಿಂತಿರುವ ಅಭಿಮಾನಿಗಳ ಪಡೆಯೇ ಇದಕ್ಕೆ ಸಾಕ್ಷಿ. ಆದರೆ ಇಂತಹ ಯಾವ ಸಾಧನೆ, ಸಾಮರ್ಥ್ಯ, ಅರ್ಹತೆಯಿಲ್ಲದೆ ಕ್ರಿಕೆಟ್ ಮಂಡಳಿ ಹೊಕ್ಕ ಜೈ ಶಾ ಮತ್ತು ಅವನ ತಂದೆ ಅಮಿತ್ ಶಾನ ಸೇಡಿನ ರಾಜಕಾರಣಕ್ಕೆ ಕ್ರಿಕೆಟ್ ತನ್ನ ಘನತೆಯನ್ನು ಕಳೆದುಕೊಂಡು ಜೂಜಿನ, ಬೆಟ್ಟಿಂಗ್ ನ ಸಾಧನವಾಗಿ ಹಲವರ ಜೀವವನ್ನೇ ಬಲಿತೆಗೆದುಕೊಳ್ಳಲಾರಂಭಿಸಿದೆ. ಈ ಸಲ ಆರ್ ಸಿ ಬಿ ಗೆ ಆದ ಗತಿ ಮುಂದಿನ ಸಲ ಮತ್ತ್ಯಾವ ತಂಡಕ್ಕೆ ಕಾದಿದೆಯೋ? ಹೀಗೇ ಮುಂದುವರೆದರೆ ಕ್ರೀಡೆಯ ಘನತೆ ಉಳಿಯುವುದಾದರು ಹೇಗೆ?
ಆದಷ್ಟು ಬೇಗ ಜೈ ಶಾ ಎಂಬ ಕ್ರೀಡಾಪೀಡಕನನ್ನು ಕ್ರಿಕೆಟ್ ಅಂಗಳದಿಂದಲೇ ಹೊರದಬ್ಬಬೇಕು. ಇದಕ್ಕೆ ಆರ್ ಸಿ ಬಿ ಅಭಿಮಾನಿಗಳಿಂದಲೇ ಚಾಲನೆ ಸಿಗಬೇಕು…
– ಮಾಚಯ್ಯ ಎಂ ಹಿಪ್ಪರಗಿ